

Starlink Launch: ಪ್ರಸ್ತುತ, ಭಾರತೀಯ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆಯಲು ಎದುರುನೋಡುತ್ತಿರುವ ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನೇತೃತ್ವದ ಸ್ಟಾರ್ಲಿಂಕ್, ಇನ್ನೂ ಕೆಲವೇ ದಿನಗಳಲ್ಲಿ ಭಾರತಕ್ಕೆ ಅಧಿಕೃತವಾಗಿ ಲಗ್ಗೆ ಇಡಲಿದೆ.
ದೇಶೀಯ ಮಾರುಕಟ್ಟೆಯಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಸೇವೆ ಲಭ್ಯತೆಗೆ ಮುಂದಾಗಿರುವ ಮಸ್ಕ್, ಭಾರತೀಯ ಇಂಟರ್ನೆಟ್ ಬಳಕೆದಾರರಿಗೆ ಈ ಸ್ಯಾಟಲೈಟ್ ಇಂಟರ್ನೆಟ್ ಸೇವೆಯನ್ನು ಸ್ಟಾರ್ಲಿಂಕ್ ಮೂಲಕ ನೀಡಲು ಸಜ್ಜಾಗಿದ್ದಾರೆ. ಆದಾಗ್ಯೂ, ಈ ಇಂಟರ್ನೆಟ್ ಸೇವೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರದಿಂದ ಎಲ್ಲಾ ಅನುಮತಿಗಳನ್ನು ಪಡೆಯಬೇಕಿದ್ದು, ಅದರ ಕೆಲಸಗಳಲ್ಲಿ ಸದ್ಯ ಮಸ್ಕ್ ಸಖತ್ ಬಿಜಿಯಾಗಿದ್ದಾರೆ.
ಬಹುತೇಕ ಎಲ್ಲವನ್ನೂ (ಸ್ಟಾರ್ಲಿಂಕ್ ಲಾಂಚ್ ದಿನಾಂಕ) ಅನುಮೋದಿಸಲಾಗಿದ್ದೇ ಆದರೂ, ಇನ್ನೂ ಕೆಲವು ಔಪಚಾರಿಕತೆಗಳು ಬಾಕಿ ಉಳಿದಿವೆ. ಸ್ಟಾರ್ಲಿಂಕ್ ಸೇವೆಯು ಭಾರತೀಯ ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲಿದೆ ಎಂಬ ಹೊಸ ಅಲೆ ಈಗಾಗಲೇ ಟೆಲಿಕಾಂ ಕ್ಷೇತ್ರಗಳಲ್ಲಿ ಜೋರಾಗಿದೆ. ಇದಲ್ಲದೆ, ಸ್ಥಿರ ನೆಟ್ವರ್ಕ್ಗಾಗಿ ಹೆಣಗಾಡುತ್ತಿರುವ ಎಲ್ಲಾ ದೂರದ ಪ್ರದೇಶಗಳಿಗೆ ಈ ಇಂಟರ್ನೆಟ್ ಸೇವೆ ತಲುಪಲಿದ್ದು, ಹಳ್ಳಿಗಾಡು ಪ್ರದೇಶಗಳ ಜನರಿಗೆ ವೇಗದಲ್ಲಿ ನೆಟ್ವರ್ಕ್ ಪೂರೈಕೆ ಮಾಡಲಿದೆ ಎಂದು ಹೇಳಲಾಗಿದೆ.
ಸ್ಟಾರ್ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಬಳಕೆದಾರರಿಗೆ 25Mbps ಮತ್ತು 225 Mbps ನಡುವಿನ ವೇಗವನ್ನು ನೀಡುವ ನಿರೀಕ್ಷೆಯಿದೆ. ಆರಂಭಿಕ ಹಂತದ ಯೋಜನೆಯು 25 ಮೆಗಾ ಬಿಟ್ಸ್ ಪರ್ ಸೆಕೆಂಡ್ ಅನ್ನು ನೀಡುವ ನಿರೀಕ್ಷೆಯಿದೆ. ಉನ್ನತ-ಮಟ್ಟದ ಯೋಜನೆಯು ಮೂಲ ಯೋಜನೆಗಿಂತ ಕೊಂಚ ದುಬಾರಿಯಾಗಿರಬಹುದು.
