

ಅಸುರಕ್ಷಿತ ಆಹಾರದಿಂದ ಜಗತ್ತಿನಾದ್ಯಂತ ಪ್ರತಿ ವರ್ಷ 60 ಕೋಟಿ ಜನರು ಅಸ್ವಸ್ಥರಾಗುತ್ತಿದ್ದಾರೆ ಹಾಗೂ ಸುಮಾರು 4.2 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲು್ಯಎಚ್ಒ) ಮಹಾ ಕಾರ್ಯದರ್ಶಿ ಟೆಡ್ರೋಸ್ ಅಧಾನಂ ಘೕಬ್ರಿಯೆಸಸ್ ಅವರು ದೆಹಲಿಯಲ್ಲಿ ನಡೆದ ಸಮಾವೇಶವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರು ಉಪಸ್ಥಿತರಿದ್ದ ‘ಎರಡನೇ ಜಾಗತಿಕ ಆಹಾರ ನಿಯಂತ್ರಣ ಶೃಂಗಸಭೆ’ಯಲ್ಲೇ ಘೇಬ್ರಿಯೆಸಸ್ ಅವರು ಈ ಕುರಿತು ಮಾತನಾಡಿದ ವಿಡಿಯೋ ಸಂದೇಶವನ್ನು ಬಿತ್ತರಿಸಲಾಗಿದೆ. ಜನಸಂಖ್ಯಾ ಏರಿಕೆ, ಜಾಗತೀಕರಣ, ಕೈಗಾರಿಕೀಕರಣ, ಹವಾಮಾನ ಬದಲಾವಣೆ, ಹೊಸಹೊಸ ತಂತ್ರಜ್ಞಾನಗಳಿಂದಾಗಿ ನಮ್ಮ ಆಹಾರ ವ್ಯವಸ್ಥೆಗೂ ಸವಾಲುಗಳು ಎದುರಾಗಿವೆ. ಅಸುರಕ್ಷಿತ ಆಹಾರದಿಂದ ಸಾಯುತ್ತಿರುವವರಲ್ಲಿ ಶೇ. 70ರಷ್ಟು ಜನರು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಎಂಬುದು ಮತ್ತಷ್ಟು ಕಳವಳಕಾರಿಯಾಗಿದೆ. ಜಗತ್ತಿನಾದ್ಯಂತ ಕೋಟ್ಯಂತರ ಜನರು ಪೌಷ್ಟಿಕಾಂಶಯುಕ್ತ ಆಹಾರ ಸಿಗದೆ ಪರದಾಡುತ್ತಿರುವ ಸಂದರ್ಭದಲ್ಲಿ ಅಸುರಕ್ಷಿತ ಆಹಾರ ಪದಾರ್ಥಗಳು ಜಗತ್ತಿನೆಲ್ಲೆಡೆ ವಿಜೃಂಭಿಸುತ್ತಿರುವುದು ಆತಂಕಕಾರಿಯಾಗಿದೆ.
ಈ ಪರಿಸ್ಥಿತಿಯನ್ನು ನಿಯಂತ್ರಿಸು ವಲ್ಲಿ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ವಲಯದ ಆರೋಗ್ಯ ನಿಯಂತ್ರಕ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ದೇಶ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಈ ಸಂಸ್ಥೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ತಮಗೆ ತೋಚಿದ ರೀತಿಯಲ್ಲಿ ನಿಯಂತ್ರಣ ಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದರೆ ಪರಿಣಾಮಗಳು ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ಜಾಗತಿಕ ಸ್ತರದಲ್ಲಿ ಒಂದು ಸಂಯೋಜಿತ ಪ್ರಯತ್ನ ನಡೆದರೆ ಅಸುರಕ್ಷಿತ ಆಹಾರ ಪದಾರ್ಥಗಳ ತಯಾರಿಕೆ, ಸಾಗಣೆ ಮತ್ತು ಮಾರಾಟವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗುತ್ತದೆ. ಮನೆಯಿಂದ ಹೊರಗೆ ಆಹಾರ ಸೇವನೆ ಮಾಡುವುದು ಅನಿವಾರ್ಯವಲ್ಲದಿದ್ದರೂ, ಈ ಪದ್ಧತಿ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ವೀಕೆಂಡ್ಗಳಲ್ಲಂತೂ ಹೋಟೆಲ್ಗಳಲ್ಲಿ ಮತ್ತು ರಸ್ತೆ ಬದಿಯ ಆಹಾರ ಮಾರಾಟ ಮಳಿಗೆಗಳಲ್ಲಿ ನಿಲ್ಲಲು, ಕುಳಿತುಕೊಳ್ಳಲು ಜಾಗವಿಲ್ಲದಷ್ಟು ಜನಸಂದಣಿ ಕಾಣಿಸುತ್ತದೆ. ಈ ಧಾವಂತದ ಮಧ್ಯೆ ಜನರು ತಾವೇನು ತಿನ್ನುತ್ತಿದ್ದೇವೆ, ಅದು ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ ಎಂಬುದರ ಕಡೆ ಗಮನ ಹರಿಸುವುದನ್ನೇ ಮರೆತುಬಿಡುತ್ತಿದ್ದಾರೆ. ಇತ್ತೀಚೆಗೆ ರಾಷ್ಟ್ರ ರಾಜಧಾನಿಯ ಹತ್ತಿರದ ನೋಯ್ಡಾದಲ್ಲಿ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ಡಿಎ) ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 168 ಆಹಾರ ಪದಾರ್ಥಗಳು ಮನುಷ್ಯರು ಸೇವಿಸಲು ಯೋಗ್ಯವಲ್ಲ ಎಂಬುದು ದೃಢಪಟ್ಟಿದೆ. ಅದರಲ್ಲಿ ಖೋವಾ, ಪನೀರ್ನಂತಹ ದೈನಂದಿನ ಖಾದ್ಯ ಪದಾರ್ಥಗಳೂ ಇವೆ. ಕೆಲವು ಪದಾರ್ಥಗಳಲ್ಲಿ ಯೂರಿಯಾ, ಸ್ಟಾರ್ಚ್ನಂತಹ ವಸ್ತುಗಳನ್ನು ಬೆರೆಸಿರುವುದು ಗೊತ್ತಾಗಿದೆ. ಸಂಬಂಧಿಸಿದ ಮಾರಾಟಗಾರರ ಮೇಲೆ ದಂಡ ವಿಧಿಸಲಾಗಿದೆ. ಈಗಂತೂ ಆಹಾರ ಪದಾರ್ಥಗಳಲ್ಲಿ ನಡೆಯುತ್ತಿರುವ ಕಲಬೆರಕೆಯ ಬಗ್ಗೆ ಪ್ರತಿದಿನವೆಂಬಂತೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿರುತ್ತವೆ. ಆದರೆ ಅದರಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾವು-ನೋವು ಸಂಭವಿಸುತ್ತಿದೆ ಎಂಬುದರ ಬಗ್ಗೆ ಯಾರೂ ತಲೆಕೆಡಿಸಿಕೊಂಡಂತಿಲ್ಲ. ಈಗಲಾದರೂ ಸರ್ಕಾರಗಳು ಮತ್ತು ಸಾರ್ವಜನಿಕರು ಈ ವಿಷಯದಲ್ಲಿ ಎಚ್ಚೆತ್ತುಕೊಳ್ಳಬೇಕಾಗಿದೆ.