ಸಿನಿಮಾ

ಶೈಕ್ಷಣಿಕ ಭವಿಷ್ಯ ಡೋಲಾಯಮಾನ:ಪದವಿ ಮೊದಲ ಸೆಮಿಸ್ಟರ್ ಪರೀಕ್ಷೆ ವಿಳಂಬ

ಅಶೋಕ ಬೆನ್ನೂರು ಸಿಂಧನೂರು: ರಾಯಚೂರು ಸೇರಿ ವಿವಿಧ ವಿವಿಗಳ ಪದವಿ ಪ್ರಥಮ ಮತ್ತು ಮೂರನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ಎರಡನೇ ವರ್ಷವೂ ವಿಳಂಬ ಮಾಡಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಉತ್ಸಾಹ ಕಳೆದುಕೊಳ್ಳುವಂತಾಗಿದೆ.


ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ಕೆಲವು ಗೊಂದಲಗಳು ಪರೀಕ್ಷೆ ಮೇಲೆ ಪರಿಣಾಮ ಬೀರುತ್ತಿವೆ. ಮಾರ್ಚ್‌ನಲ್ಲಿ ಪದವಿ ಪರೀಕ್ಷೆಗಳನ್ನು ಆರಂಭಿಸಬೇಕಿತ್ತು. ಮೇ ಆರಂಭವಾದರೂ ಪರೀಕ್ಷೆ ದಿನಾಂಕವನ್ನು ಪದೇ ಪದೆ ಮುಂದೂಡುತ್ತಿರುವುದಕ್ಕೆ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ

ನಾಲ್ಕೈದು ಬಾರಿ ಪರೀಕ್ಷಾ ವೇಳಾಪಟ್ಟಿ ಬದಲಾಗಿದೆ

ಪದವಿ ಮೊದಲ ಸೆಮಿಸ್ಟರ್ ಬೋಧನೆ ಮಾರ್ಚ್‌ನಲ್ಲಿ ಮುಕ್ತಾಯಗೊಂಡಿದ್ದು, ಪ್ರಥಮ ಸೆಮಿಸ್ಟರ್ ಅವಧಿ ಸಹ ಕೊನೆಯಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ. ಆದರೆ, ಪರೀಕ್ಷೆ ನಡೆಸಬೇಕಾದ ವಿವಿಗಳು ಪದೇ ಪದೆ ಮುಂದೂಡುತ್ತಿದೆ. ಈಗಾಗಲೇ ನಾಲ್ಕೈದು ಬಾರಿ ಪರೀಕ್ಷಾ ವೇಳಾಪಟ್ಟಿ ಬದಲಾಗಿದೆ. ಚುನಾವಣೆ ನೆಪದಲ್ಲಿಯೇ ಎರಡು ಬಾರಿ ವೇಳಾಪಟ್ಟಿ ಬದಲಾಗಿದೆ. ತಾಲೂಕಿನಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಪದವಿ ಪ್ರಥಮ ಸೆಮಿಸ್ಟರ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಸಂಕಷ್ಟಕ್ಕೆ ಸಿಲುಕಿದ್ದಾರೆ.

2 ಮತ್ತು 3 ಸೆಮಿಸ್ಟರ್‌ಗಳ ತರಗತಿ ಆರಂಭಿಸುವ ಗೊಂದಲ

ಈ ಮೊದಲು ಫೆಬ್ರುವರಿ ಅಥವಾ ಮಾರ್ಚ್‌ನಲ್ಲಿ ಮೊದಲ ಸೆಮಿಸ್ಟರ್ ಪರೀಕ್ಷೆ ನಡೆಯುತ್ತಿದ್ದು, ಎಪ್ರಿಲ್‌ನಲ್ಲಿ ಫಲಿತಾಂಶ ಪ್ರಕಟವಾಗುತ್ತಿತ್ತು. ಮೊದಲ ಸೆಮಿಸ್ಟರ್ ಪರೀಕ್ಷೆ ನಡೆಯದ ಹಿನ್ನೆಲೆಯಲ್ಲಿ ಎರಡು ಮತ್ತು ಮೂರನೆಯ ಸೆಮಿಸ್ಟರ್‌ಗಳ ತರಗತಿ ಯಾವಾಗ ಆರಂಭಿಸುತ್ತಾರೆ ಎನ್ನುವ ಗೊಂದಲವಿದೆ.

