ಸಂಸ್ಕಾರಹೀನ ಅಹಂಕಾರಕ್ಕೆ ಸಿಟ್ಟು ಕೂಡ ಬಂದುಬಿಟ್ಟರೆ...?

Ravi Belgere 15 March 20
Published on
ಅವರೊಬ್ಬ ಮೇಷ್ಟ್ರು. ತುಂಬ ಗೌರವ, ತುಂಬ ಒಳ್ಳೆಯವರೆಂಬ ಹೆಸರು ಸಂಪಾದಿಸಿಕೊಂಡಿದ್ದರು. ಕಾಲೇಜಿನಲ್ಲಿ ಅವರು ಪಾಠಕ್ಕೆ ನಿಂತರೆ ಕ್ಲಾಸು ಕಿಕ್ಕಿರಿಯುತ್ತಿತ್ತು. ಅವರು ಬೋಧಿಸುತ್ತಿದ್ದ ಸಬ್ಜೆಕ್ಟಿಗೆ ಸಂಬಂಧವೇ ಇರದಿದ್ದ ವಿದ್ಯಾರ್ಥಿಗಳು ಕೂಡ ಅವರ ಕ್ಲಾಸಿಗೆ ಹೋಗಿ ಕೂಡುತ್ತಿದ್ದರು. ಅವರ ಕ್ಲಾಸೆಂದರೆ, ಅದು ಒಬ್ಬನೇ ವ್ಯಕ್ತಿ ಗಂಟೆಯುದ್ದಕ್ಕೂ ಮಾತನಾಡುವಂತಹ ಶಿಕ್ಷೆಯಲ್ಲ. ವಿದ್ಯಾರ್ಥಿಗಳೂ ಮಾತನಾಡಬೇಕು. ಪ್ರಶ್ನೆ ಯಾರಾದರೂ ಕೇಳಬಹುದು. ‘ಉತ್ತರ, ಎಲ್ಲರೂ ಸೇರಿ ಹುಡುಕೋಣ’ ಅನ್ನುತ್ತಿದ್ದರು ಮೇಷ್ಟ್ರು. ಲೈಬ್ರರಿಗೆ ಅವರು ಯಾವತ್ತಿಗೂ ಒಬ್ಬರೇ ಹೋದವರಲ್ಲ. ಹುಡುಗಹುಡುಗಿಯರ ಹಿಂಡು ಕಟ್ಟಿಕೊಂಡು ಹೋಗಿ ಪುಸ್ತಕಗಳಿಗೆ ಮುತ್ತಿಕೊಳ್ಳುತ್ತಿದ್ದರು. ಅವರಿದ್ದ, ನೌಕರಿ ಮಾಡುತ್ತಿದ್ದ ಊರು ತುಂಬ ಚಿಕ್ಕದು. ಯಾರಾದರೂ ಸಾಹಿತಿಗಳು, ಪತ್ರಕರ್ತರು ಆ ಊರಿಗೆ ಹೋದರೆ ಅವರು ಮೊದಲು ಹುಡುಕುತ್ತಿದ್ದುದೇ ಮೇಷ್ಟ್ರನ್ನ. ತಮಗೆ ಗೊತ್ತಿದ್ದುದನ್ನು ಕ್ಲಾಸಿನಲ್ಲಿ ಮಕ್ಕಳಿಗೆ ತಿಳಿಹೇಳಿದಷ್ಟೇ ಸ್ಪಷ್ಟವಾಗಿ, ಆಪ್ತವಾಗಿ ತಮ್ಮಲ್ಲಿಗೆ ಬಂದವರಿಗೂ ಹೇಳುತ್ತಿದ್ದರು.

