

ಮಂಗಳೂರು: ಎಮ್ಮೆಕೆರೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 24.94 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಅಂತಾರಾಷ್ಟ್ರೀಯ ಈಜುಕೊಳವನ್ನು ನ.24ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟಿಸಲಿದ್ದು, ಅಗತ್ಯ ಸಿದ್ಧತೆಗಳನ್ನು ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸ್ಮಾರ್ಟ್ ಸಿಟಿಯಡಿ ನಿರ್ಮಾಣವಾಗಿರುವ ಈಜುಕೊಳ ಉದ್ಘಾಟನೆ ಹಾಗೂ ಕರಾವಳಿ ಉತ್ಸವ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನ.24ರಿಂದ 26ರವರೆಗೆ ಈಜುಕೊಳದಲ್ಲಿ 19ನೇ ರಾಷ್ಟ್ರೀಯ ಮಾಸ್ಟರ್ಸ್ ಚಾಂಪಿಯನ್‌ಶಿಪ್ಸ್ 2023 ನಡೆಯಲಿದೆ. ಹಾಗಾಗಿ ಅ.24ರಂದೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಉಸ್ತುವಾರಿ ಸಚಿವರು ಹೇಳಿದರು.
ನ.4ರಂದು ಸ್ಥಳೀಯರ ಭೇಟಿ: ಈಜುಕೊಳ ನಿರ್ಮಾಣವಾದ ಸ್ಥಳ ಸ್ಥಳೀಯರ ಆಟದ ಮೈದಾನವಾಗಿ ಬಳಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಈಜುಕೊಳ ನಿರ್ಮಾಣಕ್ಕೆ ಇಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಬಳಿಕ ಊರವರನ್ನು ವಿಶ್ವಾಸಕ್ಕೆ ಪಡೆದು ಕೆಲವೊಂದು ಬೇಡಿಕೆಗಳ ಈಡೇರಿಸುವ ಭರವಸೆಯೊಂದಿಗೆ ಈಜುಕೊಳ ನಿರ್ಮಾಣವಾಗಿದೆ. ಹಾಗಾಗಿ ಮುಖ್ಯಮಂತ್ರಿಯವರು ಉದ್ಘಾಟನೆ ಮಾಡುವ ಮೊದಲು ಸ್ಥಳೀಯರ ಬೇಡಿಕೆಯನ್ನು ಪರಿಗಣಿಸಬೇಕಾಗಿದೆ ಎಂದು ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಸಭೆಯ ಗಮನ ಸೆಳೆದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಜನರ ಜತೆ ನಾನೂ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ನ.4ರಂದು ಭೇಟಿ ನೀಡಿ ಮಾತನಾಡುವ. ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯುವುದು ಅತೀ ಮುಖ್ಯ ಎಂದು ಸಚಿವರು ಹೇಳಿದರು.
ಈಜುಕೊಳದ ನೀರಿನ ಗುಣಮಟ್ಟ ಸೇರಿದಂತೆ ಮೂರು ವರ್ಷಗಳ ಕಾಲ ಈಜುಕೊಳವನ್ನು ನಿರ್ಮಾಣ ಮಾಡಿದ ಗುತ್ತಿಗೆದಾರರೇ ನಿರ್ವಹಣೆ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು. ಈಜುಕೊಳದ ಕುರಿತಂತೆ ಸ್ಮಾರ್ಟ್ ಸಿಟಿ ಅಧಿಕಾರಿ ಅರುಣ ಪ್ರಭಾ, ಮುಡಾದ ಮಾಜಿ ಅಧ್ಯಕ್ಷ ತೇಜೋಮಯ ಮಾಹಿತಿ ನೀಡಿದರು.
ನ.24ರಂದು ಮುಖ್ಯಮಂತ್ರಿ ಭೇಟಿಯ ಸಂದರ್ಭ ಈಗಾಗಲೇ ನಿರ್ಮಾಣಗೊಂಡಿರುವ ಕದ್ರಿ ಮಾರುಕಟ್ಟೆ ಸೇರಿದಂತೆ ಇತರ ಯೋಜನೆಗಳ ಉದ್ಘಾಟನೆ ಅಥವಾ ಗುದ್ದಲಿ ಪೂಜೆ ಇದ್ದರೆ ಕ್ರೋಢೀಕರಿಸಿಕೊಂಡು ಸಿದ್ಧತೆ ನಡೆಸುವಂತೆಯೂ ಸಚಿವರು ಸಲಹೆ ನೀಡಿದರು.
ಕರಾವಳಿ ಉತ್ಸವ ಶೀಘ್ರ ಪ್ರಸ್ತಾವನೆ ಸಲ್ಲಿಸಲು ಸೂಚನೆ
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿರುವ ಕರಾವಳಿ ಉತ್ಸವವನ್ನು ಈ ಬಾರಿ ಪುನರಾರಂಭಿಸಲು ನಿರ್ಧರಿಸಲಾಗಿದ್ದು, ಉತ್ಸವಕ್ಕೆ ತಗಲುವ ಅಂದಾಜು ವೆಚ್ಚ ಸೇರಿದಂತೆ ಪ್ರಸ್ತಾವನೆಯನ್ನು ಶೀಘ್ರವೇ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದರು.
ಡಿ. 22ರಿಂದ ಡಿ. 31ರವರೆಗೆ 10 ದಿನಗಳ ಕಾಲ ವಿಭಿನ್ನ ಕಾರ್ಯಕ್ರಮಗಳೊಂದಿಗೆ ಕರಾವಳಿ ಉತ್ಸವ ನಡೆಸಲು ಈಗಾಗಲೇ ನಡೆದಿರುವ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ಕರಾವಳಿ ಉತ್ಸವದಲ್ಲಿ ಬೀಚ್ ಗಾಳಿಪಟ ಉತ್ಸವ ಮೊದಲಾದ ಕಾರ್ಯಕ್ರಮಗಳನ್ನು ನಡೆಸುವುದರಿಂದ ಅಗತ್ಯ ತಯಾರಿ, ಟೆಂಡರ್‌ಗೆ ಕಾಲಾವಕಾಶದ ಅಗತ್ಯವಿದೆ ಎಂದು ಕರಾವಳಿ ಉತ್ಸವ ಸಮಿತಿಯ ಸದಸ್ಯರಾದ ಮಂಜುನಾಥ್ ಅವರು ಹೇಳಿದಾಗ, ಉತ್ಸವಕ್ಕೆ ಅಗತ್ಯ ಅನುದಾನದ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ ಬಳಿಕ ಅಲ್ಲಿಂದ ಹಸಿರು ನಿಶಾನೆ ದೊರೆತಾಕ್ಷಣ ವಿವಿಧ ಕಾರ್ಯಕ್ರಮಗಳಿಗೆ ಸಂಬಂಧಿಸಿ ತಜ್ಞರೊಂದಿಗೆ ಸಮಾಲೋಚಿಸಿ ಕ್ರಮ ವಹಿಸಿ ಎಂದು ಸಚಿವರು ಸಲಹೆ ನೀಡಿದರು.
ಮೇಯರ್ ಸುಧೀರ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಕಾರಿ ಡಾ. ಆನಂದ್ ಕೆ, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್, ಮನಪಾ ಆಯುಕ್ತ ಆನಂದ್ ಸಿ.ಎಲ್ ಮೊದಲಾದವರು ಉಪಸ್ಥಿತರಿದ್ದರು.