More

  ವೈಚಾರಿಕತೆ ಕೊಂದರೆ ಬೌದ್ಧಿಕ ಅಂಗವೈಕಲ್ಯ: ಸಂಸ್ಕೃತಿ ಚಿಂತಕ ರಹಮತ್ ತರೀಕೆರೆ ಅಭಿಮತ

  ಮಂಡ್ಯ: ವೈಚಾರಿಕತೆ ಮತ್ತು ಚಲನಶೀಲತೆಯನ್ನು ಕೊಲ್ಲುವ ದೇಶ 2 ರಿಂದ 3 ದಶಕದಲ್ಲಿ ಬೌದ್ಧಿಕ ಅಂಗವೈಕಲ್ಯ ಸಂತಾನವನ್ನು ಸೃಷ್ಟಿ ಮಾಡುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಸಂಸ್ಕೃತಿ ಚಿಂತಕ ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.
  ನಗರದ ಗಾಂಧಿಭವನದಲ್ಲಿ ಪದವಿ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಸಮ್ಮೇಳನ ಮತ್ತು ಕಾರ್ಯಾಗಾರದಲ್ಲಿ ’ಕನ್ನಡ ಭಾಷೆ ಮತ್ತು ಸಾಹಿತ್ಯ ಬೋಧನೆಯ ಪುನಶ್ಚೇತನ’ ಕುರಿತು ಉಪನ್ಯಾಸ ನೀಡಿದರು. ಬೌದ್ಧಿಕ ಅಂಗವಿಕಲತೆ ದೇಶಕ್ಕೆ ಒಂದು ಶಾಪ. ವಿಜ್ಞಾನ ಮತ್ತು ವಿಚಾರದ ಬಗ್ಗೆ ಕುವೆಂಪು ಹೇಳುತ್ತಿದ್ದರು. ನಮ್ಮ ಶಿಕ್ಷಣ ಕ್ರಮದಲ್ಲಿ ವಿಜ್ಞಾನ ಮತ್ತು ವಿಚಾರದ ದೀಪ ಬೆಳಗಿಸುವ ಕಾರ್ಯಕ್ರಮ ಮಾಡಬೇಕು ಎಂದರು.
  ಸಾಹಿತಿ ಡಾ.ಬೆಸಗರಹಳ್ಳಿ ರಾಮಣ್ಣ ಅವರಿಂದ ನಾನು ಅಚ್ಚ ಕನ್ನಡ ಭಾಷೆಯನ್ನು ಸವಿದಿದ್ದೆ. ಅವರ ಮಾತು ಹಾಸ್ಯ ಬಹಳ ಇಷ್ಟವಾಗಿತ್ತು. ನಿತ್ಯಸಚಿವ ಕೆ.ವಿ.ಶಂಕರಗೌಡರು ಉತ್ತಮ ಶಿಕ್ಷಣ ತಜ್ಞರಾಗಿದ್ದರು. ಜತೆಗೆ ಕುವೆಂಪು ತಮ್ಮ ಅತ್ಯಂತ ಪ್ರಖರ ಭಾಷಣವನ್ನು ಶ್ರೀರಂಗಪಟ್ಟಣದಲ್ಲಿ ಮಾಡಿದ್ದರು. ಅದು ಆತ್ಮಶ್ರೀ ಹಾಗೂ ನಿರಂಕುಶಮತಿಗಳಾಗಿ ಎಂಬುದಾಗಿದೆ. ಆದರಿಂದು ನಿಜವಾಗಿ ಕಣ್ಮರೆಯಾಗುತ್ತಿರುವುದು ನಿರಂಕುಶಮತಿತ್ವ ಎಂದು ಬೇಸರ ವ್ಯಕ್ತಪಡಿಸಿದರು.
  ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲರ ಸಂಘದ ಖಜಾಂಚಿ ಗುರುಲಿಂಗೇಗೌಡ ಮಾತನಾಡಿ, ಸಾಹಿತ್ಯದ ಅಧ್ಯಾಪಕರು ಅಂದರೆ ನನಗೆ ತುಂಬಾ ಅಭಿಮಾನ. ಅವರು ತಮ್ಮ ಚಿಂತನೆ ವಿಮರ್ಶೆ ಬರಹಗಳ ಮೂಲಕ ಜಿಲ್ಲೆಗೆ ಒಳ್ಳೆಯ ಹೆಸರು ತರುತ್ತಾರೆ. ಕನ್ನಡ ಅತ್ಯಂತ ಶ್ರೀಮಂತವಾದ ಭಾಷೆ. ಕನ್ನಡದ ವಿಷಯದಲ್ಲಿ ನೂರರಷ್ಟು ಫಲಿತಾಂಶ ಬರುವಂತಾಗಲಿ. ಆ ನಿಟ್ಟಿನಲ್ಲಿ ಪ್ರಯತ್ನಿಸಿ ಎಂದು ಸಲಹೆ ನೀಡಿದರು.
  ವೇದಿಕೆ ಅಧ್ಯಕ್ಷ ಲೋಕೇಶ ಬೆಕ್ಕಳಲೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ವೇದಿಕೆ ಗೌರವಾಧ್ಯಕ್ಷ ಎಚ್.ಎಸ್.ಚಂದ್ರಶೇಖರಯ್ಯ, ಗೌರವ ಸಲಹೆಗಾರ್ತಿ ಗೌರಮ್ಮ, ಕಾರ್ಯಾಧ್ಯಕ್ಷೆ ಕೆ.ಟಿ.ಪುಷ್ಪಲತಾ, ಖಜಾಂಚಿ ಸಿ.ಸೋಮಶೆಟ್ಟಿ, ಡಿ. ಎನ್.ನಾಗಾಚಾರಿ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಭೈರೇಶ್ ಇತರರಿದ್ದರು.
  ಇದೇ ವೇಳೆ ರಹಮತ್ ತರೀಕೆರೆ ಅವರು ಉಪನ್ಯಾಸಕರೊಂದಿಗೆ ಸಂವಾದ ನಡೆಸಿದರು. ಉಪನ್ಯಾಸಕ ಗುರುಸ್ವಾಮಿ ಕವಯತ್ರಿ ಮಾಲತಿ ಪಟ್ಟಣಶೆಟ್ಟಿ ಅವರ ’ನಾ ಬರಿ ಭ್ರೂಣವಲ್ಲ’ ಕವನ ಗಾಯನ ಮಾಡಿದರು. ಮಧ್ಯಾಹ್ನ ವಿಚಾರಗೋಷ್ಠಿಯಲ್ಲಿ ’ನೂತನ ಮಾದರಿ ಪ್ರಶ್ನೆಪತ್ರಿಕೆ ಮತ್ತು ನೀಲನಕ್ಷೆ ಅನ್ವಯಿಕತೆ’ ಕುರಿತು ರಾಜ್ಯ ಸಂಪನ್ಮೂಲ ವ್ಯಕ್ತಿ ಸಿ.ಬಿ.ನೀರಜಾ ವಿಶೇಷ ಉಪನ್ಯಾಸ ನೀಡಿದರು. ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಚನ್ನಕೃಷ್ಣ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ವೇದಿಕೆಯ ಪ್ರಧಾನ ಕಾರ್ಯದರ್ಶಿ ಶಿವಾನಂದ.ಕೆ.ಎಲ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಉಪಾಧ್ಯಕ್ಷ ವಿನೋದ್‌ಸಿಂಗ್, ಶಿವಲಿಂಗೇಗೌಡ, ಶ್ವೇತಾ, ರವೀಂದ್ರ, ವೆಂಕಟೇಗೌಡ, ಸಿದ್ದರಾಜು, ಸರ್ವಶ್ರೀ ಇತರರಿದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 20

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts