

ಕಾರವಾರ: ಸದಾಶಿವಗಡ ಬಾಪೂಜಿ ಕಾಲೇಜ್ ಆವರಣದಲ್ಲಿ ಶಿಕ್ಷಣ ಪ್ರೇಮಿ, ಮಾಜಿ ಸಚಿವ ದಿ. ಪ್ರಭಾಕರ ರಾಣೆ ಅವರ ಕಂಚಿನ ಪ್ರತಿಮೆ ಸ್ಥಾಪಿಸಲಾಗುತ್ತಿದೆ.
ಸೆ.5 ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ರಾಣೆ ಅವರ ಪತ್ನಿ ವನಿತಾ ಅವರು ಪ್ರತಿಮೆ ಅನಾವರಣ ಮಾಡುವರು.
2022 ರ ಸೆ.5 ರಂದು ಪ್ರಭಾಕರ ರಾಣೆ ಅವರು ತಮ್ಮ 81 ನೇ ವಯಸ್ಸಿನಲ್ಲಿ ದೈವಾದೀನರಾಗಿದ್ದರು. ಅವರ ವಾರ್ಷಿಕ ಪುಣ್ಯಸ್ಮರಣೆಯ ಕಾಲದಲ್ಲಿ ಪ್ರತಿಮೆ ಅನಾವರಣ ಮಾಡಲಾಗುತ್ತಿದೆ.
ಶಿಕ್ಷಣ ಪ್ರೇಮಿ:
ಅವರು ಮನಸ್ಸು ಮಾಡಿದ್ದರೆ ನಗರದ ಹೃದಯ ಭಾಗದಲ್ಲಿ ಶಾಲೆ, ಕಾಲೇಜ್ ಪ್ರಾರಂಭಿಸಿ ಕೋಟ್ಯಂತರ ರೂ. ದುಡಿಯಬಹುದಿತ್ತು. ಆದರೆ, ಹಳ್ಳಿಗಳಲ್ಲಿ ಹೈಸ್ಕೂಲ್, ಪಿಯು, ಪದವಿ, ತಾಂತ್ರಿಕ ಶಿಕ್ಷಣ ಕಾಲೇಜ್ ಪ್ರಾರಂಭಿಸಿದರು. ಕುಗ್ರಾಮಗಳ ಲಕ್ಷಾಂತರ ಜನರ ಬಾಳಿಗೆ ಬೆಳಕಾದರು.
ಬಾಪೂಜಿ ಗ್ರಾಮೀಣ ವಿಕಾಸ ಸಮಿತಿಯನ್ನು 1985 ರಲ್ಲಿ ಹುಟ್ಟು ಹಾಕಿ ಅದರಡಿ ಕಾರವಾರ-ಜೊಯಿಡಾ ಕ್ಷೇತ್ರದಲ್ಲಿ 14 ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು.
1985 ರಲ್ಲಿ ಕೆರವಡಿಯಲ್ಲಿ ಹೈಸ್ಕೂಲ್ ಹಾಗೂ ಪಿಯು ಕಾಲೇಜ್ ಪ್ರಾರಂಭಿಸುವ ಮೂಲಕ ಪ್ರಾರಂಭವಾದ ಬಿಜಿವಿಎಸ್ ಸದ್ಯ ಸದಾಶಿವಗಡ ರಾಮನರದಲ್ಲಿ ಪದವಿ ಕಾಲೆಜ್, ರಾಮನಗರ, ಜೊಯಿಡಾ ಕೆರವಡಿ, ಸದಾಶಿವಗಡದಲ್ಲಿ ಪಿಯು ಕಾಲೇಜ್, ಮಲ್ಲಾಪುರ, ಹೋಟೆಗಾಳಿ, ದೇವಳಮಕ್ಕಿ ಅಂಬೆವಾಡಿಗಳಲ್ಲಿ ಹೈಸ್ಕೂಲ್‌ಗಳನ್ನು ಹೊಂದಿದೆ.
ನಿರುದ್ಯೋಗಿಗಳಿಗೆ ವೃತ್ತಿ ಕೌಶಲ ನೀಡುವ ಜನಶಿಕ್ಷಣ ಸಂಸ್ಥಾನ, ಮಹಿಳೆಯರಿಗೆ ಉದ್ಯೋಗ ಒದಗಿಸುವ ಸುಮತಿ ನಾಯ್ಕ, ನರ್ಸಿಂಗ್ ಕಾಲೇಜ್, ಹಾಗೂ ಸಿದ್ಧರದಲ್ಲಿ ಕಿವುಡ ಮೂಕ ಮಕ್ಕಳಿಗೆ ಶಾಲೆ ಇದೇ ಸಂಸ್ಥೆಯ ಅಡಿ ಇದೆ.
