ಕೋಳಿ, ಗೋವಿನ ತ್ಯಾಜ್ಯ ತೋಡಿಗೆ ಡಂಪ್ : ಕೇರಳದಿಂದ ತಂದು ಸುರಿಯುತ್ತಿರುವ ಕಿಡಿಗೇಡಿಗಳು ಕ್ರಮ ಕೈಗೊಳ್ಳದ ಗ್ರಾ.ಪಂ ವಿರುದ್ಧ ಆಕ್ರೋಶ

kasa
Published on

ಬಂಟ್ವಾಳ : ಸಜೀಪಪಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂಚಿಲ ಎಂಬಲ್ಲಿ ನೀರು ಹರಿದು ಹೋಗುವ ತೋಡಿಗೆ ಕೇರಳದ ನೋಂದಣಿ ಹೊಂದಿದ ಎರಡು ಪಿಕಪ್ ವಾಹನದಲ್ಲಿ ಕೋಳಿ ಮತ್ತು ಗೋವಿನ ತ್ಯಾಜ್ಯ ಎಸೆದಿರುವ ಅಂಶ ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಸ್ಥಳೀಯರು ಗ್ರಾ.ಪಂ.ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಗ್ರಾ.ಪಂ.ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ಘಟನೆ ಸೋಮವಾರ ನಡೆದಿದೆ.

ನೀರು ಹರಿಯುವ ತೋಡಿಗೆ ಕೋಳಿ ಮತ್ತು ಗೋವಿನ ತ್ಯಾಜ್ಯವನ್ನು ಲೋಡುಗಟ್ಟಲೆಯಲ್ಲಿ ತಂದು ಎಸೆಯುವುದರಿಂದ ಪರಿಸರವಿಡೀ ದುರ್ನಾತ ಬೀರುತ್ತಿದೆ. ಈ ತ್ಯಾಜ್ಯ ನೇರವಾಗಿ ನೇತ್ರಾವತಿ ನದಿಯನ್ನು ಸೇರುತ್ತಿದ್ದು, ನೀರು ಕೂಡ ಕಲುಷಿತಗೊಳ್ಳುತ್ತಿದೆ. ಇದೇ ನೀರನ್ನು ಮಂಗಳೂರು ಮಹಾನಗರ ಪಾಲಿಕೆಯ ಜನತೆ ಬಳಸುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಮೆಲ್ಕಾರ್-ಮುಡಿಪು (ಮಾಣಿ-ಉಳ್ಳಾಲ) ರಾಜ್ಯ ಹೆದ್ದಾರಿಯಲ್ಲಿ ಸಜೀಪಪಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿಲ ಎಂಬಲ್ಲಿರುವ ಕಿರುಸೇತುವೆ ಅಡಿಭಾಗದಲ್ಲಿ ನೇತ್ರಾವತಿ ಒಡಲನ್ನು ಸೇರುವ ನೀರಿಗೆ ಕೇರಳ ರಾಜ್ಯದ ನೋಂದಣಿ ಹೊಂದಿದ ಎರಡು ಪಿಕಪ್ ಲೋಡ್ ಮಾಂಸ ತ್ಯಾಜ್ಯವನ್ನು ಸೋಮವಾರ ಮುಂಜಾನೆ ಸುಮಾರು 2.30ರ ಹೊತ್ತಿಗೆ ಡಂಪ್ ಮಾಡಿ ಪರಾರಿಯಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮಂಗಳೂರು ದಸರಾ ಕಾರ್ಯಕ್ರಮ ಮುಗಿಸಿ ವಾಪಸು ಬರುತ್ತಿದ್ದ ಸ್ಥಳೀಯ ಯುವಕರು ಇದನ್ನು ಗಮನಿಸಿ ಪಿಕಪ್ ವಾಹನದಲ್ಲಿದ್ದವರನ್ನು ಪ್ರಶ್ನಿಸಿದಾಗ ಹಲ್ಲೆಗೆ ಮುಂದಾಗಿದ್ದು, ಆಗ ಯುವಕರು ಮೊಬೈಲ್‌ನಲ್ಲಿ ವಾಹನದ ಚಿತ್ರ ಸೆರೆಹಿಡಿದಿದ್ದಾರೆ.

