ಶಿವರಾಜ ಎಂ.ಮುಂಬೈ
ಮಹಾರಾಷ್ಟ್ರದ ಪ್ರವಾಸೋದ್ಯಮ ಇಲಾಖೆ ತನ್ನ ರಾಜ್ಯದ ನೈಸರ್ಗಿಕ ಸೌಂದರ್ಯ, ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಇತರ ರಾಜ್ಯ ಹಾಗೂ ವಿದೇಶಿಗರಿಗೂ ಪರಿಚಯಿಸುವ ಜತೆಗೆ ಸಾಹಸ ಪ್ರಿಯರಿಗೆ ವಿವಿಧ ಸಾಹಸಮಯ ಕ್ರೀಡೆಗಳಲ್ಲಿ ಭಾಗವಹಿಸುವ ಅವಕಾಶಕ್ಕೆ ವರ್ಣಿರಂಚಿತ ವೇದಿಕೆ ನಿರ್ಮಿಸಿದೆ.
ನಾಸಿಕ್‌ನ ಪ್ರಾಕೃತಿಕ ಸೌಂದರ್ಯದ ಮಡಿಲಿನಲ್ಲಿ ‘ಇಕೋ ಗ್ಲಾಂಪಿಂಗ್ ಫೆಸ್ಟಿವಲ್’ ಹೆಸರಿನಲ್ಲಿ ಈ ಉತ್ಸವ ಆರಂಭಿಸಿದ್ದು. ಪ್ರವಾಸಿಗರಿಗೆ ಐಷಾರಾಮಿ ಗ್ಲಾಂಪಿಂಗ್ ಅನುಭವಗಳನ್ನು ನೀಡಲು ರೋಮಾಂಚಕಾರಿ ಹೊರಾಂಗಣ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳ ಮಿಶ್ರಣವನ್ನು ಉಣಬಡಿಸುತ್ತಿದೆ. ಪ್ರಕೃತಿ, ಸಾಹಸ ಮತ್ತು ರಾಜ್ಯದ ಪರಂಪರೆಯನ್ನು ಒಟ್ಟುಗೂಡಿಸುವ ಮೂಲಕ ಪರಿಸರಸ್ನೇಹಿ ಪ್ರವಾಸೋದ್ಯಮಕ್ಕೆ ಭೂಮಿಕೆ ಸಿದ್ದಪಡಿಸಿದೆ.
ಜನವರಿ 15 ರಿಂದ ಆರಂಭವಾಗಿರುವ ಈ ಉತ್ಸವ ಮಾರ್ಚ್ ಅಂತ್ಯದವರೆಗೆ ನಡೆಯಲಿದೆ. ಈ ಉತ್ಸವವನ್ನು ನಾಸಿಕ್‌ನ ಸುಂದರವಾದ ಗಂಗಾಪುರ ಅಣೆಕಟ್ಟು ಹಿನ್ನೀರಿನಲ್ಲಿ (ಟವರ್ ಹೌಸ್ ಹತ್ತಿರ) ಆಯೋಜಿಸಿದೆ. ರಮಣೀಯ ಭೂದೃಶ್ಯಗಳು ಮತ್ತು ಪ್ರಶಾಂತ ಪರಿಸರದೊಂದಿಗೆ ಈ ಉತ್ಸವ ಸವಿಯುವ ಅವಕಾಶ ಮಾಡಿಕೊಟ್ಟಿದೆ.
ಡೇರೆಗಳಲ್ಲಿ ವಾಸ್ತವ್ಯ: ಮಹಾರಾಷ್ಟ್ರ ಸರ್ಕಾರ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ವಿನೂತನ ಯೋಜನೆ ರೂಪಿಸಿದೆ. ಪ್ರವಾಸಿಗರು ಪ್ರಕೃತಿ ಸೌಂದರ್ಯ ಸುತ್ತುವರೆದಿರುವ ಐಷಾರಾಮಿ ಡೇರೆಗಳಲ್ಲಿ ವಾಸ್ತವ್ಯದ ವಿನೂತನ ಅನುಭವ ಪಡೆಯಬಹುದು. ನಾಸಿಕ್‌ನ ಪರಂಪರೆ ಮತ್ತು ನೈಸರ್ಗಿಕ ಸೌಂದರ್ಯವನ್ನು ಅನಾವರಣಗೊಳಿಸುವ ಜತೆಜತೆಗೆ ವಿವಿಧ ಚಟುವಟಿಕೆಗಳು ಪ್ರವಾಸಿಗರಿಗೆ ಮುದ ನೀಡಲಿವೆ.