ವಿವಿಗಳ ನಡೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ವಿಳಂಬ ನೀತಿಗೆ ಬೇಸತ್ತು ಹೋಗಿದ್ದು, ಕಾಲೇಜ್‌ಗಳಿಗೆ ವಿದ್ಯಾರ್ಥಿಗಳನ್ನು ಕರೆಯಿಸಿಕೊಂಡು ಪಾಠ ಮಾಡುವುದು, ಪರೀಕ್ಷೆಗೆ ಸಿದ್ಧಗೊಳಿಸುವುದು ಸವಾಲಾಗಿ ಪರಿಣಮಿಸಿದೆ.

ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳದ ಆಡಳಿತ ?

ಕಳೆದ ಶೈಕ್ಷಣಿಕ ವರ್ಷದಿಂದ ಪದವಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಪಾಠ ಬೋಧಿಸಲಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಆ ಬಳಿಕ ಮೂರು ಬಾರಿ ಮುಂದೂಡಲಾಗಿತ್ತು. ಈಗ ವರ್ಷವೂ ಅದೇ ಪರಿಸ್ಥಿತಿ ಮುಂದುವರೆದಿದೆ. ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರಾಚಾರ್ಯರಿಗೆ ಫೋನ್ ಮಾಡಿ, ಪರೀಕ್ಷೆ ನಡೆಸುತ್ತೀರೋ ಎಂದು ಪ್ರಶ್ನಿಸುತ್ತಿದ್ದಾರೆ. ವಿವಿಗಳ ಎನ್‌ಇಪಿ ಗೊಂದಲ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದ ಮೇಲೆ ಪರಿಣಾಮ ಬೀರುತ್ತಿದೆ. ದ್ವಿತೀಯ ಹಾಗೂ ನಾಲ್ಕನೆ ಸೆಮಿಸ್ಟರ್ ಓದುವ ಸಂದರ್ಭದಲ್ಲಿ ಮೊದಲ ಸೆಮಿಸ್ಟರ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕಾಗಿರುವುದು ಬಹಳಷ್ಟು ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಡೋಲಾಯಮಾನವಾಗಿದೆ.


ಕೆಲವು ಕಾರಣಗಳಿಂದ ಪದವಿ ಪರೀಕ್ಷೆ ವಿಳಂಬವಾಗಿವೆ. ಈಗಾಗಲೇ ವೇಳಾಪಟ್ಟಿ ಪ್ರಕಟಿಸಿದ್ದು, ಮೇ 15 ರಿಂದ ಮೊದಲ ಹಾಗೂ ಮೂರನೆಯ ಸೆಮಿಸ್ಟರ್ ಪರೀಕ್ಷೆ ಆರಂಭವಾಗಲಿವೆ. ಕೋವಿಡ್ ಬಳಿಕ ಶೈಕ್ಷಣಿಕ ವರ್ಷದಲ್ಲಿ ಆಗಿರುವ ವ್ಯತ್ಯಯವನ್ನು ಸರಿಪಡಿಸಲು ಯತ್ನಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪರೀಕ್ಷೆ ನಡೆಸಲಾಗುವುದು.
ಪ್ರೊ.ಯರಿಸ್ವಾಮಿ ಎಂ.ರಿಜಿಸ್ಟ್ರಾರ್ (ಮೌಲ್ಯಮಾಪನ), ರಾಯಚೂರು ವಿಶ್ವವಿದ್ಯಾಲಯ

ಪದೇ ಪದೆ ಪರೀಕ್ಷೆ ದಿನಾಂಕ ಬದಲಾವಣೆ, ಶೈಕ್ಷಣಿಕ ವರ್ಷದಲ್ಲಿನ ಏರುಪೇರು ನಮಗೆ ತೀವ್ರ ಗೊಂದಲ ಉಂಟು ಮಾಡಿದೆ. ವರ್ಷ ಪೂರ್ತಿ ಮೂರನೆಯ ಸೆಮಿಸ್ಟರ್ ಓದುವಂತಹ ಪರಿಸ್ಥಿತಿ ಇದೆ. ಈಗಾಗಲೇ ನಾವು ನಾಲ್ಕನೇ ಸೆಮಿಸ್ಟರ್ ತರಗತಿಯಲ್ಲಿ ಕುಳಿತುಕೊಳ್ಳಬೇಕಿತ್ತು. ಆದರೆ, ಮೂರನೆಯ ಸೆಮಿಸ್ಟರ್ ಪರೀಕ್ಷೆ ಮುಗಿದಿಲ್ಲ.
ಶಿವಮಣಿ,ಪದವಿ ವಿದ್ಯಾರ್ಥಿ, ಸಿಂಧನೂರು

Latest Posts

ಲೈಫ್‌ಸ್ಟೈಲ್