

ವಾಷಿಂಗ್ಟನ್: ಅಮೆರಿಕದ 47ನೇ ಆಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪದಗ್ರಹಣ ಮಾಡಿದ್ದು, ತಕ್ಷಣವೇ ಕಾರ್ಯಕಾರಿ ನಿರ್ಧಾರಗಳ ರಾಫ್ಟ್ಅನ್ನು ಘೋಷಿಸಿದ್ದಾರೆ. ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್ ಹಿಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಜಾನ್ ರಾಬರ್ಟ್ಸ್ ಅವರು ಪ್ರಮಾಣ ವಚನ ಬೋಧಿಸಿದರು. ಈ ಕಾರ್ಯಕ್ರಮವು ಹಲವು ಮೊದಲುಗಳಿಗೆ ಸಾಕ್ಷಿಯಾಯಿತು.
ಟ್ರಂಪ್ ಪದಗ್ರಹಣ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷ ಜೋ ಬೈಡನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಎಲಾನ್ ಮಸ್ಕ್, ಭಾರತ ಸರ್ಕಾರದ ವಿದೇಶಾಂಗ ಸಚಿವ ಜೈಶಂಕರ್, ಉದ್ಯಮಿ ಮುಕೇಶ್ ಅಂಬಾನಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಟ್ರಂಪ್ ಪದಗ್ರಹಣ ಸಮಾರಂಭದಲ್ಲಿ ಎಲಾನ್ ಮಸ್ಕ್ (Elon Musk) ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದು, ಇದಕ್ಕೆ ಸಂಭ್ರಮಿಸಿದ ವಿಡಿಯೋ ವೈರಲ್ ಆಗಿದೆ.
ಟ್ರಂಪ್ ಪದಗ್ರಹಣ ಸಮಾರಂಭಕ್ಕೂ ಮುನ್ನ ನಡೆದ ರ್ಯಾಲಿಯಲ್ಲಿ ಎಲಾನ್ ಮಸ್ಕ್ ಕುಣಿದು ಕುಪ್ಪಳಿಸಿದ್ದಾರೆ. ಬಿಗಿಮುಷ್ಟಿ ಹಿಡಿದು ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಮಸ್ಕ್ ನೋಡಿ ನೆರೆದಿದ್ದ ಜನ ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ. ಬಳಿಕ ಮಾತನಾಡಿದ ಮಸ್ಕ್ ಟ್ರಂಪ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇದು ಸಾಮಾನ್ಯ ವಿಜಯವಲ್ಲ. ಚುನಾವಣೆ ನಡೆಯುತ್ತಲೇ ಇರುತ್ತದೆ. ಆದರೆ ಈ ಜಯ ಮಾನವ ನಾಗರಿಕತೆಯಲ್ಲಿ ಹೊಸ ದಾರಿ ಸೃಷ್ಟಿಸಿದೆ. ಇದನ್ನು ಸಾಧ್ಯವಾಗಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಅಮೆರಿಕದ ಗಗನಯಾತ್ರಿಗಳು ಮೊದಲ ಬಾರಿಗೆ ಮತ್ತೊಂದು ಗ್ರಹದಲ್ಲಿ ಧ್ವಜವನ್ನು ಹಾರಿಸುವುದು ಎಂದರೆ ನಿಜಕ್ಕೂ ಅದ್ಭುತ ವಿಚಾರವಾಗಿದೆ. ಮಂಗಳಗ್ರಹಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ವಿಚಾರವನ್ನು ಪ್ರಸ್ತಾಪಿಸಿ ಟ್ರಂಪ್ಗೆ ಧನ್ಯವಾದಗಳನ್ನು ಹೇಳಿದ್ದಾರೆ.