

ಕಾರವಾರ: ಉತ್ತರ ಕನ್ನಡ ಗಡಿಯಲ್ಲಿರುವ ದೂದ್ ಸಾಗರ್ ಜಲಪಾತ ನೋಡಲು ಭಾನುವಾರ ಸಾವಿರಾರು ಜನ ಆಗಮಿಸಿದ ಸಂಕಷ್ಟಕ್ಕೆ ಸಿಲುಕಿದ ಘಟನೆ ಭಾನುವಾರ ನಡೆದಿದೆ.
ದೂದ್ ಸಾಗರ ನೋಡಲು ರೈಲ್ವೆ ಟ್ರ್ಯಾಕ್ ಮೇಲೆ ನಡೆದು ಹೋಗುವುದನ್ನು ನಿಷೇಧಿಸಲಾಗಿದೆ. ಆದರೂ ಹಲವರು ಆಗಮಿಸುತ್ತಿದ್ದರು. ಭಾನುವಾರ ಒಮ್ಮೆಲೇ ಸಾವಿರಕ್ಕೂ ಅಧಿಕ ಜನ ಆಗಮಿಸಿದ್ದರಿಂದ ನೈರುತ್ಯ ರೈಲ್ವೆ ಪೊಲೀಸರು, ಗೋವಾ ಪೊಲೀಸರು ಹಾಗೂ ಗೋವಾ ಅರಣ್ಯ ಸಿಬ್ಬಂದಿ ತಡೆದರು.
ಕೆಲವರಿಗೆ ಬಸ್ಕಿ ಹೊಡೆಸಿ ಬಿಟ್ಟರು. ಲೋಂಡಾ ಮಾರ್ಗವಾಗಿ ತೆರಳುವಂತೆ ಸೂಚನೆ ನೀಡಿದರು.
ಎಲ್ಲಿದೆ ದೂದ್ ಸಾಗರ:
ಉತ್ತರ ಕನ್ನಡ ಜೊಯಿಡಾ ತಾಲೂಕಿನ ಗಡಿ ಹಾಗೂ ಗೋವಾದಲ್ಲಿ ದೂದ್ ಸಾಗರ ಹಂಚಿ ಹೋಗಿದೆ.
ಜಲಪಾತ ಬೀಳುವ ಮೇಲ್ಭಾಗ ಉತ್ತರ ಕನ್ನಡವಾಗಿದ್ದರೆ, ಕೆಳಭಾಗ ಗೋವಾಕ್ಕೆ ಸೇರಿದೆ. ಜಲಪಾತದ ನಡುವೆ ರೈಲ್ವೆ ಮಾರ್ಗ ಹಾದು ಹೋಗಿದೆ.
ಇದನ್ನೂ ಓದಿ: ಚಂದ್ರಯಾನ-3 ತಂಡದಲ್ಲಿ ಉತ್ತರ ಕನ್ನಡದ ಇಂಜಿನಿಯರ್
ಗೋವಾದಿಂದ ಟ್ರಕ್ಕಿಂಗ್ ಮಾಡಿಕೊಂಡು, ಜೀಪ್ ಮೂಲಕ ತೆರಳಲಾಗುತ್ತದೆ. ಈ ಮೊದಲು ಜೊಯಿಡಾ ತಾಲೂಕಿನ ಕ್ಯಾಸಲ್ ರಾಕ್ ನಿಂದ ಟ್ರಕ್ಕಿಂಗ್ ಮಾಡಿಕೊಂಡು ಜಲಪಾತ ನೋಡಲು ತೆರಳುತ್ತಿದ್ದರು.
ಆದರೆ, ಜಲಪಾತ ನೋಡಲು ಬರುವವರ ಸಂಖ್ಯೆ ಹೆಚ್ಚಿದ್ದರಿಂದ ಈಗ ಅಲ್ಲಿ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಆದರೂ ಸಾಕಷ್ಟು ಜನ ಬರುತ್ತಿರುವುದರಿಂದ ಈಗ ರೈಲ್ವೆ ಹಾಗೂ ಗೋವಾ ಸರ್ಕಾರ ಭಾನುವಾರದಿಂದ ಕಟ್ಟುನಿಟ್ಟಿನ ಕ್ರಮ ವಹಿಸಿದೆ ಎನ್ನಲಾಗಿದೆ.