1 ಮನೆ 30 ವಿದ್ಯುತ್​ ಮೀಟರ್​: 2 ವರ್ಷದಿಂದ ಬಿಲ್​ ಸಹ ಕಟ್ತಿದ್ದ, ಆತನ ಪ್ಲಾನ್​ ಕೇಳಿ ಪೊಲೀಸರೇ ದಂಗು! Electricity Meters Scam

Electricity Meters Scam
Published on

Electricity Meters Scam : ವಂಚಕರು ಜನರಿಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡಲು ಹೊಸ ಹೊಸ ದಾರಿಗಳನ್ನು ಹುಡುಕೊಳ್ಳುತ್ತಿದ್ದಾರೆ. ಸರಿಯಾದ ಪ್ಲಾನ್​ ಮಾಡಿಕೊಂಡು ವಂಚನೆಗಳನ್ನು ಎಸಗುತ್ತಿದ್ದಾರೆ. ಇಲ್ಲೊಬ್ಬ ವಂಚಕ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿಕೊಳ್ಳಲು ಹಾಕಿದ ಪ್ಲಾನ್​ ಹೇಗಿತ್ತು ಅಂದರೆ, ನೆಟ್‌ಫ್ಲಿಕ್ಸ್ ವೆಬ್ ಸರಣಿಯನ್ನೂ ಮೀರಿಸುವಂತಿತ್ತು. ಆತನ ಪ್ಲಾನ್​ ನೋಡಿ ಪೊಲೀಸರು ಕೂಡ ಒಂದು ಕ್ಷಣ ದಿಗ್ಭ್ರಮೆಗೆ ಒಳಗಾದರು.

ಆತ ಏನು ಮಾಡಿದ ಗೊತ್ತಾ? ಒಂದೇ ಬಾರಿಗೆ 30 ವಿದ್ಯುತ್ ಮೀಟರ್‌ಗಳನ್ನು ಖರೀದಿಸಿದನು. ಅಲ್ಲದೆ, ಪ್ರತಿ ತಿಂಗಳು ಅವುಗಳಿಗೆ ಕನಿಷ್ಠ ಬಿಲ್‌ಗಳನ್ನು ಸಹ ಪಾವತಿಸುತ್ತಿದ್ದನು. ಸರ್ಕಾರಿ ಭೂಮಿಯನ್ನು ವಶಪಡಿಸಿಕೊಳ್ಳಲು ಮತ್ತು ಆ ಮೀಟರ್‌ಗಳನ್ನು ಬಳಸಿಕೊಂಡು ಅದನ್ನು ಸಕ್ರಮಗೊಳಿಸಲು ಒಂದು ಪ್ಲಾನ್​ ಮಾಡಿಕೊಂಡಿದ್ದ ಎಂಬುದು ಇದೀಗ ಬಯಲಾಗಿದೆ.

ತೆಲಂಗಾಣದ ದುಂಡಿಗಲ್​ನಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಎರಡು ವರ್ಷಗಳ ಬಳಿಕ ವ್ಯಕ್ತಿಯ ಖತರ್ನಾಕ್​ ಸಂಚಿನ ಬಗ್ಗೆ ಗೊತ್ತಾದ ಕೂಡಲೇ ಪೊಲೀಸರು ಮತ್ತು ವಿದ್ಯುತ್ ಇಲಾಖೆ ಅಧಿಕಾರಿಗಳು ಆತನ‘ ಮನೆ ಮೇಲೆ ದಾಳಿ ಮಾಡಿ, ಮಹಾವಂಚನೆಯನ್ನು ಬಯಲು ಮಾಡಿದ್ದಾರೆ.

ವಿದ್ಯುತ್ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ, ವಿದ್ಯುತ್ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದುಂಡಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ವೇ ಸಂಖ್ಯೆ 454ರಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದರು. ಈ ವೇಳೆ ಮನೆಯಲ್ಲಿ 30 ವಿದ್ಯುತ್ ಮೀಟರ್‌ಗಳು ಪತ್ತೆಯಾಗಿವೆ. ಯಾವುದೇ ಮನೆ ಸಂಖ್ಯೆಗಳಿಲ್ಲದೆ ಕರೆಂಟ್ ಮೀಟರ್‌ಗಳಿಗೆ ಆತ ಪರವಾನಗಿಗಳನ್ನು ಪಡೆದಿದ್ದ. ಇದಲ್ಲದೆ, ಅವನು ಎರಡು ವರ್ಷಗಳಿಂದ ಅವುಗಳಿಗೆ ಬಿಲ್‌ಗಳನ್ನು ಸಹ ಪಾವತಿಸುತ್ತಿದ್ದಾನೆ.

ಸರ್ಕಾರಿ ಭೂಮಿಯನ್ನು ವಶಪಡಿಸಿಕೊಳ್ಳಲು ಮತ್ತು ಮೀಟರ್‌ಗಳ ಸಹಾಯದಿಂದ ಅದನ್ನು ಸಕ್ರಮಗೊಳಿಸಲು ಅವನು ಸಂಚು ರೂಪಿಸಿದ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಅಲ್ಲದೆ, ಈ ವಿಷಯದಲ್ಲಿ ವಿದ್ಯುತ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಿರುವುದು ಬಹಿರಂಗವಾಗಿದೆ.

ಹಣ ಪಡೆದು ಅಕ್ರಮವಾಗಿ ಮೀಟರ್‌ಗಳಿಗೆ ಅನುಮತಿ ನೀಡಿರುವುದು ಬಹಿರಂಗವಾಗಿದೆ. ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದ ವಿದ್ಯುತ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಉನ್ನತ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net