ವಿದ್ಯಾಭ್ಯಾಸಕ್ಕೆ ಇರಲಿ ಹೆಚ್ಚಿನ ಆದ್ಯತೆ

FotoJet (1)
Published on

ಪಾವಗಡ: ತಾಲೂಕಿನ ಐವಾರ್ಲಹಳ್ಳಿ ಮತ್ತು ಬಸವನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶ್ರೀರಾಮಕೃಷ್ಣ ಸೇವಾಶ್ರಮದಿಂದ ಉಚಿತವಾಗಿ ಶಾಲಾ ಬ್ಯಾಗ್​, ನೋಟ್​ ಬುಕ್​ ಹಾಗೂ ಕಲಿಕಾ ಸಾಮಗ್ರಿ ವಿತರಿಸಲಾಯಿತು.

ತಾಲೂಕಿನ ಕಸಬಾ ಹೋಬಳಿ ಐವಾರ್ಲಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ 40 ವಿದ್ಯಾರ್ಥಿಗಳಿಗೆ ಸ್ಕೂಲ್​ ಬ್ಯಾಗ್​, ನೋಟ್​ ಪುಸ್ತಕ ಮತ್ತು ಸಿಹಿಯನ್ನು ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಜಪಾನಂದ ಸ್ವಾಮೀಜಿ ವಿತರಿಸಿ ಮಾತನಾಡಿ, ತಾಲೂಕಿನ ಗ್ರಾಮಾಂತರ ಶಾಲೆಗಳಿಗೆ ಅದರಲ್ಲಿಯೂ ಕುಗ್ರಾಮಗಳ ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಅನೇಕ ವರ್ಷಗಳಿಂದ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಆಶ್ರಮದಿಂದ ನಡೆಯುತ್ತಿದೆ. ತಾಲೂಕಿನಾದ್ಯಂತ ಸೇವಾ ಕಾರ್ಯಕ್ಕೆ ಪ್ರಶಂಸೆಯು ಬರುತ್ತಿದೆ ಎಂದು ತಿಳಿಸಿದರು.

ಮೆಚ್ಚುಗೆಗೆ ಹಿಗ್ಗದೆ, ತಿರಸ್ಕಾರಕ್ಕೆ ಕುಗ್ಗದೆ ಅನೇಕ ರೀತಿಯ ಸೇವಾ ಕಾರ್ಯ ಮಾಡುತ್ತಿದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಅತ್ಯಂತ ವಿಶಿಷ್ಟ ರೀತಿಯಲ್ಲಿ ಪ್ರಥಮ ಶ್ರೇಣಿಯಲ್ಲಿಯೇ ತೇರ್ಗಡೆಯಾಗಿ ಗ್ರಾಮೀಣ ಮಕ್ಕಳು, ಪಟ್ಟಣ ಶಾಲೆಗಳ ಮಕ್ಕಳಿಗೆ ಕಡಿಮೆಯೇನಿಲ್ಲ ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ. ಅವರಂತೆಯೇ ಸಂಘ, ಸಂಸ್ಥೆಗಳಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾಭ್ಯಾಸದ ಕಡೆ ಗಮನಹರಿಸಿ ಎಂದರು.

ತಾಲೂಕಿನ ಅತ್ಯಂತ ಕುಗ್ರಾಮವಾದ ಐವಾರ್ಲಹಳ್ಳಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದೆ. ಶಾಲೆಯನ್ನು ಅತ್ಯಂತ ಚೊಕ್ಕಟವಾಗಿ, ಶುಚಿಯಾಗಿ ಹಾಗೂ ಶಾಲೆಯ ಶೌಚಗೃಹಗಳಂತೂ ಸ್ವಚ್ಛವಾಗಿದೆ ಎಂದು ಶಾಲೆಯ ಶಿಕ್ಷಕರಿಗೆ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net