ಸಂಪಾದಕೀಯ; ರಾಜತಾಂತ್ರಿಕ ಕಾರ್ಯತಂತ್ರ

India America
Published on

ಕಾಶ್ಮೀರದ ಪಹಲ್ಗಾಮ್​ನಲ್ಲಿ  ಭಯೋತ್ಪಾದನಾ ದಾಳಿಗೆ ಪ್ರತಿಯಾಗಿ ಭಾರತ ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ನಾನಾ ಲೆಕ್ಕಾಚಾರಗಳು ನಡೆಯುತ್ತಿವೆ. ಭಾರತ ಸರ್ಕಾರ ಈಗಾಗಲೇ ಕೆಲ ಕ್ರಮಗಳನ್ನು ಜಾರಿಗೊಳಿಸಿದ್ದು, ಇದು ಇಷ್ಟಕ್ಕೇ ನಿಲ್ಲುವುದಿಲ್ಲ ಎಂಬುದು ಖರೆ. ಸಿಂಧೂ ನದಿ ಒಪ್ಪಂದ ರದ್ದತಿ, ಭಾರತದಲ್ಲಿನ ಪಾಕ್ ರಾಯಭಾರ ಕಚೇರಿ ಹಾಗೂ ಪಾಕಿಸ್ತಾನದಲ್ಲಿನ ಭಾರತೀಯ ರಾಯಭಾರ ಕಚೇರಿ ಅಧಿಕಾರಿ-ಸಿಬ್ಬಂದಿ ಸಂಖ್ಯೆ ಇಳಿಕೆ, ವಾಯುಪ್ರದೇಶ ಬಳಕೆಗೆ ನಿರ್ಬಂಧ, ಭಾರತದಲ್ಲಿರುವ ಪಾಕ್ ನಾಗರಿಕರ ಗಡಿಪಾರು- ಇತ್ಯಾದಿ ಕ್ರಮಗಳು ಈಗಾಗಲೇ ಜಾರಿಯಾಗಿದ್ದು, ಪಾಕಿಸ್ತಾನದ ಮೇಲೆ ಅದರ ಪರಿಣಾಮಗಳೂ ಗೋಚರಿಸತೊಡಗಿವೆ.

ಇದೇ ಸಂದರ್ಭದಲ್ಲಿ ಭಾರತ ತನ್ನ ನಿಲುವಿನ ಬಗ್ಗೆ ಹಾಗೂ ಭಯೋತ್ಪಾದನೆಗೆ ಪಾಕ್ ಕುಮ್ಮಕ್ಕಿನ ಬಗ್ಗೆ ಜಾಗತಿಕ ಪ್ರಮುಖ ದೇಶಗಳಿಗೆ ವಿವರಣೆ ನೀಡಿ, ಅವುಗಳ ಬೆಂಬಲ ಪಡೆಯುವ ರಾಜತಾಂತ್ರಿಕ ಪ್ರಯತ್ನವನ್ನು ಮುಂದುವರಿಸಿದೆ. ಈ ಪ್ರಯತ್ನದ ಮುಂದುವರಿದ ಭಾಗವಾಗಿ, ಭಾರತ ಹಾಗೂ ಅಮೆರಿಕದ ಪ್ರಮುಖ ನಾಯಕರ ನಡುವೆ ಚರ್ಚೆ ನಡೆದಿದ್ದು, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬೆಂಬಲ ನೀಡುವುದಾಗಿ ಅಮೆರಿಕ ಘೋಷಿಸಿದ್ದು, ಪಾಕಿಸ್ತಾನಕ್ಕೆ ಮತ್ತೊಂದು ಹಿನ್ನಡೆ ಎಂದೇ ಹೇಳಬಹುದಾಗಿದೆ.

ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಗೆತ್ ಅವರು ದೂರವಾಣಿ ಮುಖಾಂತರ ರ್ಚಚಿಸಿದರು. ಜಾಗತಿಕ ಭಯೋತ್ಪಾದನೆಯನ್ನು ಉತ್ತೇಜಿಸುವ ದೇಶವಾಗಿ ಪಾಕ್ ರೂಪುಗೊಂಡಿದೆ ಎಂಬ ಅಂಶವನ್ನು ಸಚಿವ ರಾಜನಾಥ ಸಿಂಗ್ ಈ ವೇಳೆ ಸ್ಪಷ್ಟಮಾತುಗಳಲ್ಲಿ ಹೇಳಿದರು. ಭಾರತಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಇದೆ, ಅದನ್ನು ಅಮೆರಿಕ ಬೆಂಬಲಿಸುತ್ತದೆ. ಹಾಗೇ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲೂ ಅಮೆರಿಕ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಪೀಟ್ ಹೆಗ್ಗೆತ್ ತಿಳಿಸಿದರು. ಇನ್ನೊಂದೆಡೆ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೆ ರುಬಿಯೋ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಕರೆಮಾಡಿ, ರ್ಚಚಿಸಿದರು. ಎರಡೂ ದೇಶಗಳು ಉದ್ವಿಗ್ನತೆ ತಗ್ಗಿಸಲು ಮಾತುಕತೆ ನಡೆಸುವಂತೆ ರುಬಿಯೋ ಅವರು ಸಲಹೆ ನೀಡಿದರು. ರಷ್ಯಾ ಇತ್ಯಾದಿ ದೇಶಗಳು ಸಹ ಭಾರತದ ನಿಲುವಿಗೆ ಸಹಮತ ವ್ಯಕ್ತಪಡಿಸಿರುವುದು ಭಾರತದ ನೈತಿಕ ಶಕ್ತಿಯನ್ನು ಹೆಚ್ಚಿಸುವ ಬೆಳವಣಿಗೆಗಳು.

ಹಿಂದೆ ಉರಿ ಹಾಗೂ ಪುಲ್ವಾಮಾ ಉಗ್ರದಾಳಿಗೆ ಪ್ರತಿಯಾಗಿ ಸೇನಾಕ್ರಮ ತೆಗೆದುಕೊಳ್ಳುವ ಮುನ್ನವೂ ಭಾರತ ತನ್ನ ನಿಲುವನ್ನು ಹಾಗೂ ಪಾಕ್ ಕಿತಾಪತಿಯನ್ನು ಪ್ರಮುಖ ದೇಶಗಳಿಗೆ ಮನದಟ್ಟು ಮಾಡಿತ್ತು. ಹೀಗಾಗಿ ಪಾಕಿಸ್ತಾನದ ಬೊಬ್ಬೆಯ ಹೊರತಾಗಿಯೂ ಪ್ರಮುಖ ದೇಶಗಳು ಅದರ ಬೆಂಬಲಕ್ಕೆ ಬರಲಿಲ್ಲ. ಪಹಲ್ಗಾಮ್ ದಾಳಿಗೆ ಭಾರತದ ಸೇನಾಕ್ರಮ ಏನಿರಬಹುದು ಎಂಬ ಬಗ್ಗೆ ನಾನಾ ವ್ಯಾಖ್ಯಾನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮುಂದಿನ ಬೆಳವಣಿಗೆಗಳನ್ನು ಕಾದುನೋಡಬೇಕಷ್ಟೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net