ಸಂಪಾದಕೀಯ: ಗೊಂದಲ ನಿವಾರಿಸಿ

ವಿಜಯವಾಣಿ (3)
Published on

ರಾಜ್ಯದಲ್ಲಿ ಪ್ರಸ್ತುತ ಅತಿ ಹೆಚ್ಚು ಚರ್ಚೆಯಾಗುತ್ತಿರುವ, ಪರಾಮರ್ಶೆಗೆ ಒಳಗಾಗುತ್ತಿರುವ ವಿಚಾರ ಜಾತಿ ಸಮೀಕ್ಷೆ ಅರ್ಥಾತ್ ಜಾತಿ ಗಣತಿ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ನೇತೃತ್ವದಲ್ಲಿ ನಡೆಯುತ್ತಿರುವ ಈ ‘ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ’ಯ ಪರ-ವಿರೋಧ ಅಭಿಪ್ರಾಯಗಳು, ಆಕ್ಷೇಪಣೆಗಳು ಸಾಕಷ್ಟು ಕೇಳಿಬರುತ್ತಿವೆ. ಇದೆಲ್ಲದರ ನಡುವೆಯೂ ರಾಜ್ಯ ಸರ್ಕಾರ ಈ ಸಮೀಕ್ಷೆಯನ್ನು ಮುಂದುವರಿಸಿದೆ. ಸಮೀಕ್ಷೆಯನ್ನು ತಡಮಾಡದೆ ಪೂರ್ಣಗೊಳಿಸುವುದಲ್ಲದೆ ಆಯೋಗದಿಂದ ವರದಿ ಪಡೆದು ಮೀಸಲು ಪ್ರಮಾಣ ಹೆಚ್ಚಿಸಲು ನಿರ್ಣಯಿಸಬೇಕೆಂಬುದು ಸರ್ಕಾರದ ಅಂತಿಮ ಉದ್ದೇಶ ಇದ್ದಂತಿದೆ. ಆದರೆ, ತಳಮಟ್ಟದಲ್ಲಿ ಗೊಂದಲ ಗೋಜಲು ಇದೆ. ಸಮೀಕ್ಷಾ ವೈಖರಿಗೆ ಕೆಲವು ಸಾರ್ವಜನಿಕರಿಂದ ಮಾತ್ರವಲ್ಲದೆ ಆಡಳಿತ ಪಕ್ಷದವರಿಂದಲೂ, ಪ್ರತಿಪಕ್ಷದವರಿಂದಲೂ ಆಕ್ಷೇಪ ವ್ಯಕ್ತವಾಗುತ್ತಿದೆ.

ಸಮೀಕ್ಷೆಯ ಪ್ರಶ್ನಾಪಟ್ಟಿಯಲ್ಲಿ ಕೆಲವು ಅನಗತ್ಯ ಪ್ರಶ್ನೆಗಳು ಇವೆ, ಇವುಗಳನ್ನೆಲ್ಲ ಮುಗಿಸಲು ಹೆಚ್ಚು ಸಮಯ ಹಿಡಿಯುತ್ತಿದೆ ಎಂಬಿತ್ಯಾದಿ ದೂರುಗಳು ಕೇಳಿಬರುತ್ತಿವೆ. ಹಾಗೆಯೇ ವೈಯಕ್ತಿಕ ಮಾಹಿತಿ ಸೋರಿಕೆಯಾದರೆ ಆಗುವ ನಷ್ಟ ಭರಿಸುವವರಾರು ಎಂಬ ಪ್ರಶ್ನೆಯನ್ನೂ ಕೆಲವು ಸಾರ್ವಜನಿಕರು ಕೇಳುತ್ತಿದ್ದಾರೆ. ಅಲ್ಲದೆ, ತರಾತುರಿಯಲ್ಲಿ ಸಮೀಕ್ಷೆ ನಡೆಸಲಾಗುತ್ತಿದ್ದು, ಇದು ಹಲವು ಅಪಸವ್ಯ, ಗೊಂದಲ ಹಾಗೂ ಪ್ರಮಾದಗಳಿಗೆ ಕಾರಣವಾಗುತ್ತಿದೆ. ಸಮೀಕ್ಷೆಗೆ ಅಂಗವಿಕಲರನ್ನು ಬಳಸಿಕೊಂಡಿರುವುದು, ಶಿಕ್ಷಕರನ್ನು ಪರಿಚಯ ಇಲ್ಲದ ಸ್ಥಳದಲ್ಲಿ ಸಮೀಕ್ಷೆಗೆ ನಿಗದಿ ಮಾಡಿರುವುದು, ಆರೋಗ್ಯ ಸಮಸ್ಯೆಯ ಕಾರಣ ಹೇಳಿದರೂ ಹಿರಿಯ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದೆ ಬೆದರಿಸಿ ಸಮೀಕ್ಷೆ ಮಾಡಿಸುತ್ತಿರುವುದು... ಹೀಗೆ ಗಣತಿದಾರರ ವಲಯದಲ್ಲೂ ಅಸಮಾಧಾನ ಮಡುಗಟ್ಟಿದೆ.