ಈ ವಿಚಾರವನ್ನು ಬೆಳಗ್ಗೆ ಇಲ್ಲಿನ ಗ್ರಾಮದ ಪ್ರಮುಖರಲ್ಲಿ ತಿಳಿಸಿದ್ದು, ತೋಡಿನಲ್ಲಿ ಪರಿಶೀಲಿಸಿದಾಗ ಲೋಡಿನಷ್ಟು ತ್ಯಾಜ್ಯದ ರಾಶಿ ಕಂಡು ಬಂದಿದೆ. ವಾಹನದ ಸಂಖ್ಯೆ ಸಹಿತ ಇಲ್ಲಿನ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದ್ದರೂ ಗ್ರಾ.ಪಂ.ಈ ಬಗ್ಗೆ ಯಾವುದೇ ಸ್ಪಂದನ ನೀಡಿಲ್ಲ ಎಂದು ದೂರಲಾಗಿದೆ.

ತಾ.ಪಂ. ಮಾಜಿ ಅಧ್ಯಕ್ಷ ಯಶವಂತ ದೇರಾಜೆ ಹಾಗೂ ಮಾಜಿ ಜಿ.ಪಂ. ಸದಸ್ಯ ರಾಧಾಕೃಷ್ಣ ಅಳ್ವ ನೇತೃತ್ವದಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಲು ಮುಂದಾದರು. ಪರಿಸ್ಥಿತಿ ಕೈಮೀರುವ ಹಂತಕ್ಕೆ ಬರುತ್ತಿದ್ದಂತೆ ಪಂಚಾಯಿತಿ ಅಧಿಕಾರಿಗಳು ಕೂಡಲೇ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಾಹನದ ಸಂಖ್ಯೆಯನ್ನು ನಮೂದಿಸಿ ದೂರು ದಾಖಲಿಸಿದ್ದಾರೆ.

ಮೆಲ್ಕಾರ್‌ನಿಂದ ಮುಡಿಪು ಸಂಪರ್ಕದ ಪ್ರಮುಖ ಕೊಂಡಿಯಾಗಿರುವ ಕಂಚಿಲ ಸೇತುವೆಯ ಅಡಿಭಾಗದಲ್ಲಿ ಕೋಳಿ ಸಹಿತ ಗೋವಿನ ತ್ಯಾಜ್ಯಗಳನ್ನು ಎಸೆಯುವುದರಿಂದ ಇಲ್ಲಿನ ನಿವಾಸಿಗಳಿಗೆ ಕಳೆದೊಂದು ವರ್ಷದಿಂದ ತೊಂದರೆಯಾಗುತ್ತಿದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ಯಾವುದೇ ಸ್ಪಂದನೆ ದೊರೆತಿಲ್ಲ. ರಾಧಕೃಷ್ಣ ಆಳ್ವ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ

ಧರಣಿ ಎಚ್ಚರಿಕೆ

ತ್ಯಾಜ್ಯ ತಂದು ಡಂಪ್ ಮಾಡುವ ಕೇರಳದ ವಾಹನದ ಸಂಖ್ಯೆಯನ್ನು ಗ್ರಾ.ಪಂ.ಗೆ ನೀಡಿದ್ದು, ಇದರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿದೆ. ಮುಂದಿನ 24 ಗಂಟೆಯ ಒಳಗಾಗಿ ವಾಹನ ಹಾಗೂ ಚಾಲಕನ ಮೇಲೆ ಪ್ರಕರಣ ದಾಖಲಿಸಬೇಕು ಮತ್ತು ತ್ಯಾಜ್ಯ ಎಸೆದ ಆರೋಪಿಗಳಿಂದಲೇ ತೋಡನ್ನು ಸ್ವಚ್ಚಗೊಳಿಸಬೇಕು. ಇಲ್ಲದಿದ್ದರೆ ಗ್ರಾಮಸ್ಥರು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ರೋಗ ಹರಡುವ ಭೀತಿ

ನೀರು ಹರಿಯುವ ತೋಡಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಅನೇಕ ಕೃಷಿ ಕುಟುಂಬಗಳು ವಾಸವಾಗಿವೆ. ತ್ಯಾಜ್ಯದಿಂದ ಮಾರಕ ರೋಗಗಳು ಬಾಧಿಸುವ ಆತಂಕ ಉಂಟಾಗಿದ್ದು, ಪ್ರಾಣಿಗಳು ಇದೇ ನೀರನ್ನು ಕುಡಿಯುವುದರಿಂದ ಜಾನುವಾರುಗಳಿಗೂ ರೋಗ ಬರುವ ಸಾಧ್ಯತೆಗಳಿವೆ. ಕೇವಲ 3 ಕಿ.ಮೀ ದೂರದಲ್ಲಿ ಈ ತೋಡಿನ ನೀರು ನೇತ್ರಾವತಿ ನದಿ ಸೇರುತ್ತಿದ್ದು, ಇದೇ ಕೊಳೆತ ತ್ಯಾಜ್ಯದ ನೀರನ್ನು ಮಂಗಳೂರು ಜನತೆ ಕುಡಿಯಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net