ವೈನ್ ಮೇಳ: ವೈನ್ ಉತ್ಪಾದನೆಯಲ್ಲಿ ದೇಶದಲ್ಲಿಯೇ ನಾಸಿಕ್ ಮುಂಚೂಣಿಯಲ್ಲಿದ್ದು, ಈ ಉತ್ಸವದಲ್ಲಿ ಪಾಲ್ಗೊಳ್ಳುವ ಪ್ರವಾಸಿಗರು ಹಾಗೂ ಸಂದರ್ಶಕರು ಜಾಗತಿಕವಾಗಿ ಪ್ರಸಿದ್ಧವಾದ ನಾಸಿಕ್‌ನ ವೈನ್‌ಗಳನ್ನು ರುಚಿ ಸವಿಯಬಹುದಾಗಿದೆ, ಇದಕ್ಕಾಗಿಯೇ ವೈನ್ ಮೇಳ ಆಯೋಜನೆಗೊಂಡಿದ್ದು ವೈನ್‌ಪ್ರಿಯರಿಗೆ ರತ್ನಗಂಬಳಿ ಹಾಸಿದೆ, ಸಾಂಪ್ರದಾಯಿಕ ಕರಕುಶಲ ಮತ್ತು ಅಧಿಕೃತ ಪಾಕಪದ್ಧತಿಗಳಡಿ ಕ್ರ್‌ಟಾ ಮತ್ತು ಫುಡ್ ಬಜಾರ್ ಸಹ ಇಲ್ಲಿದೆ. ಗ್ರಾಮೀಣ ಪ್ರದೇಶದ ಸಂಸ್ಕೃತಿ, ಆಚಾರ ವಿಚಾರ ಹಾಗೂ ಆಹಾರ ಪದ್ಧ್ದತಿಯ ಪರಿಚಯ ಮಾಡುತ್ತಿದೆ.
ರೋಮಾಂಚಕ ಚಟುವಟಿಕೆ: ಸಾಹಸ ಪ್ರವೃತ್ತಿಯವರಿಗಾಗಿ ಉತ್ಸವದಲ್ಲಿ ಪ್ಯಾರಾ ಗ್ಲೈಡಿಂಗ್, ಪ್ಯಾರಾ ಸೈಲಿಂಗ್, ಪ್ಯಾರಾ ಮೋಟಾರಿಂಗ್, ಸೈಕ್ಲಿಂಗ್, ಟ್ರೆಕ್ಕಿಂಗ್, ಡ್ಯುಯೊ ಸೈಕ್ಲಿಂಗ್, ಆಲ್-ಟೆರೈನ್ ವೆಹಿಕಲ್ಸ್ (ಎಟಿವಿಗಳು) ಮತ್ತು ಪೇಂಟ್‌ಬಾಲ್ ಅರೇನಾದಂತಹ ರೋಮಾಂಚಕ ಚಟುವಟಿಕೆಗಳನ್ನು ಒಳಗೊಂಡಿದೆ. ಇದರೊಂದಿಗೆ ಪ್ರಕೃತಿ ಚಿಕಿತ್ಸೆ, ಬಯೋಡೈನಾಮಿಕ್ ಕೃಷಿ, ಬುಡಕಟ್ಟು ಕಲೆ ಮತ್ತು ಸಂಸ್ಕೃತಿ ಮತ್ತು ಪರಿಸರ-ಸಾಗರದ ಅನ್ವೇಷಣೆಯ ಕುರಿತ ಕಾರ್ಯಾಗಾರಗಳನ್ನು ಒಳಗೊಂಡಿದೆ. ಇಕೋ ಗ್ಲಾಂಪಿಂಗ್ ಫೆಸ್ಟಿವಲ್ ಸಾಹಸ ಪ್ರಿಯರಿಗೆ, ಉತ್ಸಾಹಿ ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಈ ಚಳಿಗಾಲದಲ್ಲಿ, ನಾಸಿಕ್‌ನ ಪ್ರಾಕೃತಿಕ ಸೌಂದರ್ಯದ ಮಡಿಲಿನಲ್ಲಿ ಐಷಾರಾಮಿ ಮತ್ತು ಸಾಂಪ್ರದಾಯಿಕ ಆಚರಣೆಗಳ ಮಿಶ್ರಣವಾಗಿ ಇಕೋ ಗ್ಲಾಂಪಿಂಗ್ ಫೆಸ್ಟಿವಲ್ ಮೂಲಕ ಮಹಾರಾಷ್ಟ್ರದ ಮಾಂತ್ರಿಕತೆ ಅನಾವರಣಗೊಂಡಿದೆ.
—
ಸ್ಥಳ: ನಾಸಿಕ್, ಟವರ್ ಹೌಸ್ ಹತ್ತಿರ – ಗಂಗಾಪುರ ಅಣೆಕಟ್ಟು ಹಿನ್ನೀರು,
ವಾಸ್ತವ್ಯ: 50 ಐಷಾರಾಮಿ ಡೇರೆಗಳು
ಹತ್ತಿರದ ವಿಮಾನ ನಿಲ್ದಾಣಗಳು: ನಾಸಿಕ್ ಮತ್ತು ಶಿರಡಿ
ಹವಾಮಾನ – ಆಹ್ಲಾದಕರ ಬೆಚ್ಚಗಿರುತ್ತದೆ