ಉಳಿದಂತೆ ಆತ ತುಂಬ ಮೌನಿ. ಬದುಕಿನಲ್ಲಿ ಬೇರೇನೂ ಉತ್ಸಾಹ ಉಳಿದಿಲ್ಲವೇನೋ ಎಂಬಷ್ಟು ಮೌನಿ. ಅವರು ಮನಃಪೂರ್ತಿಯಾಗಿ ತೊಡಗಿಕೊಳ್ಳುತ್ತಿದ್ದುದು ಪಾಠವೊಂದರಲ್ಲೇ. ಉಳಿದಂತೆ ಅವರಿಗೆ ಯಾವ ಆಸಕ್ತಿಯೂ ಬದುಕಿನೆಡೆಗೆ ಇರಲಿಲ್ಲ. ‘ಯಾಕೆ ಹೀಗೆ’? ಅಂತ ಅವರ ಗೆಳೆಯರೊಬ್ಬರನ್ನು ಕೇಳಿದೆ.

ಮೇಷ್ಟ್ರ ಹೆಂಡತಿಯ ಕಡೆಗೆ ಕೈ ತೋರಿಸಿದರು.

ಆಕೆಯ ಸ್ವಭಾವವೇ ವಿಚಿತ್ರ. ಜಗತ್ತಿನಲ್ಲಿ ಯಾರೊಂದಿಗೂ ಜಗಳವಾಡದ ಮೇಷ್ಟ್ರೊಂದಿಗೆ ಆಕೆ ಜಗಳವಾಡುತ್ತಿದ್ದಳು. ತುಂಬ ಸಿಟ್ಟಿನ ಹೆಂಗಸು. ಸಿಟ್ಟಿಗೆದ್ದರೆ ಏನನ್ನು ಬೇಕಾದರೂ ಮಾತನಾಡಿಬಿಡಬಲ್ಲಾಕೆ. ಫಟ್ಟನೆ ಜಗ್ಗಿ ತಾಳಿ ಹರಿದು ಮೇಷ್ಟ್ರ ಕೈಗೆ ಕೊಟ್ಟದ್ದು ಎಷ್ಟು ಸಲವೋ? ಕಾಲುಂಗುರ ಬಿಚ್ಚಿ ಬಿಸಾಕಿದ್ದು ಎಣಿಸಿದ್ಯಾರು? ಮನೆ ಬಿಟ್ಟು ಹೋಗಿದ್ದಾಳೆ. ‘ಇಲ್ಲಿಗೆ ಮುಗಿಯಿತು ನಮ್ಮ ಸಂಬಂಧ’ ಅಂದಿದ್ದಾಳೆ. ಮತ್ತೆ ಬಂದು ಅದೇ ಗಂಡನ ಮನೆಯಲ್ಲಿ ಕುಳಿತು ಹಕ್ಕು ಸಾಧಿಸಿದ್ದಾಳೆ.

ಇಷ್ಟಕ್ಕೂ ಆಕೆಯ ಸಮಸ್ಯೆಯೇನು ಅಂತ ಕೇಳಿದೆ.

ಆಕೆಗೆ ತನ್ನ ಸ್ಥಾನಮಾನದ ಅರಿವಿಲ್ಲದಿರುವುದೇ ಸಮಸ್ಯೆ! ಅನೇಕ ಹೆಂಗಸರಿಗೆ ಇರೋ ಸಮಸ್ಯೆಯೇ ಅದು. ತಾನು ಯಾರ ಹೆಂಡತಿ, ಗಂಡನಿಗೆ ಸಮಾಜದಲ್ಲಿ ಎಂಥ ಸ್ಥಾನವಿದೆ, ತನ್ನ ನಡವಳಿಕೆಯಿಂದ ಆತನ ಮರ್ಯಾದೆಗೆ ಭಂಗ ಬಂದೀತಾ, ಆತನ ಇಮೇಜು ಕೆಟ್ಟೀತಾ ಅಂತ ಯೋಚನೆ ಮಾಡುವುದೇ ಇಲ್ಲ. ಗಂಡನನ್ನು ತಾನು ಅವಹೇಳನ ಮಾಡಿ ಮಾತನಾಡುವುದಷ್ಟೇ ಅಲ್ಲ: ಅಂಥ ಅವಹೇಳನವನ್ನ ತಾನೂ ಇನ್ನೊಬ್ಬರಿಂದ ಮಾಡಿಸಿಕೊಂಡು, ಆ ಮೂಲಕ ಗಂಡನನ್ನು ಮತ್ತೂ ಅವಮಾನಕ್ಕೆ ಈಡುಮಾಡುತ್ತಿರುತ್ತಾಳೆ. ಆ ಮೇಷ್ಟ್ರು ಪತ್ನಿಯನ್ನು ‘ಶಕ್ಕೂ’ ಅಂತ ಕರೆಯುತ್ತಿದ್ದರು. ಬಹುಶಃ ಆಕೆಯ ಹೆಸರು ಶಕುಂತಲಾ ಅಂತಿರಬೇಕು. ಅದು ದಾಂಪತ್ಯದಲ್ಲಿ ಗಂಡಹೆಂಡತಿ ಒಬ್ಬರಿಗೊಬ್ಬರು ಮುಚ್ಚಟೆಯಿಂದ ಇಟ್ಟುಕೊಳ್ಳುವ ಪ್ರೀತಿಯ ಹೆಸರು. ಇದ್ದಕ್ಕಿದ್ದಂತೆ ಅದೊಂದು ದಿನ ಹತ್ತು ಜನ ಅತಿಥಿಗಳೆದುರು ಮೇಷ್ಟ್ರಿಗಿಂತ ಹತ್ತು ವರ್ಷಕ್ಕೆ ಚಿಕ್ಕವನೊಬ್ಬ ‘ಶಕ್ಕೂ, ನಾಳೆ ನಮ್ಮನೇಗೆ ಊಟಕ್ಕೆ ಬಂದು ಹೋಗು!’ ಅಂದುಬಿಟ್ಟ. ‘ಅಯ್ಯೋ, ಅವನು ನಂಗೆ ತಮ್ಮನ ಸಮಾನ ಕಣ್ರೀ...’ ಅಂತ ಈ ಹೆಂಗಸು ಆಮೇಲೆ ಪತಿವ್ರತಾ ಪ್ರಲಾಪ ಮಾಡಿದಳೇ ಹೊರತು, ಮೇಷ್ಟ್ರಿಗೆ ಪರಿಚಯವಿದ್ದ ಆ ಕಿರಿಯ ಗೆಳೆಯನಿಗೆ ತಾನು ಅಷ್ಟೊಂದು ಸಲುಗೆ ಕೊಡಬಾರದಿತ್ತು ಎಂಬುದು ಆಕೆಯ ಮನಸ್ಸಿಗೆ ತಟ್ಟುವುದೇ ಇಲ್ಲ. ಗಂಡಸಿಗೆ ಮತ್ತೇನಲ್ಲದಿದ್ದರೂ ಸಮಾಜದಲ್ಲೊಂದು ಗೌರವವಿರುತ್ತದೆ. ಅವನ ಕರ್ತೃತ್ವ ಶಕ್ತಿಗೆ, ಮಾತಿಗೆ, ಕ್ರಿಯಾಶೀಲತೆಗೆ ಸಂದ ಗೌರವವದು. ಅದಕ್ಕಾಗಿ ಗಂಡಸು ವರ್ಷಗಟ್ಟಲೆ ಶ್ರಮಿಸಿರುತ್ತಾನೆ. ಅದರಲ್ಲೂ ಚಿಕ್ಕ ಊರುಗಳಲ್ಲಿ, ಮೇಷ್ಟ್ರುಗಳಾದಂಥವರು ತುಂಬ ಶ್ರಮಪಟ್ಟು ಅಂಥದೊಂದು ಗೌರವ ಗಳಿಸಿಕೊಂಡಿರುತ್ತಾರೆ. ಅಂಥವರ ವ್ಯಕ್ತಿಗತ ಬದುಕುಗಳಲ್ಲಿ ಚಿಕ್ಕದೊಂದು ಏರುಪೇರಾದರೂ, ಅದು ಸಾರ್ವಜನಿಕರ ಬಾಯಿಗೆ ಸಿಕ್ಕರೆ ತಿಂಗಳಗಟ್ಟಲೆ ಚರ್ಚೆಗೆ ಗ್ರಾಸ. ಈ ಮೇಷ್ಟ್ರ ಹೆಂಡತಿ ವಾರಕ್ಕೊಮ್ಮೆ ಅಂಥ ಗ್ರಾಸ ಒದಗಿಸುತ್ತಿದ್ದಳು. ವಿದ್ಯಾರ್ಥಿಗಳ ಎದುರಿನಲ್ಲೇ ಆತನನ್ನು ಹೆಸರಿಡಿದು ಕರೆದುಬಿಡೋದು, ‘ಅಯ್ಯೋ ಅವರ ಹಣೆಬರಹ ಗೊತ್ತಿಲ್ವಾ?’ ಅಂತ ಮಾತಾಡಿಬಿಡೋದು, ‘ನಿನ್ನಂಥವನ ಜೊತೇಲಿ ನಂಗೆ ಬಾಳಕ್ಕಾಗಲ್ಲ’ ಅಂತ ಮೂರು ದಿನಕ್ಕೊಮ್ಮೆ ತಾಳಿ ಬಿಚ್ಚಿ ಬಿಸಾಡಿ ಹೊರಟು ಹೋಗುವುದು- ಆಕೆ ಇಂಥವನ್ನೇ ವರ್ಷಗಟ್ಟಲೆ ಮಾಡಿದಳು.

