

ಹದಿನಾಲ್ಕು ವರ್ಷಗಳ ನಂತರ ರಾಜಧಾನಿ ದೆಹಲಿ ಮತ್ತೊಮ್ಮೆ ಭೀಕರ ಭಯೋತ್ಪಾದಕ ದಾಳಿಯಿಂದ ಬೆಚ್ಚಿಬಿದ್ದಿದೆ. ದೆಹಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣ ಪ್ರವೇಶ ದ್ವಾರದ ಬಳಿ ಸೋಮವಾರ ಸಂಜೆ ಸಂಭವಿಸಿದ ಕಾರ್ ಬಾಂಬ್ ಸ್ಪೋಟದಲ್ಲಿ 12 ಜನರು ಪ್ರಾಣ ಕಳೆದುಕೊಂಡಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸ್ಪೋಟದ ತೀವ್ರತೆಗೆ ಸುತ್ತಮುತ್ತಲಿನ ವಾಹನಗಳು, ಕಟ್ಟಡಗಳಿಗೂ ಹಾನಿಯಾಗಿದೆ. ಭಯೋತ್ಪಾದಕರ ಈ ಹೇಯ ಕೃತ್ಯ ಖಂಡನೀಯ.
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ನಡೆದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ನಂತರ ಭಯೋತ್ಪಾದಕ ಸಂಘಟನೆಗಳು, ಅದರ ಮುಖಂಡರು ಹತಾಶರಾಗಿದ್ದು, ವಿಧ್ವಂಸಕ ಕೃತ್ಯ ನಡೆಸಲು ಹೊಂಚು ಹಾಕುತ್ತಿದ್ದಾರೆ. ಸೋಮವಾರವಷ್ಟೇ ಜಮ್ಮು-ಕಾಶ್ಮೀರ ಪೊಲೀಸರು ಜೈಷ್-ಎ-ಮೊಹಮ್ಮದ್ ಸಂಘಟನೆಯ ಹಲವು ಉಗ್ರರನ್ನು ಬಂಧಿಸಿ, 2900 ಕೆಜಿ ಸ್ಪೋಟಕ ವಶಪಡಿಸಿಕೊಂಡಿದ್ದರು. ಈ ಉಗ್ರರು ದೇಶಾದ್ಯಂತ ರಕ್ತಪಾತ ನಡೆಸುವ ಸಂಚು ರೂಪಿಸಿದ್ದರು. ಉಗ್ರರ ಬಂಧನದ ಕೆಲವೇ ಗಂಟೆಗಳಲ್ಲಿ ದೆಹಲಿಯಲ್ಲಿ ಸ್ಫೋಟ ಸಂಭವಿಸಿದೆ. ಈ ಬಾಂಬ್ ಸ್ಪೋಟದಲ್ಲಿ ಪಾಕಿಸ್ತಾನದ ಕೈವಾಡವಿರುವುದಕ್ಕೆ ಪುರಾವೆ ಸಿಕ್ಕಿದೆ. ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ನಡೆಸಿದ್ದ ಆಪರೇಷನ್ ಸಿಂಧೂರಕ್ಕೆ ಪ್ರತೀಕಾರವಾಗಿ ಪಾಕಿಸ್ತಾನದ ಜೈಷ್ -ಎ-ಮೊಹಮ್ಮದ್ ಉಗ್ರ ಸಂಘಟನೆ ವೈದ್ಯರು, ವೃತ್ತಿಪರರನ್ನು ಬಳಸಿಕೊಂಡು ಇದೇ ಮೊದಲ ಬಾರಿಗೆ ವೈಟ್ ಕಾಲರ್ ಭಯೋತ್ಪಾದನೆಯನ್ನು ಭಾರತದ ಮೇಲೆ ಪ್ರಯೋಗಿಸಿದೆ. ಅಲ್ಲದೆ, ಇದರಲ್ಲಿ ಭಯೋತ್ಪಾದಕಿಯರೂ ತೊಡಗಿಕೊಂಡಿರುವುದು, ಉಗ್ರ ಸಂಘಟನೆಗಳು ಕಾರ್ಯತಂತ್ರ ಬದಲಿಸಿಕೊಂಡಿರುವುದಕ್ಕೆ ನಿದರ್ಶನ.
ಶಾಂತಿ ಮತ್ತು ಅಭಿವೃದ್ಧಿಯ ಪಯಣಕ್ಕೆ ಅಡ್ಡಿ ಮಾಡಲು ಉಗ್ರರು ಹವಣಿಸುತ್ತಲೇ ಇದ್ದಾರೆ. ಭಾರತ ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ದಿಟ್ಟ ಹೆಜ್ಜೆಗಳನ್ನು ಇಟ್ಟಿರುವಾಗ ಈ ಘಟನೆ ನಡೆದಿರುವುದು ನೋವಿನ ಸಂಗತಿ. ಆದರೆ, ಇದನ್ನು ಹಿನ್ನಡೆ ಎಂದು ಭಾವಿಸದೆ ಭಯೋತ್ಪಾದನೆಯ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಿದೆ. ‘ನಮ್ಮ ತನಿಖಾ ಸಂಸ್ಥೆಗಳು ಆಳವಾಗಿ ತನಿಖೆ ನಡೆಸಿ ಸಂಚಿನ ಮೂಲ ಪತ್ತೆ ಮಾಡಲಿವೆ. ಪ್ರಕರಣದ ಹಿಂದಿರುವ ಸಂಚುಕೋರರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಪ್ರತಿಯೊಬ್ಬರನ್ನೂ ಕಾನೂನಿನ ಮುಂದೆ ತಂದು ನಿಲ್ಲಿಸಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಭರವಸೆ ನೀಡಿದ್ದಾರೆ. ದೆಹಲಿ ದಾಳಿ ಕೃತ್ಯದ ಹಿಂದಿರುವ ಪ್ರತಿಯೊಬ್ಬರನ್ನೂ ಬೇಟೆಯಾಡುವಂತೆ ಗೃಹ ಸಚಿವ ಅಮಿತ್ ಷಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ದೆಹಲಿಯ ಘಟನೆ ಕಣ್ಣು ತೆರೆಸಬೇಕು. ದೇಶದ ಎಲ್ಲ ಮಹಾನಗರಗಳಲ್ಲಿ, ಪ್ರಮುಖ ಪ್ರವಾಸಿತಾಣಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಬೇಕು. ಈ ನಿಟ್ಟಿನಲ್ಲಿ ಬಿಗಿ ಬಂದೋಬಸ್ತ್ ಅಗತ್ಯ. ಜನರು ಕೂಡ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು. ದೇಶದೊಳಗೆ ಅಡಗಿರುವ ದೇಶದ್ರೋಹಿಗಳು ಮತ್ತು ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಮಾತ್ರ ಆಂತರಿಕ ಭದ್ರತೆ ಬಲಪಡಿಸಲು ಸಾಧ್ಯ. ಅಲ್ಲದೆ, ದೆಹಲಿ ಘಟನೆಗೆ ಸಂಬಂಧಿಸಿ ಯಾರೇ ತಪ್ಪಿತಸ್ಥರಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಉಗ್ರಜಾಲಗಳನ್ನು ಬೇರುಸಮೇತ ನಿಮೂಲನಗೊಳಿಸಲು ಸಂಕಲ್ಪ ಮಾಡಬೇಕು. ಸ್ಥಳೀಯವಾಗಿ ಉಗ್ರಜಾಲಗಳಿಗೆ ಬೆಂಬಲ ನೀಡುವವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಅಗತ್ಯ.