

ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ.
ಹೇಮಾ ಸಮಿತಿ ವರದಿ ಬಿಡುಗಡೆಯಾದ ಬೆನ್ನಲ್ಲೇ ಒಬ್ಬೊಬ್ಬರಾಗಿ ನಟಿಯರು ತಮಗಾದ ಕಹಿ ಅನುಭವವನ್ನು ಮಾಧ್ಯಮಗಳ ಮುಂದೆ ಅಥವಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಚ್ಚಿಡುತ್ತಿದ್ದಾರೆ. ಇದೀಗ ಜೂನಿಯರ್ ಆರ್ಟಿಸ್ಟ್ ಜುಬಿತಾ ಆ್ಯಂಡಿ ಎಂಬಾಕೆ ತಾನು ಎದುರಿಸಿದ ಕರಾಳ ಘಟನೆಯನ್ನು ಬಹಿರಂಗಪಡಿಸಿದ್ದು, ಕಿರುಕುಳ ನೀಡಿದ ನಟನ ಹೆಸರನ್ನು ನೇರವಾಗೇ ಬಹಿರಂಗಪಡಿಸಿದ್ದಾರೆ.
ಎಎಂಎಂಎ (ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್) ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ನಟ ಎಡವೇಲ ಬಾಬು ವಿರುದ್ಧ ಜುಬಿತಾ ಆ್ಯಂಡಿ ಗಂಭೀರ ಆರೋಪ ಮಾಡಿದ್ದಾರೆ.
ಎಎಂಎಂಎ ಸದಸ್ಯತ್ವ ಶುಲ್ಕ 2 ಲಕ್ಷ ರೂ. ಬದಲು ಹೊಂದಾಣಿಕೆ ಮಾಡಿಕೊಳ್ಳುವಂತೆ ಕೇಳಿದ್ದರು. ಹೊಂದಾಣಿಕೆ ಮಾಡಿಕೊಂಡರೆ ಸದಸ್ಯತ್ವ ಶುಲ್ಕವನ್ನು ಕೊಡುವ ಅಗತ್ಯವಿಲ್ಲ ಮತ್ತು ಸಿನಿಮಾ ಆಫರ್‌ಗಳು ಕೂಡ ಬರುತ್ತವೆ ಎಂದಿದ್ದರು ಎಂದು ಬಾಬು ವಿರುದ್ಧ ಜುಬಿತಾ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಎಡವೇಲ ಬಾಬು ಮಾತ್ರವಲ್ಲದೆ ಇನ್ನಿಬ್ಬರು ನಟರ ವಿರುದ್ಧವೂ ಜುಬಿತಾ ಆರೋಪ ಮಾಡಿದ್ದಾರೆ. ಹರಿಕುಮಾರ್ ಮತ್ತು ಸುಧೀಶ್ ಅವರಿಂದ ಕೆಟ್ಟ ಅನುಭವವಾಗಿದೆ ಎಂದಿದ್ದಾರೆ. ತಮ್ಮ ಸಿನಿಮಾ ಮುಗಿಸಿದ ನಂತರ ಮರುದಿನ ತಮ್ಮ ಮನೆಗೆ ಬರುವಂತೆ ಹರಿಕುಮಾರ್ ಹೇಳಿದರು. ಆದರೆ, ನಾನು ಹೋಗಲು ನಿರಾಕರಿಸಿದೆ. ಸುಧೀಶ್ ತನ್ನ ಜೊತೆ ಪ್ರವಾಸಕ್ಕೆ ಬರುವಂತೆ ಕೇಳಿದ. ಅದನ್ನೂ ನಾನು ನಿರಾಕರಿಸಿದೆ. ಹೊಂದಾಣಿಕೆ ಮಾಡಿಕೊಳ್ಳುವಂತಹ ಅವಕಾಶಗಳೇ ನಮಗೆ ಬೇಡ ಎಂದು ಜುಬಿತಾ ಸ್ಪಷ್ಟಪಡಿಸಿದ್ದಾರೆ.
ಜೂನಿಯರ್ ಆರ್ಟಿಸ್ಟ್ ಅಸ್ನಿಯಾ ಕೂಡ ಮಲಯಾಳಂ ಚಿತ್ರರಂಗದಲ್ಲಿ ಅತ್ಯಂತ ಶೋಷಣೆಗೆ ಒಳಗಾಗುವ ಒಂದು ವರ್ಗವಿದೆ ಎಂದಿದ್ದಾರೆ. ಕೆಲವರು ಯಾವುದೇ ಒಪ್ಪಂದವಿಲ್ಲದೆ ಸಿನಿಮಾಗಳಿಗೆ ಎಂಟ್ರಿ ನೀಡುತ್ತಾರೆ. ಹೀಗಾಗಿ ಅವರಿಗೆ ಸರಿಯಾದ ಕೂಲಿ ಸಿಗುತ್ತಿಲ್ಲ. 5000 ರೂಪಾಯಿ ಪಾವತಿ ಖಚಿತ ಎನ್ನುತ್ತಾರೆ. ಆದರೆ, ಸಿಕ್ಕಿದ್ದು ಕೇವಲ 1500 ರೂ. ಮಾತ್ರ. ಅದು ಕೂಡ 30 ದಿನ ಕೆಲಸ ಮಾಡಿದ ನಂತರ ಇಷ್ಟು ಹಣ ಸಿಕ್ಕಿತು. ಇದರ ವಿರುದ್ಧವಾಗಿ ಮಾತನಾಡಿದ್ದಕ್ಕೆ ಸಿನಿಮಾದಿಂದಲೇ ಹೊರಗಿಡಲಾಗಿದೆ ಎಂದಿದ್ದಾರೆ.