ಇಲ್ಲಿಯವರೆಗೆ, ಸ್ಟಾರ್ಲಿಂಕ್ ಈ ಕುರಿತಂತೆ ಯಾವುದೇ ವಿವರಗಳನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ಲಭ್ಯತೆಯ ವಿಷಯದಲ್ಲಿ, ಎಲಾನ್ ಮಸ್ಕ್ ಈಗಾಗಲೇ ಲಭ್ಯವಿರುವ ಇಂಟರ್ನೆಟ್ ಸೇವೆಯ ಜೊತೆಗೆ, ಭಾರತೀಯ ಮಾರುಕಟ್ಟೆಯಲ್ಲಿ ಉಪಗ್ರಹ ಇಂಟರ್ನೆಟ್ ಸೇವೆಯನ್ನು ಕೇವಲ 2 ಲಕ್ಷ ಚಂದಾದಾರರಿಗೆ ಮಾತ್ರ ಸೀಮಿತಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಸ್ಟಾರ್ಲಿಂಕ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಇಂಟರ್ನೆಟ್ ಸೇವೆಗಳನ್ನು ನಿರ್ವಹಿಸಲು ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಪಡೆಯುವ ಕೆಲಸದಲ್ಲಿದೆ. ಈಗ, (SATCOM) ಗೇಟ್ವೇಗಳನ್ನು ಅನುಮೋದಿಸಬೇಕಾಗಿದೆ. ಅಗತ್ಯವಿರುವ ಸ್ಪೆಕ್ಟ್ರಮ್ ಪಡೆಯುವುದು ಮತ್ತು ಪರವಾನಗಿ ಪಡೆಯುವುದು ಮಾತ್ರ ಬಾಕಿಯಿದೆ. ಇದೆಲ್ಲವೂ 2025ರ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಸ್ಟಾರ್ಲಿಂಕ್ ಉಪಗ್ರಹ ಇಂಟರ್ನೆಟ್ ಜನವರಿ 2026ರ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ ಎಂಬ ದೊಡ್ಡ ನಿರೀಕ್ಷೆಗಳಿವೆ.
ಸ್ಟಾರ್ಲಿಂಕ್ ಈಗಾಗಲೇ 100ಕ್ಕೂ ಹೆಚ್ಚು ದೇಶಗಳಿಗೆ ಉಪಗ್ರಹ ಇಂಟರ್ನೆಟ್ ಸೇವೆಗಳನ್ನು ಪೂರೈಕೆ ಮಾಡುತ್ತಿದೆ. ಇದು ಬಾಂಗ್ಲಾದೇಶದಲ್ಲಿ ಉಪಗ್ರಹ ಡೇಟಾ ಸೇವೆಗಳನ್ನು ಸಹ ಪ್ರಾರಂಭಿಸಿದೆ. ಹಾರ್ಡ್ವೇರ್ ಡೇಟಾ ರಿಸೀವರ್ ಬೆಲೆ 33,000 ರೂ ಇದ್ದರೆ, ಮಾಸಿಕ ಯೋಜನೆಯ ದರಗಳು 3,300 ರೂ.ನಿಂದ ಪ್ರಾರಂಭವಾಗುತ್ತವೆ ಎಂದು ವರದಿಗಳು ಉಲ್ಲೇಖಿಸಿವೆ.
ಸ್ಟಾರ್ಲಿಂಕ್ ಪ್ರಸ್ತುತ ಜಪಾನ್, ಮಲೇಷ್ಯಾ, ಇಂಡೋನೇಷ್ಯಾ, ಫಿಲಿಪೈನ್ಸ್, ಭೂತಾನ್ ಮತ್ತು ಬಾಂಗ್ಲಾದೇಶದಂತಹ ಆಯ್ದ ಏಷ್ಯಾ ದೇಶಗಳಲ್ಲಿ ತನ್ನ ಡೇಟಾ ಸೇವೆಗಳನ್ನು ಒದಗಿಸುತ್ತಿದೆ. ಆದಾಗ್ಯೂ, ಮೂಲ ಯೋಜನೆಗಳು ಮಾರುಕಟ್ಟೆಯನ್ನು ಅವಲಂಬಿಸಿ 4,000 ರೂ.ನಿಂದ 6,000 ರೂ. ವರೆಗೆ ದರವನ್ನು ಹೊಂದಿದೆ,(ಏಜೆನ್ಸೀಸ್).