ಆರಂಭದಲ್ಲಿ ಗಣತಿ ಉದ್ದೇಶದಿಂದ ಆಯೋಗ ಸಿದ್ಧಪಡಿಸಿಕೊಂಡ ಜಾತಿ ಪಟ್ಟಿ ಬಗ್ಗೆ ಆಕ್ಷೇಪಣೆಗಳು ಬಂದಿದ್ದವು. ಹಾಗೂಹೀಗೂ ಕೆಲವು ಜಾತಿಗಳ ಹೆಸರನ್ನು ಗಣತಿ ಪಟ್ಟಿಯಿಂದ ಕೈಬಿಡುವ ಮೂಲಕ ಸಮುದಾಯಗಳ ಆಕ್ರೋಶವನ್ನು ತಣಿಸುವ ಪ್ರಯತ್ನ ನಡೆಯಿತು. ಆದರೂ ಗೊಂದಲಗಳು ಕಡಿಮೆಯಾಗಿಲ್ಲ. ಈ ಸಮೀಕ್ಷೆ ಜಾತಿ ಎಣಿಕೆಗೆ ಮಾತ್ರ ಸೀಮಿತವಲ್ಲ, ಸರ್ಕಾರದ ವಿವಿಧ ಇಲಾಖೆಗಳಿಗೆ ಯೋಜನೆಗಳನ್ನು ರೂಪಿಸುವುದಕ್ಕೆ ಹಾಗೂ ಸಮಸ್ಯೆಗಳನ್ನು ಪ್ರದೇಶವಾರು ಅರಿತುಕೊಳ್ಳಲು ಅನುವಾಗುವಂತೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ ಎಂದು ಆಯೋಗ ಸಮಜಾಯಿಷಿ ನೀಡಿದರೂ, ಜನರಲ್ಲಿ ಈ ಪ್ರಶ್ನೆಗಳ ಬಗ್ಗೆ ಸಹಮತವಿಲ್ಲ. ಇದಕ್ಕೆ ಕಾರಣ ಅರಿವು ಮೂಡಿಸುವ ಕೆಲಸ ಸರಿಯಾದ ರೀತಿಯಲ್ಲಿ ಆಗಿಲ್ಲ. ಇದು ಒಂದು ಭಾಗವಾದರೆ, ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂಬ ಅಂಶ ಈಗ ದಟ್ಟವಾಗಿ ಹರಡಿರುವುದು ಇನ್ನೊಂದು ಮಹತ್ವದ ಭಾಗ.

ಅನೇಕ ಮನೆಗಳಲ್ಲಿ ಮಾಹಿತಿ ನೀಡದೇ ಕಳಿಸಲಾಗುತ್ತಿದೆ. ಇದು ಒಟ್ಟಾರೆ ಸಮೀಕ್ಷಾ ವರದಿಯ ಮೇಲೆ ಪರಿಣಾಮ ಬೀರುವುದು ನಿಚ್ಚಳ. ‘ಗಣತಿದಾರರಿಗೆ ಮಾಹಿತಿಯನ್ನು ಏಕೆ ಕೊಡಬೇಕು? ಮಾಹಿತಿ ಕೊಡುವುದರಿಂದ ಸರ್ಕಾರಕ್ಕೇನು ಅನುಕೂಲ? ಸಮುದಾಯಗಳಿಗೆ ಏನು ಉಪಯೋಗ?’ ಎಂಬ ಸಂಗತಿಗಳನ್ನು ಜನರಿಗೆ ತಿಳಿಸಿಕೊಡುವಲ್ಲಿ ಸರ್ಕಾರ ಎಡವಿದ್ದರ ಪರಿಣಾಮವಿದು. ಈಗ ಸಂಗ್ರಹಿಸಿರುವ ದತ್ತಾಂಶದ ಅಂಕಿಸಂಖ್ಯೆಗಳ ಬಗ್ಗೆಯೂ ಅನುಮಾನ ಸಾಕಷ್ಟಿದೆ. ಅನೇಕ ಜಿಲ್ಲೆಗಳಲ್ಲಿ ಶೇಕಡ 50ರಷ್ಟೂ ಪ್ರಗತಿ ಸಾಧಿಸಿಲ್ಲ. ಬೆಂಗಳೂರಿನಲ್ಲೇ ಮುಕ್ಕಾಲು ಪಾಲು ಸಮೀಕ್ಷೆ ನಡೆದಿಲ್ಲ. ಒಟ್ಟಾರೆ ಪರಿಸ್ಥಿತಿ ಮತ್ತಷ್ಟು ಹದಗೆಡುವ ಮುಂಚೆ ಸರ್ಕಾರ ಎಚ್ಚೆತ್ತುಕೊಂಡು ಸಮೀಕ್ಷೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಸಂಬಂಧಟ್ಟವರಿಗೆ ನಿರ್ದೇಶನ ನೀಡುವುದಲ್ಲದೆ, ಅದಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net