ಎಸ್ಸೆಸ್ಸೆಲ್ಸಿ ಉತ್ತೀರ್ಣ ಅಂಕ ಕಡಿಮೆ ವಿರೋಧಿಸಿ ಸಿಎಂಗೆ ಶಿಕ್ಷಣ ತಜ್ಞರ ಪತ್ರ

SSLC Exam
Published on

ಬೆಂಗಳೂರು: ಎಸ್‌ಎಸ್‌ಎಲ್‌ಸಿಯಲ್ಲಿ ಕನಿಷ್ಠ ಉತ್ತೀರ್ಣ ಅಂಕಗಳನ್ನು ಕಡಿಮೆ ಮಾಡುವುದಕ್ಕೆ ಶಿಕ್ಷಣ ತಜ್ಞರು ಮತ್ತು ಸಾಹಿತಿಗಳು ವಿರೋಧ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ಸಾಹಿತಿ ಕೆ.ಮರಳು ಸಿದ್ದಪ್ಪ, ಎಸ್.ಜಿ. ಸಿದ್ದರಾಮಯ್ಯ, ಕೆ.ಎಸ್. ವಿಮಲ, ಬಾಬು ಮಾಥ್ಯು, ಜಾಣಗೆರೆ ವೆಂಕಟರಾಮಯ್ಯ, ಶ್ರೀಪಾದ್ ಭಟ್, ಕೆ.ಎಂ. ವಿಶ್ವನಾಥ ಮರತೂರ, ಬಂಜಗೆರೆ ಜಯಪ್ರಕಾಶ್, ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಸೇರಿ ಪತ್ರ ಬರೆದಿದ್ದಾರೆ.

ಶಿಕ್ಷಣ ಇಲಾಖೆಯ ತೀರ್ಮಾನದಿಂದಾಗಿ ಒಟ್ಟಾರೆ ಶಿಕ್ಷಣದ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುವುದು ಗ್ಯಾರಂಟಿ. 20 ಅಂಕಗಳಿಗೆ ಆಂತರಿಕ ಅಂಕ ಮತ್ತು 80 ಅಂಕಗಳಿಗೆ ಥಿಯೇರಿ ಪರೀಕ್ಷೆ ಇರಲಿದೆ. ಒಟ್ಟಾರೆ ವಿದ್ಯಾರ್ಥಿಯು ಶೇ.30 ಅಂಕಗಳನ್ನು ತೆಗೆಯುವುದರಿಂದ ಇನ್ಮುಂದೆ ಉತ್ತೀರ್ಣರಾಗಬಹುದು ಎಂಬ ಶಿಕ್ಷಣ ಇಲಾಖೆ ನಿರ್ಧಾರ ಎಂತಹ ಗುಣಮಟ್ಟ ಶಿಕ್ಷಣವನ್ನು ನಿರ್ಧರಿಸುತ್ತದೆ?, ಶ್ರದ್ಧೆ, ಬುದ್ಧಿವಂತಿಕೆ, ವಿಚಾರಶಕ್ತಿ ಮತ್ತು ಸಾಧನೆಯನ್ನು ಒಳಗೊಂಡ ಜ್ಞಾನದ ಮೌಲ್ಯಮಾಪನವಾಗದೆ, ಕೇವಲ ಸಂಖ್ಯಾತ್ಮಕ ಉತ್ತೀರ್ಣತೆಯ ಕಡೆಗೆ ವಿದ್ಯಾರ್ಥಿಗಳನ್ನು ದೂಡುತ್ತಿರುವ ಬದಲಾವಣೆಯಾಗಿದೆ. ಈ ರೀತಿಯ ಬದಲಾವಣೆ ಶಿಕ್ಷಣ ಗುಣಮಟ್ಟವನ್ನು ಉನ್ನತ ಮಟ್ಟಕ್ಕೆ ಏರಿಸುವ ಬದಲು ಕೇವಲ ಅಂಕದಾಟದಲ್ಲಿ ಪ್ರಗತಿಯನ್ನು ತೋರಿಸುವ ಪ್ರಕ್ರಿಯೆಯಾಗಿದೆ.

ಒಬ್ಬ ವಿದ್ಯಾರ್ಥಿ ಒಂದು ತರಗತಿಯಲ್ಲಿ ಒಂದು ಶೈಕ್ಷಣಿಕ ವರ್ಷ ಕಳೆಯುವುದಾದರೆ, ಆ ವಿದ್ಯಾರ್ಥಿ ಪ್ರಭುತ್ವದ ಮಟ್ಟಕ್ಕೆ ಕಲಿಯುವಂತೆ ಕ್ರಮವಹಿಸುವುದು ಇಲಾಖೆಯ ಸಾರಥ್ಯ ವಹಿಸಿರುವ ಸಚಿವರ, ಅಧಿಕಾರಿಗಳ ಹಾಗೂ ಶಿಕ್ಷಕರ ಕರ್ತವ್ಯವಾಗಿದೆ. ವಿದ್ಯಾರ್ಥಿಯನ್ನು ಒಂದು ವರ್ಷದ ಕಾಲ ತರಗತಿಯಲ್ಲಿಟ್ಟುಕೊಂಡು ಗರಿಷ್ಠ ನಿಗದಿತ ಶೇಕಡ ಅಂಕದಲ್ಲಿ ಕನಿಷ್ಠ ಶೇ.50 ಅನ್ನೂ ಗಳಿಸದೆ, ಉತ್ತೀರ್ಣಗೊಳಿಸುವುದು ವಿದ್ಯಾರ್ಥಿ ಮತ್ತು ಸಮಾಜದ ದೃಷ್ಟಿಯಿಂದ ಅಪಾಯಕಾರಿ. ಇದು ಯಾವುದೇ ಬಗೆಯಲ್ಲಿಯೂ ಒಂದು ಜ್ಞಾನಾಧಾರಿತ ಸಮಾಜವನ್ನು ಕಟ್ಟಿಕೊಡಲು ನೆರವಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಎಲ್ಲ ಆಂಶಗಳ ಹಿನ್ನೆಲೆಯಲ್ಲಿ ತಾವು ಮಧ್ಯ ಪ್ರವೇಶಿಸಿ ಶಿಕ್ಷಣ ಮೌಲ್ಯವನ್ನು ಅಪಮೌಲ್ಯಗೊಳಿಸುವ ಮತ್ತು ಗುಣಾತ್ಮಕ ಶಿಕ್ಷಣಕ್ಕೆ ಮಾರಕವಾಗುವ ಈ ಅಧಿಸೂಚನೆಯನ್ನು ಹಿಂಪಡೆಯುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net