ಇನ್ನು ಜೂನಿಯರ್ ಆರ್ಟಿಸ್ಟ್ಗಳು ಶೂಟಿಂಗ್ ಸ್ಥಳದಲ್ಲಿ ಗುಲಾಮಗಿರಿಯನ್ನು ಎದುರಿಸುತ್ತಾರೆ. ಬಟ್ಟೆ ಬದಲಾಯಿಸಲು ಕೂಡ ಸುರಕ್ಷಿತ ಸ್ಥಳವಿಲ್ಲ. ಹೊಂದಾಣಿಕೆ ಮಾಡಿಕೊಂಡರೆ ಎಲ್ಲ ಆಫರ್ ಸಿಗುತ್ತದೆ ಎಂದು ಪ್ರೊಡಕ್ಷನ್ ಕಂಟ್ರೋಲರ್ ನೇರವಾಗಿ ಹೇಳಿದರು. ಅಲ್ಲದೆ, ತನಗೆ ಸಹಕರಿಸಿದ ಕೆಲವು ನಟಿಯರ ಚಿತ್ರಗಳನ್ನು ಸಹ ತೋರಿಸಿದರು ಎಂದು ಅಸ್ನಿಯಾ ಹೇಳಿದ್ದಾರೆ.
ಹೇಮಾ ಸಮಿತಿ ವರದಿ ಹೊರಬಿದ್ದ ಬಳಿಕ ಚಿತ್ರರಂಗದಲ್ಲಿ ತಮಗಾದ ಕೆಟ್ಟ ಅನುಭವಗಳ ಬಗ್ಗೆ ಬಹಿರಂಗವಾಗಿ ಮಾತನಾಡಲು ನಾಯಕ ನಟಿಯರು ಮುಂದಾಗಿದ್ದಾರೆ. ರಂಜಿತ್ ನಿರ್ದೇಶನದ 'ಪಲೇರಿ ಮಾಣಿಕ್ಯಂ' ಸಿನಿಮಾದಲ್ಲಿ ನಟಿಸಲು ಬಂದಾಗ ನಿರ್ದೇಶಕರೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಕಳೆದ ದಿನ ಬಹಿರಂಗಪಡಿಸಿದ್ದಾರೆ. ಎಎಂಎಂಎ ಕಾರ್ಯಕಾರಿಣಿ ಸದಸ್ಯೆ ಹಾಗೂ ನಟಿ ಅನ್ಸಿಬಾ ಹಸನ್ ಕೂಡ ತಮಗಾದ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ.
ಏನಿದು ಹೇಮಾ ಸಮಿತಿ ವರದಿ?
ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಕೇರಳ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದು, ಮಲಯಾಳಂ ಚಿತ್ರರಂಗದ ಕರಾಳ ಮುಖ ಅನಾವರಣವಾಗಿದೆ. ಮಲಯಾಳಂ ಸಿನಿರಂಗದ ಒಂದೊಂದೆ ಕರಾಳ ಮುಖವಾಡ ಕಳಚಿ ಬೀಳುತ್ತಿದೆ. ಸಿನಿಮಾದಲ್ಲಿ ಮಾತ್ರವಲ್ಲದೆ ಎಲ್ಲ ಕ್ಷೇತ್ರಗಳಲ್ಲೂ ಲೈಂಗಿಕ ಶೋಷಣೆ ನಡೆಯುತ್ತಿದೆ. ಆದರೆ, ಸಿನಿಮಾರಂಗದಲ್ಲಿ ವ್ಯಾಪಕವಾಗಿದೆ ಎನ್ನುತ್ತಾರೆ ನೊಂದ ಮಹಿಳೆಯರು. ಸಿನಿಮಾದಲ್ಲಿ ಅವಕಾಶ ಬೇಕಾದರೆ ಕಾಮತೃಷೆ ತೀರಿಸಬೇಕು ಎನ್ನುತ್ತಾರೆ ನೊಂದ ಕಲಾವಿದೆಯರು. (ಏಜೆನ್ಸೀಸ್)