ಚುನಾವಣಾ ಮತಗಳ್ಳತನ ಆರೋಪ; ರಾಹುಲ್ ಗಾಂಧಿಯವರದ್ದು ಅಸಂಬದ್ಧ ವಿಶ್ಲೇಷಣೆ ಎಂದ ಭಾರತೀಯ ಚುನಾವಣಾ ಆಯೋಗ| Election Commission

Rahul Gandhi 6
Published on

Election Commission: 2024ರ ಲೋಕಸಭೆ ಚುನಾವಣೆಯಲ್ಲಿ ಭಾರಿ ಮತಗಳ್ಳತನ ನಡೆದಿದೆ ಎಂದು ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಮತದಾರರ ಪಟ್ಟಿಯಲ್ಲಿನ ಲೋಪವನ್ನು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಪಿಪಿಟಿ ಮೂಲಕ ವಿಶ್ಲೇಷಣೆ ಮಾಡಿದ್ದಕ್ಕೆ ಭಾರತೀಯ ಚುನಾವಣಾ ಆಯೋಗ ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ಅಸಂಬದ್ಧ ವಿಶ್ಲೇಷಣೆ ಎಂದು ಕಿಡಿಕಾರಿದೆ.

ದಾರಿ ತಪ್ಪಿಸುವ ವ್ಯಾಖ್ಯಾನಗಳನ್ನು ಹರಡಿದ್ದಕ್ಕಾಗಿ ಘೋಷಣಾ ಪತ್ರದ ಮೂಲಕ ದೂರು ಸಲ್ಲಿಸಿ, ಇಲ್ಲ ರಾಷ್ಟ್ರದ ಜನರಿಗೆ ಕ್ಷಮೆಯಾಚಿಸಿ ಎಂದು ಆಯೋಗ ಸವಾಲು ಹಾಕಿದೆ. ರಾಹುಲ್ ಗಾಂಧಿ ತಮ್ಮ ವಿಶ್ಲೇಷಣೆಯಲ್ಲಿ ನಂಬಿಕೆ ಇದ್ದರೆ, ಆಯೋಗದ ವಿರುದ್ಧದ ಆರೋಪಗಳು ನಿಜ ಅಂದ್ರೆ ಘೋಷಣಾ ಪತ್ರಕ್ಕೆ ಸಹಿ ಹಾಕುವಲ್ಲಿ ಯಾವುದೇ ಸಮಸ್ಯೆ ಇರಬಾರದು. ಘೋಷಣೆಗೆ ಸಹಿ ಹಾಕದಿದ್ದರೆ, ತಮ್ಮ ವಿಶ್ಲೇಷಣೆ ಮತ್ತು ಆರೋಪ ಅಸಂಬದ್ಧ ಎಂದರ್ಥ ಎಂದು ಹೇಳಿದೆ ಎಂದು ವರದಿಯಾಗಿದೆ.

ರಾಹುಲ್ ಗಾಂಧಿ ಆರೋಪವೇನು?

ದೇಶದ ಚುನಾವಣೆಗಳಲ್ಲಿ ಮತಗಳನ್ನು ಕದಿಯಲಾಗುತ್ತಿದೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿ, ನಿನ್ನೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪಿಪಿಟಿ ಮೂಲಕ ತಮ್ಮ ಆರೋಪಕ್ಕೆ ಪೂರಕವಾದ ದಾಖಲೆಗಳನ್ನು ಬಿಡುಗಡೆ ಮಾಡಿದರು. ಅದೇ ರೀತಿ ಸಂಜೆ ಇಂಡಿಯಾ ಮೈತ್ರಿಕೂಟದ ಡಿನ್ನರ್ ಸಭೆಯಲ್ಲೂ ಈ ಕುರಿತು ರಾಹುಲ್ ಗಾಂಧಿ ಹೇಳಿದ್ದರು.

2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅಕ್ರಮ ನಡೆದಿದ್ದು, ಬೆಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಮತಗಳ್ಳನ ನಡೆದಿದೆ. ನಮ್ಮ ಸಂಶೋಧನೆ ಪ್ರಕಾರ 6 ರೀತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು. ಡುಪ್ಲಿಕೇಟ್ ಮತದಾರರು, ಒಬ್ಬನೇ ಮತದಾರರ ಹಲವು ರಾಜ್ಯಗಳಲ್ಲಿ ಮತ ಚಲಾಯಿಸುವುದು, ನಕಲಿ ಮನೆ ವಿಳಾಸಗಳು, ಒಂದೇ ಮನೆಯಲ್ಲಿ 80, 150 ಮತದಾರರು, ಮತದಾರರ ಪಟ್ಟಿಯಲ್ಲಿ ಮತದಾರರ ಫೋಟೋ ಇಲ್ಲದಿರುವುದು, ಫಾರ್ಮ್ 6ರ ದುರುಪಯೋಗವನ್ನು ಬಿಡುಗಡೆ ಮಾಡಿದ್ದರು.

ಆಡಳಿತರೂಢ ಬಿಜೆಪಿಯೊಂದಿಗೆ ಶಾಮೀಲಾಗಿದೆ ಆಯೋಗ, ವಿಧಾನಸಭೆ ಚುನಾವಣೆಗೆ ನೃತ್ಯ ಸಂಯೋಜನೆಯ ವೇಳೆಪಟ್ಟಿ ರಚಿಸುತ್ತದೆ ಎಂದು ಆರೋಪಿಸಿದ್ದ ಅವರು, ಆಯೋಗಕ್ಕೆ ಡಿಜಿಟಲ್ ಮತದಾರರ ಪಟ್ಟಿ ಒದಗಿಸಲು ನಿರಾಕರಿಸಿದೆ ಎಂದು ಹೇಳಿದ್ದರು.

ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ತಿರುಗೇಟು

ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ನೀಡಿರುವ ಆಡಳಿತರೂಢ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, "ಕರ್ನಾಟಕದ ಮತದಾರರ ಪಟ್ಟಿಯಲ್ಲಿದೆ ಎಂದು ಹೇಳಿರುವ ಅನರ್ಹ ಮತದಾರರ ಹೆಸರುಗಳನ್ನು ಒಳಗೊಂಡಿರುವ ಘೋಷಣೆ ಪತ್ರ ಸಲ್ಲಿಸಲು ಯಾಕೆ ಹಿಂಜರಿಯುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಒಂದು ವೇಳೆ ದಾಖಲೆ ಸಲ್ಲಿಸಲಿಲ್ಲ ಅಂದ್ರೆ, ಅದು ನಿಜವಲ್ಲ, ರಾಜಕೀಯವಾಗಿ ಡ್ರಾಮಾ ಮಾಡ್ತಿದ್ದಾರೆ ಎಂದು ಸ್ಪಷ್ಟವಾಗುತ್ತದೆ. ಸತ್ಯಗಳನ್ನು ಮರೆಮಾಚಲು, ಜನರ ಮನಸ್ಸಿನಲ್ಲಿ ಅನುಮಾನ ಹುಟ್ಟುಹಾಕಲು, ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವ ಸಾಂವಿಧಾನಿಕ ಸಂಸ್ಥೆಯ ಪ್ರತಿಷ್ಠೆಯನ್ನು ಹಾಳು ಮಾಡುವ ತಂತ್ರ ಎಂದು ತಿರುಗೇಟು ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net