ಡಾರ್ಕ್‌ವೆಬ್‌ನಲ್ಲಿ ಡ್ರಗ್ಸ್ ಖರೀದಿಸಿ ಲಾಕ್‌ಡೌನ್​ ವೇಳೆ ಮಾರಾಟ ಮಾಡುತ್ತಿದ್ದ ಕದೀಮರು

drugs
Published on

ಬೆಂಗಳೂರು: ಡಾರ್ಕ್‌ವೆಬ್‌ನಲ್ಲಿ ಮಾಹಿತಿ ಪಡೆದು ಬಿಟ್‌ಕಾಯಿನ್ ಮೂಲಕ ಹಣ ಪಾವತಿಸಿ ಡ್ರಗ್ಸ್ ಖರೀದಿಸಿ ಬೆಳಗ್ಗೆ 6 ರಿಂದ 10 ಗಂಟೆಯೊಳಗೆ ಮಾರಾಟ ಮಾಡುತ್ತಿದ್ದ 6 ಮಂದಿ ಡ್ರಗ್ಸ್ ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಆದಿತ್ಯನ್ (29), ಅಖಿಲ್ (25), ನೈಜೀರಿಯಾ ಮೂಲದ ಜೋನ್ ಚುಕ್ವಾ (30), ಕಾಡುಗೋಡಿಯ ನಿವಾಸಿಗಳಾದ ಶೆರ್ವಿನ್ ಸುಪ್ರೀತ್ ಜಾನ್ (26), ಅಂಕಿತ್ (26), ಡೋಮ್ನಿಕ್ ಪೌಲ್ (30) ಬಂಧಿತರು.

ಆರೋಪಿಗಳಿಂದ ಎಂಡಿಎಂಎ, 400 ಎಂಡಿಎಂಎ ಎಕ್ಸ್‌ಟಸಿ ಮಾತ್ರೆಗಳು, 76 ಎಲ್‌ಎಸ್‌ಡಿ ಪೇಪರ್ ಬ್ಲಾಕ್‌ಗಳು, 6 ಮೊಬೈಲ್ ಪೋನ್‌ಗಳು, 1 ದ್ವಿಚಕ್ರ ವಾಹನ, 1 ಹೊಂಡಾ ಸಿಟಿ ಕಾರು, 5 ಸಾವಿರ ರೂ. ನಗದು ಸೇರಿ ಒಟ್ಟು 35 ಲಕ್ಷ ರೂ. ಬೆಲೆ ಬಾಳುವ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಮಂಗಲ ಗ್ರಾಮದ ಮನೆಯೊಂದರಲ್ಲಿ ಆರೋಪಿಗಳು ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಶನಿವಾರ ದಾಳಿ ನಡೆಸಿದಾಗ ಮಾದಕ ವಸ್ತು ಸಮೇತ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ಡಾರ್ಕ್ ವೆಬ್‌ನ ಟಾರ್ ಬ್ರೋಸರ್ ಹಾಗೂ ಡ್ರಿಯೇಡ್ ವೆಬ್‌ಸೈಟ್‌ನಿಂದ ಡ್ರಗ್ಸ್ ಬಗ್ಗೆ ಮಾಹಿತಿ ಪಡೆದು ವಿಕ್ಕರ್-ಮೀ ಆಪ್ಯ್‌ನಲ್ಲಿ ವೆಗೆಟರ್ ಎಂಬ ಸ್ಥಳೀಯ ವೆಂಡರ್‌ನಿಂದ ಬಿಟ್ ಕಾಯಿನ್ ಮೂಲಕ ಹಣ ಪಾವತಿಸಿ ಕಡಿಮೆ ಬೆಲೆಗೆ ಎಂಡಿಎಂಎ, ಎಕ್ಸ್‌ಟಷಿ ಮಾತ್ರೆಗಳು ಮತ್ತು ಎಲ್‌ಎಸ್‌ಡಿ ಸ್ಟಿಪ್ಸ್‌ಗಳನ್ನು ಖರೀದಿಸುತ್ತಿದ್ದರು. ನಂತರ ಕೊರಿಯರ್ ಮೂಲಕ ತರಿಸಿಕೊಳ್ಳುತ್ತಿದ್ದರು. ಮಾದಕ ವಸ್ತು ಗಾಂಜಾವನ್ನು ಬೆಂಗಳೂರಿನಲ್ಲಿರುವ ಪರಿಚಿತರಿಂದ ಪೆಡ್ಲರ್‌ಗಳಿಂದ ಖರೀದಿಸುತ್ತಿದ್ದರು.

ಲಾಕ್‌ಡೌನ್ ವಿನಾಯಿತಿ ದುರ್ಬಳಕೆ:

ನಗರದಲ್ಲಿ ಕರೊನಾ 2ನೇ ಅಲೆ ಕಟ್ಟಿಹಾಕುವ ನಿಟ್ಟಿನಲ್ಲಿ ಜಾರಿಗೆ ತರಲಾದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಡ್ರಗ್ಸ್‌ಗಳ ಪೂರೈಕೆ ಕೊಂಚ ಕಡಿಮೆಯಾಗಿತ್ತು. ಹೀಗಾಗಿ ಡ್ರಗ್ಸ್‌ಗಳಿಗೆ ಎಲ್ಲೆಡೆ ಬೇಡಿಕೆ ಹೆಚ್ಚಿದೆ ಎಂಬುದನ್ನು ಅರಿತಿದ್ದ ಆರೋಪಿಗಳು ಸಾರ್ವಜನಿಕರ ಓಡಾಟಕ್ಕೆ ನಿಗದಿಪಡಿಸಿದ ಸಮಯವಾದ ಬೆಳಗ್ಗೆ 6ರಿಂದ 10 ಗಂಟೆಯೊಳಗೆ ಕಾಲೇಜು ವಿದ್ಯಾರ್ಥಿಗಳು, ಪರಿಚಿತ ಗಿರಾಕಿಗಳು ಹಾಗೂ ಐಟಿ-ಬಿಟಿ ಉದ್ಯೋಗಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು. ಎಕ್ಸ್‌ಟೆಸಿ ಪಿಲ್ಸ್‌ಗೆ 4 ರಿಂದ 5 ಸಾವಿರ ರೂ., ಎಲ್‌ಎಸ್‌ಡಿ ಒಂದು ಪೀಸ್‌ಗೆ 4 ಸಾವಿರ ರೂ.ನಿಂದ 5 ಸಾವಿರ ರೂ ಹಾಗೂ ಗಾಂಜಾವನ್ನು 100 ಗ್ರಾಂಗೆ 5 ಸಾವಿರ ರೂ. ನಂತೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ ಮಾಡುತ್ತಿದ್ದ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆರೋಪಿಗಳ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net