ಇಂದಿನ ಕಾಲಘಟ್ಟದಲ್ಲಿ ಶಿಕ್ಷಣ ಜಾಗೃತಿ ಅಗತ್ಯ

Mul_awareness
Published on

ಮೂಲ್ಕಿ: ಮೌಲ್ಯಗಳು ಕುಸಿಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಶಿಕ್ಷಣ ಜಾಗೃತಿ ಬಹಳ ಅಗತ್ಯ. ವಿದ್ಯಾರ್ಥಿಗಳ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪ್ರಮುಖ ಘಟ್ಟವಾಗಿದ್ದು, ಶಿಕ್ಷಕರ ಜತೆ ಪಾಲಕರ ಪಾತ್ರ ಮಹತ್ತರವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಹೇಳಿದರು. ಮೂಲ್ಕಿ ಬಪ್ಪನಾಡು ಜ್ಞಾನಮಂದಿರದಲ್ಲಿ ಭಾನುವಾರ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಪಿಯು ಶಿಕ್ಷಣದ ಭವಿಷ್ಯದ ಅವಕಾಶಗಳು ಕುರಿತ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಪ್ಪನಾಡು ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ರಂಗ ಕರ್ಮಿ ಚಂದ್ರಶೇಖರ ಸುವರ್ಣ, ಸುನೀಲ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಪ್ರಭಾತ್ ಸ್ವಾಗತಿಸಿದರು. ಡಾ.ಸುಧಾರಾಣಿ ನಿರೂಪಿಸಿದರು. ಉಪನ್ಯಾಸಕಿ ಮಾಧವಿ ಚಡಗ ವಂದಿಸಿದರು. ಮೂಲ್ಕಿ ತಾಲೂಕಿನ 18 ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಮಕ್ಕಳನ್ನು ಮೊಬೈಲ್ ಹಾಗೂ ಟಿವಿಯಿಂದ ದೂರವಿಟ್ಟು ಶಿಕ್ಷಣಕ್ಕೆ ಮಹತ್ವ ನೀಡಬೇಕಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಸಾಧನೆ ಮಾಡಿ ದೇಶದ ಸಂಪನ್ಮೂಲ ವ್ಯಕ್ತಿಗಳಾಗಬೇಕು. ಮಕ್ಕಳು ಅತಿಯಾದ ಆತ್ಮವಿಶ್ವಾಸ ದೂರವಿಟ್ಟು ಮುಂಬರುವ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳಿಗೆ ಸಮಯ ಪ್ರಜ್ಞೆ ಮೂಲಕ ಮಾನಸಿಕ ಸಿದ್ಧತೆ ನಡೆಸಬೇಕಾಗಿದೆ. - ಡಾ.ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net