ಶಿಕ್ಷಣಕ್ಕೆ ಮಾತ್ರ ಭವಿಷ್ಯ ರೂಪಿಸುವ ಶಕ್ತಿ

Bel_Excel
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಪ್ರತಿಯೊಬ್ಬ ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಕನಸು ಕಾಣಬೇಕು ಮತ್ತು ಗುರಿಯನ್ನು ಇಟ್ಟುಕೊಳ್ಳಬೇಕು. ಶಿಕ್ಷಣ ಪಡೆಯುವ ಸಮಯವನ್ನು ನಿರ್ಲಕ್ಷೃ ಮಾಡಬೇಡಿ. ಹಾಗೆ ಮಾಡಿದರೆ ಭವಿಷ್ಯವನ್ನು ಹಾಳುಮಾಡಿಕೊಂಡಂತೆ. ಹಿಂದೆ ಬಹುತೇಕ ಮಕ್ಕಳಿಗೆ ಮಾರ್ಗದರ್ಶಕರು ಇರಲಿಲ್ಲ. ಇಂದು ಗುರುವಾಯನಕೆರೆ ಎಕ್ಸೆಲ್ ಕಾಲೇಜು ಮಕ್ಕಳ ಶಿಕ್ಷಣ ಮುಂದಿನ ಬಗ್ಗೆ ದಾರಿತೋರಿಸುವ ಉತ್ತಮ ಕೆಲಸ ಮಾಡುತ್ತಿದೆ. ಇದನ್ನು ಸದುಪಯೋಗಪಡಿಸಿಕೊಂದು ಭವಿಷ್ಯ ರೂಪಿಸಿಕೊಳ್ಳಿ ಎಂದು ಶಿಕ್ಷಕ ಖ್ಯಾತ ವಾಗ್ಮಿ ಅಜಿತ್ ಕುಮಾರ್ ಕೊಕ್ರಾಡಿ ಹೇಳಿದರು.

ಭಾನುವಾರ ಎಕ್ಸೆಲ್ ಕಾಲೇಜು ಗುರುವಾಯನಕೆರೆ ವತಿಯಿಂದ ಅರಮಲೆಬೆಟ್ಟ ಕ್ಯಾಂಪಸ್ ಎಕ್ಸೆಲ್ ಪಿಯು ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ನಂತರ ಮುಂದೇನು ಎಂಬ ಹತ್ತನೆ ತರಗತಿ ಮಕ್ಕಳಿಗೆ ಮತ್ತು ಪಾಲಕರಿಗೆ ನಡೆದ ವಿಷೇಷ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉತ್ತಮ ಶಿಕ್ಷಣಕ್ಕೆ ಉತ್ತಮ ಕಾಲೇಜನ್ನು ಆಯ್ಕೆಮಾಡಬೇಕಾಗಿದೆ. ಇಂದು ರಾಜ್ಯಾದ್ಯಂತ ಹೆಸರುವಾಸಿಯಾದ ಎಕ್ಸೆಲ್ ಕಾಲೇಜು ನೂರಾರು ಸಾಧಕ ವಿದ್ಯಾರ್ಥಿಗಳನ್ನು ಪಡೆದಿದೆ. ಮಕ್ಕಳಿಗೆ ಭವಿಷ್ಯ ರೂಪಿಸುವ ಕನಸನ್ನು ಕಾಲೇಜು ಕಂಡಿರುವುದು ಇಂದಿನ ಮಕ್ಕಳ ಭಾಗ್ಯ ಎಂದು ಅವರು ಹೇಳಿದರು.

ಶಿಕ್ಷಕ ಧರಣೇಂದ್ರ ಜೈನ್ ಮಾತನಾಡಿ, ಮಕ್ಕಳಿಗೆ ಯಾವ ಆಯ್ಕೆಯನ್ನು ಮಾಡಿಕೊಳ್ಳುವ ಅವಕಾಶ ಇಂದು ಇದೆ. ಆದರೆ ಮಕ್ಕಳಲ್ಲಿ ಕಲಿಯುವ ಆಸಕ್ತಿ ಬೇಕು. ಹಿರಿಯರು ನಮಗೇನು ಮಾಡಿದ್ದಾರೆ ಎನ್ನುವುದಕ್ಕಿಂತ ನಾನೇನು ಹಿರಿಯರಿಗೆ ನೀಡಬಲ್ಲೆನು ಎನ್ನುವ ಸಂಕಲ್ಪ ಮಾಡಬೇಕು ಅದಕ್ಕೆ ಶಿಕ್ಷಣವೊಂದೇ ದಾರಿ ಎಂದರು.

ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಇಂಜಿನಿಯರ್, ಡಾಕ್ಟರ್ ಆಗಬೇಕು ಎನ್ನುವ ಕನಸು ಕಾಣುವುದು ತಪ್ಪಲ್ಲ. ಆದರೆ ಎಕ್ಸೆಲ್ ಕಾಲೇಜು ಅವರನ್ಬು ಉತ್ತಮ ಇಂಜಿನಿಯರ್, ಉತ್ತಮ ಡಾಕ್ಟರ್ ಮಾಡುವ ಕನಸು ಕಾಣುತ್ತದೆ ಮತ್ತು ಮಾಡಿಸಿಯೇ ಮಾಡುತ್ತದೆ. ನುರಿತ ಉಪನ್ಯಾಸಕರ ತಂಡ ಕಾಲೇಜಿನಲ್ಲಿ ಇದ್ದು ಉತ್ತಮ ಹಾಸ್ಟೆಲ್ ವ್ಯವಸ್ಥೆ ಇದೆ. ಸಿಇಟಿ, ನೀಟ್, ಜೆಯುಯು ಇನ್ನಿತರ ಬೇರೆ ಬೇರೆ ಪರೀಕ್ಷಾ ತಯಾರಿ ಬಗ್ಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಮುಂದೆ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಒಂದು ತಿಂಗಳ ಕಾಲ ಮಾಹಿತಿ ಕಾರ್ಯಾಗಾರ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳ ಉತ್ತಮ ಭವಿಷ್ಯ ರೂಪಿಸುವುದೇ ಎಕ್ಸೆಲ್ ಕಾಲೇಜಿನ ಕನಸು ಎಂದರು. ಪತ್ರಕರ್ತರಾದ ಮನೋಹರ್ ಬಳಂಜ, ಸಂತೊಷ್ ಪಿ.ಕೋಟ್ಯಾನ್ ಶುಭಹಾರೈಸಿದರು.

ಎಕ್ಸೆಲ್ ವಿದ್ಯಾಸಾಗರ ಕ್ಯಾಂಪಸ್‌ನ ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ಸ್ವಾಗತಿಸಿ ಎಕ್ಸೆಲ್ ಅರಮಲೆಬೆಟ್ಟ ಕ್ಯಾಂಪಸ್‌ನ ಪ್ರಾಂಶುಪಾಲ ಡಾ.ಪ್ರಜ್ವಲ್ ಕಜೆ ವಂದಿಸಿದರು. ಉಪನ್ಯಾಸಕ ಮಹಮ್ಮದ್ ಮುನೀರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net