ಬಳ್ಳಾರಿ ; ರಾಜ್ಯದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪದಡಿ ಸಂಸದ ಈ.ತುಕಾರಾಮ್, ಶಾಸಕರಾದ ಡಾ.ಶ್ರೀನಿವಾಸ್ ಜೆ.ಎನ್.ಗಣೇಶ, ನಾರಾಭರತರೆಡ್ಡಿ, ಬಿ.ನಾಗೇಂದ್ರ ಅಪ್ತ ಗೋವರ್ಧನರೆಡ್ಡಿ ಸೇರಿ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ)ಬುಧವಾರ ದಾಳಿ ನಡೆಸಿತು.
ಜಿಲ್ಲೆಗೆ ಇಡಿಯೂ ಎಂಟು ತಂಡಗಳಿಗೆ ವಿಭಾಗಗೊಂಡ ಬೆಳಗಿನ ಜಾವ ಏಕಕಾಲಕ್ಕೆ ಸಂಸದ ಹಾಗೂ ಶಾಸಕರ ಮನೆಗಳಿಗೆ ದಾಳಿ ನಡೆಸಿ ಹಲವೂ ದಾಖಲೆಗಳು, ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಬ್ಯಾಂಕ್ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಸಂಸದ ಹಾಗೂ ಶಾಸಕರನ್ನು ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆ ಹರಿಸಿದ್ದಾರೆ.
ಎಲ್ಲೆಲ್ಲಿ ದಾಳಿ : ಸಂಡೂರಿನ ಸ್ವಗೃಹದಲ್ಲಿದ್ದ ಸಂಸದ ಈ.ತುಕಾರಾಮ್, ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಗೃಹ, ಕಚೇರಿ(ಕುರುಗೋಡಿನ ಕಚೇರಿ), ನಗರ ಶಾಸಕ ನಾರಾ ಭರತರೆಡ್ಡಿ ಅವರ ಗೃಹ, ಕೂಡ್ಲಿಗಿ ಶಾಸಕ ಡಾ.ಶ್ರೀನಿವಾಸ್ ಅವರ ಮನೆ ಹಾಗೂ ಹುಟ್ಟೂರು ನರಸಿಂಹಗಿರಿಯ ಮನೆ, ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ಅಪ್ತ ಗೋವರ್ಧನರೆಡ್ಡಿ ಮನೆ ದಾಳಿ ನಡೆದಿದೆ. ದಾಳಿ ನಡೆದಿರುವ ಎಲ್ಲ ಕಡೆ ಎರಡು ಕಾರುಗಳಲ್ಲಿ ಮೂವರು ಪುರುಷರು, ಮಹಿಳಾ ಅಧಿಕಾರಿ ಹಾಗೂ ಭದ್ರತ ಸಿಬ್ಬಂದಿಯೊಂದಿಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು ಗುರುವಾರವೂ ಶೋಧ ಕಾರ್ಯ ಮುಂದುವರೆಯೂ ಸಾಧ್ಯತೆಯಿದೆ ಎನ್ನಲಾಗಿದೆ.
ಪರಿಶೀಲನೆ : ಇಡಿ ಅಧಿಕಾರಿಗಳು ಆರಂಭದಲ್ಲಿ ಕಂಪ್ಲಿಯಲ್ಲಿನ ಶಾಸಕ ಜೆ.ಎನ್.ಗಣೇಶ ಬದಲಿಗೆ ಕುರುಗೋಡಿನಲ್ಲಿರುವ ಕಚೇರಿಗೆ ಆಗಮಿಸಿದ್ದರು. ಆದರೆ, ಬಾಗಿಲು ಹಾಕಿದ್ದರಿಂದ ಬಳಿಕ ಕಂಪ್ಲಿಯಲ್ಲಿನ ಮನೆಗೆ ದಾಳಿ ನಡೆಸಿದ್ದಾರೆ. ಸಂಸದ ಈ.ತುಕಾರಾಮ್ ಬೆಂಗಳೂರಿಗೆ ತೆರಳುವ ಉದ್ದೇಶದಿಂದ ಬ್ಯಾಂಕ್‌ನಿಂದ ಒಂದು ಲಕ್ಷ ರೂ. ಡ್ರಾ ಮಾಡಿಕೊಂಡಿದ್ದ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದು ಕಾರು ಪರಿಶೀಲಿಸಿದ್ದಾರೆ. ದಾಳಿ ವೇಳೆ ಕೂಡ್ಲಿಗಿ ಶಾಸಕ ಡಾ.ಶ್ರೀನಿವಾಸ್ ಮನೆಯಲ್ಲಿ ಇರಲಿಲ್ಲ. ಕೆಲಸ ನಿಮಿತ್ತ ತುಮಕೂರಿಗೆ ಹೋಗಿದ್ದರು ಎನ್ನಲಾಗಿದೆ. ನಂತರ ವಿಷಯ ತಿಳಿದು ಮಧ್ಯಾಹ್ನ ವೇಳೆಗೆ ಶಾಸಕರು ಸ್ವಗ್ರಾಮದ ಮನೆಗೆ ಅಗಮಿಸಿ ಇಡಿ ತನಿಖೆಗೆ ಸಹಕರಿಸಿದರು.
ಏನಿದು ಪ್ರಕರಣ : ಕಳೆದ ವರ್ಷ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅನುದಾನ ದುರುಪಯೋಗವಾಗಿದೆ ಎಂದು ನಿಗಮದ ಅಧೀಕ್ಷಕ ಚಂದ್ರಶೇಖರನ್ ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತರ ಪತ್ನಿಯ ದೂರಿನ ಮೇರೆಗೆ ಶಿವಮೊಗ್ಗದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, ನಿಗಮದ ಹಣ ಬ್ಯಾಂಕ್ ಮೂಲಕ ವಿವಿಧ ಖಾತೆಗಳಿಗೆ ವರ್ಗಾವಣೆಯಾಗಿದೆ ಎಂಬ ಆರೋಪ ಬಲವಾಗಿ ಕೇಳಿಬಂದಿದ್ದರಿಂದ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಿಜೆಪಿಯೂ ಲೋಕಸಭಾ ಚುನಾವಣೆಗೆ ನಿಗಮದ ಹಣ ಬಳಸಿಕೊಂಡಿದೆ ಎಂಬುದಾಗಿ ಆರೋಪಿಸಿದ್ದರಿಂದ ಸರ್ಕಾರ ಎಸ್‌ಐಟಿ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಶಾಸಕ ಬಿ.ನಾಗೇಂದ್ರ ಪಾತ್ರ ಏನು ಇಲ್ಲ ಎಂಬುದಾಗಿ ಎಸ್‌ಐಟಿ ವರದಿ ಸಲ್ಲಿಸಿತು. ಆದರೆ, ನೆರೆ ರಾಜ್ಯಕ್ಕೂ ಹಣ ವರ್ಗಾವಣೆಗೊಂಡಿದ್ದರಿಂದ ಇಡಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿತು. ಈ ಹಗರಣಕ್ಕೆ ಸಂಬಂಧಿಸಿದಂತೆ ಶಾಸಕ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಲ್ಲದೆ ಜೈಲು ಕೂಡ ಸೇರಿದ್ದರು.