ಶಿಕ್ಷಕರಾಗಿ ಬಂದರು ಶಿಕ್ಷಣ ತಜ್ಞರಾದರು:
ಪ್ರಭಾಕರ ಎಸ್.ರಾಣೆ ಅವರ ತಂದೆ ಪೊಲೀಸ್ ಇಲಾಖೆಯಲ್ಲಿದ್ದರು. ಹಾಗಾಗಿ ಅವರು ಓದಿದ್ದು, ಬೆಳೆದಿದ್ದೆಲ್ಲ ಧಾರವಾಡದಲ್ಲಿ . ಪದವಿ ಮುಗಿಸಿ ಇಲ್ಲಿನ ಸಿದ್ದರ ಮಲ್ಲಿಕಾರ್ಜುನ ಹೈಸ್ಕೂಲ್‌ಗೆ ದೈಹಿಕ ಶಿಕ್ಷಕರಾಗಿ ಆಗಮಿಸಿದರು.
ಕೆಲ ಕಾಲದ ನಂತರ ಶಿಕ್ಷಕ ವೃತ್ತಿ ತೊರೆದು ರಾಜಕೀಯಕ್ಕೆ ಧುಮುಕಿದರು. ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದರು.
ಪಿಯು, ಐಟಿಐ ಕಾಲೇಜ್‌ಗಳನ್ನು ಪ್ರಾರಂಭಿಸಿ ಮಕ್ಕಳಿಗೆ ವೃತ್ತಿ ಶಿಕ್ಷಣ ಕೊಡಿಸಿದರು. ಆಗಿನ ತಾಲೂಕು ಬೋರ್ಡ್ ಸದಸ್ಯರಾಗಿ ರಾಜಕೀಯಕ್ಕೆ ಅಽಕೃತ ಪದಾರ್ಪಣೆ ಮಾಡಿದರು.
ಇದನ್ನೂ ಓದಿ:ಉತ್ತರ ಕನ್ನಡ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆಯಾಗಿ ಘೋಷಿಸಿ
1983 ರಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಆಗಿನ ಕಾರವಾರ-ಜೊಯಿಡಾ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಎದುರಾಳಿ ಅಭ್ಯರ್ಥಿ ಮೋಟಾ ನಾಯ್ಕ ವಿರುದ್ಧ 21,657 ಮತ ಪಡೆದು ವಿಜಯಿಯಾದರು.
1985 ರಲ್ಲಿ 22,867 ಮತ ಪಡೆದು ಆಯ್ಕೆಯಾದರು. ಮತ್ತೆ 1989 ರಲ್ಲಿ 33741 ಮತ ಪಡೆದು ರಾಷ್ಟ್ರೀಯ ಕಾಂಗ್ರೆಸ್‌ನಿಂದ ಆಯ್ಕೆಯಾದರು. ಆಗಿನ ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಗ್ರಂಥಾಲಯ ಮತ್ತು ವಯಸ್ಕರ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದರು.
1994 ರಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೆಸಿಪಿ ಅಭ್ಯರ್ಥಿ ವಸಂತ ಅಸ್ನೋಟಿಕರ್ ಅವರೆದುರು ಸೋಲು ಕಂಡರು. ಮುಂದೆ 1999 ರಲ್ಲಿ ಬಿಜೆಪಿಯಿಂದ 2004 ರಲ್ಲಿ ಜೆಡಿಎಸ್‌ನಿಂದ ಅವರು ಸ್ಪರ್ಧೆ ಮಾಡಿದರೂ ಗೆಲುವು ಸಾಧ್ಯವಾಗಲಿಲ್ಲ. ನಂತರವೂ ಅವರು ವಿವಿಧ ಪಕ್ಷಗಳಲ್ಲಿ ರಾಜಕೀಯದಲ್ಲಿ ಮುಂದುವರಿದಿದ್ದರು.
ಶುದ್ಧ ರಾಜಕಾರಣಿ:
ಪ್ರಭಾಕರ ರಾಣೆ ಒಬ್ಬ ಪರಿಶುದ್ಧ ಹಸ್ಥದ ರಾಜಕಾರಣಿ. ಮೂರು ಬಾರಿ ಶಾಸಕರಾಗಿ ಒಮ್ಮೆ ಸಚಿವರಾಗಿ ಕಾರ್ಯನಿರ್ವಹಿಸಿದರೂ ಅವರು ಕೋಟ್ಯಂತರ ಆಸ್ತಿ ಮಾಡಿ ಗುಡ್ಡೆ ಹಾಕಿದವರಲ್ಲ. ಜನಸೇವೆಯನ್ನೇ ಗುರಿಯಾಗಿಸಿಕೊಂಡಿದ್ದರು. ತೀರ ಇತ್ತೀಚಿನವರೆಗೂ ಅವರ ಬಳಿ ಒಂದು ಕಾರೂ ಇರಲಿಲ್ಲ. ಸಿದ್ದರದಲ್ಲಿ ಒಂದು ಮನೆ ಬಿಟ್ಟರೆ ಅವರ ಬಳಿ ಹೆಚ್ಚಿನ ಆಸ್ತಿ ಇಲ್ಲ. ಈಗಲೂ ಅವರ ಪತ್ನಿ ಕಾರವಾರಕ್ಕೆ ಬಸ್‌ನಲ್ಲಿಯೇ ಓಡಾಡುತ್ತಾರೆ.
ಮಕ್ಕಳಂತೆ ಕಂಡರು:
ಅವರಿಗೆ ಮಕ್ಕಳಿಲ್ಲ. ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುವ ನೌಕರರನ್ನೇ ಪ್ರೀತಿಯಿಂದ ಮಕ್ಕಳಂತೆ ಕಾಣುತ್ತಿದ್ದರು. ಮಕ್ಕಳನ್ನು ಪ್ರೀತಿಯಿಂದ ಕಾಣುತ್ತಿದ್ದರು. ಯಾರಿಗೂ ತೊಂದರೆಕೊಟ್ಟ ಉದಾಹರಣೆಗಳಿಲ್ಲ ಎಂದು ಬಿಜಿವಿಎಸ್ ಕಾಲೇಜ್‌ನ ಪ್ರಾಂಶುಪಾಲ ಡಾ.ಮಹೇಶ ಗೂಳಿಕಟ್ಟಿ ನೆನಪಿಸಿಕೊಳ್ಳುತ್ತಾರೆ.
ಅವರು ಕೇವಲ ಶಿಕ್ಷಣ ಸಂಸ್ಥೆಗಳನ್ನು ಕಟ್ಟಲಿಲ್ಲ. ಒಬ್ಬ ಶಿಕ್ಷಕರಾಗಿ ಅದರಲ್ಲಿ ತೊಡಗಿಸಿಕೊಂಡಿದ್ದರು. ನಿರಂತರ ಅಧ್ಯಯನ ಮಾಡುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ.
ಹೋರಾಟದ ಬದುಕು:
ಸೀಬರ್ಡ್ ನೌಕಾ ಯೋಜನೆಗಾಗಿ ಕಾರವಾರ-ಅಂಕೋಲಾದಲ್ಲಿ 13 ಗ್ರಾಮಗಳನ್ನು ಭೂ ಸ್ವಾಧೀನ ಮಾಡಲಾಯಿತು. ಆಗ ರಾಣೆ ಅವರೇ ಶಾಸಕರಾಗಿದ್ದರು.
ನಿರಾಶ್ರಿತರಾದ ಎಲ್ಲ ಕುಟುಂಬಗಳಿಗೆ ಪರಿಹಾರ ಕೊಡಬೇಕು.
ಪುನರ್ವಸತಿ ಮಾಡಿಕೊಡಬೇಕು. ಕುಟುಂಬದ ಒಬ್ಬರಿಗೆ ಉದ್ಯೋಗ ಕೊಡಬೇಕು. ನಿರಾಶ್ರಿತರಾದವರು ಮೀನುಗಾರಿಕೆಯಂಥ ಪರ್ಯಾಯ ಉದ್ಯೋಗ ಮಾಡಲು ಬಂದರುಗಳನ್ನು ನಿರ್ಮಾಣ ಮಾಡಬೇಕು ಎಂದು ಎಂಒಯು ಮಾಡಲು ಹೋರಾಟ ಮಾಡಿದರು.
ಒಪ್ಪಂದದಂತೆ ಸೌಕರ್ಯಗಳು ದೊರೆಯದಾಗ ನಿರಂತರವಾಗಿ ಹೋರಾಟ ಮಾಡಿದರು. ಹೆಚ್ಚುವರಿ ಸೌಲಭ್ಯಕ್ಕಾಗಿ, ನಿರಾಶ್ರಿತರ ಕೇಂದ್ರಗಳ ಮೂಲ ಸೌಕರ್ಯಕ್ಕಾಗಿ ಹೋರಾಟ ಮಾಡಿದರು ಪ್ರಭಾಕರ ರಾಣೆ ಎಂದು ಅವರ ಅನುಯಾಯಿಯಾಗಿದ್ದ ರವೀಂದ್ರ ಅಮದಳ್ಳಿ ಹೇಳುತ್ತಾರೆ.