ಆಕೆಯ ಮುಖ್ಯ ಸಮಸ್ಯೆಯೆಂದರೆ ಅಹಂಕಾರ. ಅಹಂಕಾರಕ್ಕೆ ಅನೇಕ ಬೈಪ್ರಾಡಕ್ಟುಗಳಿರುತ್ತವೆ. ಆ ಪೈಕಿ ಸಿಟ್ಟೂ ಒಂದು. ಸಂಸ್ಕಾರಹೀನತೆ ಇನ್ನೊಂದು. ಸಂಸ್ಕಾರವಿರದಿದ್ದವರಿಗೆ ಸಿಟ್ಟು ಕೂಡ ಬಂದಾಗ, ಎದುರಿನ ವ್ಯಕ್ತಿಯ ಇಮೇಜು ಏನಾದೀತು ಎಂಬ ಪರಿವೆಯೇ ಉಳಿದಿರುವುದಿಲ್ಲ. ತಮ್ಮದೆಂಬ ಇಮೇಜಂತೂ ಅವರಿಗಿರುವುದಿಲ್ಲ. ಬೇಕಾದ್ದು ಮಾತನಾಡುತ್ತಾರೆ, ಕಿರಿಚುತ್ತಾರೆ, ಅಳುತ್ತಾರೆ, ರಂಪ ರಾಮಾಯಣ ಮಾಡುತ್ತಾರೆ. ಅವರ ಪ್ರತಿ ವರ್ತನೆಯೂ ಗಂಡನ ಗೌರವವನ್ನು ಕಳೆಯುತ್ತಿರುತ್ತದೆ. ಇಂಥವರಿಗೆ ಅಹಂಕಾರವಿರುತ್ತದೆಯೇ ಹೊರತು, ಅವಡುಗಚ್ಚಿ ನಿಂತು ಏನನ್ನಾದರೂ ಸ್ವತಂತ್ರವಾಗಿ ಸಾಧಿಸಿಯೇನೆಂಬ ಹಟವಿರುವುದಿಲ್ಲ. ಜಗಳ ಕಾಯ್ದು ತವರುಮನೆಗೆ ನಡೆದು ಬಿಡುತ್ತಾರೆ. ಹೋದಷ್ಟೇ ವೇಗವಾಗಿ ವಾಪಸ್ಸೂ ಬರುತ್ತಾರೆ. ಏಕೆಂದರೆ, ಅಲ್ಲಿ ಇವರ ಅಹಂಕಾರವನ್ನು ಸಹಿಸಿಕೊಂಡು ಆದರಿಸಲಿಕ್ಕೆ ಯಾರೂ ಇರುವುದಿಲ್ಲ. ಅಲ್ಲಿ ಅಣ್ಣತಮ್ಮಂದಿರ ಅಂಕೆಯಲ್ಲಿರಬೇಕಾಗುತ್ತದಲ್ಲ? ಅದು ಮತ್ತೆ ಇವರ ಅಹಂಕಾರಕ್ಕೆ ಪೆಟ್ಟೇ. ‘ಇನ್ನು ಮೇಲೆ ಸರಿಯಾಗಿರ್ತೀನಿ’ ಎಂಬ ಯಥಾಪ್ರಕಾರದ ಮುನ್ನುಡಿಯೊಂದಿಗೆ ಮತ್ತೆ ಗಂಡನ ಮನೆಗೆ ಹಿಂತಿರುಗುತ್ತಾರೆ. ಮತ್ತೆ ಕೆಲವೇ ದಿನಗಳಿಗೆ ಯಾವನ ಕೈಲೋ ‘ಶಕ್ಕು’ ಅನ್ನಿಸಿಕೊಂಡಿರುತ್ತಾರೆ. ಅಥವಾ ಇವರೇ ಇನ್ಯಾವನೋ ತಲೆಮಾಸಿದವನನ್ನು ರಸ್ತೆಯಲ್ಲಿ ಎಲ್ಲರೆದುರಿಗೆ ‘ಏನ್ ಗುರೂ?’ ಅಂತ ಚಿಲ್ಲರೆ ಹೆಂಗಸರಂತೆ ಮಾತನಾಡಿಸಿರುತ್ತಾರೆ.

ಪದೇಪದೆ ತವರುಮನೆಗೆ ಓಡಿ ಹೋಗುವ ಹೆಂಗಸರಿಗೆ ಇಂಥದ್ದೇ ಒಂದು ಸಂಸ್ಕಾರಹೀನ ಅಹಂಕಾರವಿರುತ್ತದೆ. ಬುದ್ಧಿಶಕ್ತಿಯ ಕೊರತೆಯಿರುತ್ತದೆ. ಗಂಡನನ್ನು ಪ್ರೀತಿಸುವುದು ಕೂಡ ತಮ್ಮ ಅಹಂಕಾರಕ್ಕೆ ಬಿದ್ದ ಪೆಟ್ಟು ಅಂದುಕೊಳ್ಳುತ್ತಾರೆ. ಅಂಥವರನ್ನು ಪ್ರೀತಿಯಿಂದ ನೋಡಿಕೊಂಡು ಪ್ರಯೋಜನವಿಲ್ಲ. ತಿಳಿಹೇಳುವುದು ಅರ್ಥಹೀನ. ಯಾರಿಂದಲಾದರೂ ಹೇಳಿಸಿದರೆ ಅದೂ ವ್ಯರ್ಥ. ಒಡವೆವಸ್ತ್ರಕೊಟ್ಟು ಓಲೈಸಿಕೊಳ್ಳಲು ಸಾಧ್ಯವಿಲ್ಲ. ಒಬ್ಬ ಸಜ್ಜನ, ಸಹನಶೀಲ ಗಂಡ ಮಾಡುವ ಎಲ್ಲ ಸದಿಚ್ಛೆಯ ಪ್ರಯತ್ನಗಳನ್ನೂ ಛಛ್ಛಿಛಿಚಠಿ ಮಾಡಿ, ಅವನ ಮರ್ಯಾದೆ ಮೂರು ಕಾಸಿಗೆ ಕಳೆದು, ತಾವೂ ಸುತ್ತಲಿನವರ ಕಣ್ಣುಗಳಲ್ಲಿ ಅಗ್ಗವಾಗದಿದ್ದರೆ ಅವರಿಗೆ ಸಮಾಧಾನವೇ ಇಲ್ಲ. ಅಂಥ ಹೆಂಗಸಿನೊಂದಿಗೆ ವರ್ಷಗಟ್ಟಲೆ ಹೆಣಗಿದ ಆ ಮೇಷ್ಟ್ರ ಬಗ್ಗೆ ಮೊನ್ನೆ ಯಾರಲ್ಲೋ ವಿಚಾರಿಸಿದೆ: ‘ಈಗ ಚೆನ್ನಾಗಿದ್ದಾರೆ. ಆಕೆಯಿಂದ ದೂರ ಇದ್ದಾರೆ’ ಅಂದರು. ಆತ ಮತ್ತೇನೂ ಮಾಡುವುದು ಸಾಧ್ಯವಿರಲಿಲ್ಲ ಅನ್ನಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net