

ಪುತ್ತೂರು ಗ್ರಾಮಾಂತರ: ಆರ್ಯಾಪು ಗ್ರಾಮದ ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ-ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಪುತ್ತೂರು ದಸರಾ ನವದುರ್ಗಾರಾಧನಾ ಸಮಿತಿಯ ವತಿಯಿಂದ 22ನೇ ವರ್ಷದ ಪುತ್ತೂರು ದಸರಾ ಮಹೋತ್ಸವದಲ್ಲಿ ಆರಾಧಿಸಲ್ಪಟ್ಟ ಗಣಪತಿ, ಶಾರದೆ ಸಹಿತ ನವದುರ್ಗೆಯರ ವಿಗ್ರಹಗಳ ವಿಜೃಂಭಣೆಯ ಶೋಭಾಯಾತ್ರೆ ಪುತ್ತೂರು ದಸರಾ ಮೆರವಣಿಗೆ ಸೋಮವಾರ ಸಂಜೆ ನೆರವೇರಿ ಮಹೋತ್ಸವ ಸಂಪನ್ನಗೊಂಡಿತು.
ಕ್ಷೇತ್ರದಲ್ಲಿ ಬೆಳಗ್ಗೆ ಪುತ್ತೂರು ದಸರಾ ಮಹೋತ್ಸವ ಸಮಿತಿಯ ಸಂಚಾಲಕ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ನೇತೃತ್ವದಲ್ಲಿ ಸಾಮೂಹಿಕ ಚಂಡಿಕಾ ಹವನ, ಮಧ್ಯಾಹ್ನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ದರ್ಬೆ ಅಶ್ವಿನಿ ವೃತ್ತದ ಬಳಿ ಸಂಜೆ ವಿಜೃಂಭಣೆಯ ಪುತ್ತೂರು ದಸರಾ ಮಹೋತ್ಸವದ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ದಸರಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಸುರೇಶ್ ಪುತ್ತೂರಾಯ ಮತ್ತು ಪುತ್ತೂರು ಶಾರದಾ ಭಜನಾ ಮಂದಿರದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು ತೆಂಗಿನಕಾಯಿ ಒಡೆಯುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು. ತೆರೆದ ವಾಹನಗಳಲ್ಲಿ ಅಲಂಕೃತಗೊಂಡು ಕಂಗೊಳಿಸುತ್ತಿದ್ದ ಗಣಪತಿ, ಶಾರದೆ ಸಹಿತ ನವದುರ್ಗೆಯರ ವಿಗ್ರಹಗಳು, ಕುಣಿತ ಭಜನೆ, ಗೊಂಬೆ ಕುಣಿತ, ವಾದ್ಯ ಘೋಷ, ಸಿಂಹ ಮತ್ತು ಕರಡಿ ಕುಣಿತ ಶೋಭಾಯಾತ್ರೆಯ ವಿಶೇಷ ಆಕರ್ಷಣೆಗಳಾಗಿತ್ತು.
ಪುತ್ತೂರು ದಸರಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಮಹೇಶ್ ಕಜೆ, ಸಂಚಾಲಕ ಪ್ರೀತಂ ಪುತ್ತೂರಾಯ, ಅಧ್ಯಕ್ಷ ಯು ಲೋಕೇಶ್ ಹೆಗ್ಡೆ, ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ, ಪ್ರಧಾನ ಕಾರ್ಯದರ್ಶಿ ನೇಮಾಕ್ಷ ಸುವರ್ಣ, ಗೌರವ ಸಲಹೆಗಾರರಾದ ರಾಜೇಶ್ ಬನ್ನೂರು, ಮಂಜಪ್ಪ ರೈ ಬಾರಿಕೆ, ರಾಧಾಕೃಷ್ಣ ಬೋರ್ಕರ್, ವಿಜಯ ಬಿ.ಎಸ್, ಕೋಶಾಧಿಕಾರಿ ಉಮೇಶ್ ಅಚಾರ್ಯ ಕುಕ್ಕಾಡಿ, ಉಪಾಧ್ಯಕ್ಷರಾದ ಜಯಂತ ಶೆಟ್ಟಿ ಕಂಬಳತ್ತಡ್ಡ, ರಂಗನಾಥ ರಾವ್, ಉದಯಕುಮಾರ್ ರೈ ಹಾಗೂ ಸಮಿತಿಯ ಪ್ರಮುಖರು ಮತ್ತು ಮಹಿಳಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.