ವಿದ್ಯುತ್ ಬಿಲ್ ಪಾವತಿ ವಿನಾಯಿತಿ ಕೋರಿದವರಿಗೆ 50 ಸಾವಿರ ದಂಡ ವಿಧಿಸಿದ ಹೈಕೋರ್ಟ್

Highcourt
Published on

ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಶುಲ್ಕ ಪಾವತಿಯನ್ನು 3 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಮುಂದೂಡಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಪಿಐಎಲ್ ವಜಾಗೊಳಿಸಿರುವ ಹೈಕೋರ್ಟ್, ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.

ಬೆಂಗಳೂರು ನಿವಾಸಿಗಳಾದ ಪಿ.ಸಿ. ರಾವ್ ಹಾಗೂ ಕೆ. ಗಣೇಶ್ ನಾಯಕ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಅರ್ಜಿಯಲ್ಲಿನ ಅಂಶಗಳನ್ನು ಗಮನಿಸಿದ ನ್ಯಾಯಪೀಠ, ಲಾಕ್‌ಡೌನ್ ಇರುವ ಕಾರಣ, ಗ್ರಾಹಕರು ವಿದ್ಯುತ್ ಶುಲ್ಕೃ ಪಾವತಿಸಲು ಕಷ್ಟವಾಗುತ್ತಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಆದರೆ, ಹಲವು ವಿಧಾನಗಳ ಮೂಲಕ ಡಿಜಿಟಲ್ ಪಾವತಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಶುಲ್ಕ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಸರ್ಕಾರ ಹೇಳಿಲ್ಲ. ಆದ್ದರಿಂದ, ಅರ್ಜಿ ವಿಚಾರಣೆ ನಡೆಸುವುದು ಅಗತ್ಯ ಕಂಡುಬರುತ್ತಿಲ್ಲ. ಈ ರೀತಿಯ ಅರ್ಜಿ ದಾಖಲಿಸುವುದು ಕಾನೂನಿನ ದುರ್ಳಕೆಯಾಗಿದೆ ಎಂದ ಪೀಠ, ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿ, ಪಿಐಎಲ್ ವಜಾಗೊಳಿಸಿತು.

ದಂಡದ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪಾವತಿಸಿ, ಆ ಕುರಿತ ದಾಖಲೆಯನ್ನು 2 ವಾರದೊಳಗೆ ರಿಜಿಸ್ಟ್ರಾರ್ ಅವರಿಗೆ ಇಮೇಲ್ ಮೂಲಕ ಕಳಿಸಿಕೊಡಬೇಕೆಂದು ಅರ್ಜಿದಾರರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net