'ಮೊದಲು ಮಾದಕದ್ರವ್ಯ ವ್ಯಸನಿಯಾದೆ, ಬಳಿಕ ಡ್ರಗ್ಸ್ ಪೆಡ್ಲರ್ ಆಗಿಬಿಟ್ಟೆ...'

Drugs
Published on

ಬೆಂಗಳೂರು: ಡ್ರಗ್ಸ್​ ಮಾಫಿಯಾವನ್ನು ಬುಡ ಸಮೇತ ಕಿತ್ತೊಗೆಯಲು ನಿರಂತರ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರ ಕೈಗೆ ಮತ್ತೆ ಮೂವರು ಡ್ರಗ್ಸ್​ ಪೆಡ್ಲರ್​ಗಳು ಸಿಕ್ಕಿಬಿದ್ದಿದ್ದಾರೆ.

ಜೆ.ಸಿ.ನಗರ ಪೊಲೀಸರು ಕಾಡುಗೋಡಿಯ ಪೃಥ್ವಿ ಲೇಔಟ್​ ನಿವಾಸಿ ಜಿಂಡೋ ಜೇಮ್ಸ್​(34), ಅತ್ತಿಬೆಲೆಯ ಆದರ್ಶ(35) ಹಾಗೂ ಇನ್ಮೇಶ್​(29) ಎಂಬುವವರನ್ನು ಬಂಧಿಸಿ 25 ಲಕ್ಷ ರೂ. ಮೌಲ್ಯದ 45 ಕೆಜಿ ಗಾಂಜಾ ಮತ್ತು 70 ಗ್ರಾಂ ಎಡಿಎಂಎ ವಶಕ್ಕೆ ಪಡೆದಿದ್ದಾರೆ. ಕೇರಳ ಮೂಲದ ಇವರು ಡ್ರಗ್ಸ್​ ದಂಧೆ ಸಲುವಾಗಿ ಕಾಡುಗೋಡಿ ಹಾಗೂ ಅತ್ತಿಬೆಲೆಯಲ್ಲಿ ಮೂರು ಕಡೆ ಮನೆ ಬಾಡಿಗೆ ಪಡೆದಿದ್ದರು. ಮೊದಮೊದಲು ಡ್ರಗ್ಸ್​ ವ್ಯಸನಿಗಳಾಗಿದ್ದ ಆರೋಪಿಗಳು, ನಂತರ ಪೆಡ್ಲರ್​ಗಳಾಗಿ ಬದಲಾಗಿದ್ದಾರೆ. ಈ ಬಗ್ಗೆ ಅವರೇ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿರಿ ‘ನಾವು ಡ್ರಗ್ಸ್​ ಪಾರ್ಟಿ ಮಾಡ್ತಾ ಇದ್ವಿ, ಅದರಲ್ಲಿ ಅನುಶ್ರೀ ಕಿಕ್ಕೇರಿಸಿಕೊಳ್ತಿದ್ಲು…’

ಪೆಡ್ಲರ್​ ಲೂಬಿನ್​ ಅಮಲ್​ನಾಥ್​ ಎಂಬಾತನಿಂದ ಗಾಂಜಾ ಖರೀದಿಸಿ ಬಳಿಕ ಹಣದಾಸೆಗೆ ಅಮಲ್​ನಾಥ್​ ಜತೆ ಸೇರಿ ಜಿಂಡೋ ಜೇಮ್ಸ್​, ಅತ್ತಿಬೆಲೆಯ ಆದರ್ಶ ಮತ್ತು ಇನ್ಮೇಶ್​ ಡ್ರಗ್ಸ್​ ದಂಧೆ ಶುರು ಮಾಡಿದ್ದರು. ಕೆಲ ದಿನಗಳ ಹಿಂದೆ ಅಮಲ್​ನಾಥ್​ನನ್ನು ಜಾಲಹಳ್ಳಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಅಮಲ್​ನಾಥ್​ ಮೂಲಕ ವಿಶಾಖಪಟ್ಟಣದ ಪೆಡ್ಲರ್​ಗಳು ಜೇಮ್ಸ್​ ತಂಡಕ್ಕೆ ಪರಿಚಯವಾಗಿತ್ತು. ಆನಂತರ ಆಂಧ್ರ ಗಡಿ ಭಾಗದಿಂದ ಗಾಂಜಾ ಖರೀದಿಸಿ ಗೂಡ್ಸ್​ ವಾಹನದಲ್ಲಿ ಅಥವಾ ತಮ್ಮ ಕಾರಿನಲ್ಲಿ ಅತ್ತಿಬೆಲೆ ನಿವಾಸಕ್ಕೆ ತರುತ್ತಿದ್ದರು. ಬೆಂಗಳೂರು ಅಲ್ಲದೆ, ರಾಜ್ಯದ ವಿವಿಧೆಡೆಗೆ ಸಾಗಿಸುತ್ತಿದ್ದರು. ಕೇರಳದಿಂದ ಡ್ರಗ್ಸ್​ ದಂಧೆ ಸಲುವಾಗಿ ನಗರಕ್ಕೆ ಆರೋಪಿಗಳು ಬರುತ್ತಿದ್ದರು. ಕೆಲ ದಿನಗಳ ಹಿಂದೆ ವ್ಯಸನಿಯನ್ನು ಬಂಧಿಸಲಾಯಿತು. ಮೊಬೈಲ್​ ಕರೆಗಳ ಮಾಹಿತಿ ಆಧರಿಸಿ ಜೆ.ಸಿ. ನಗರ ಉಪ ವಿಭಾಗದ ಎಸಿಪಿ ರೀನಾ ಎನ್​.ಸುವರ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಪೆಡ್ಲರ್​ಗಳನ್ನು ಸೆರೆ ಹಿಡಿಯಲಾಗಿದೆ. ಆರೋಪಿಗಳು ಬೋರ್​ ಬಂಕ್​ ರಸ್ತೆ ಬಳಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು.

ಅತ್ತಿಬೆಲೆ ಮನೆ ಮೇಲೆ ದಾಳಿ ಮಾಡಿ 40 ಕೆಜಿ ಗಾಂಜಾ ಹಾಗೂ 50 ಗ್ರಾಂ ಎಡಿಎಂಎ ಜಪ್ತಿ ಮಾಡಲಾಗಿದೆ. ಎಡಿಎಂಎ ಮಾದಕ ವಸ್ತುವನ್ನು ಕೊತ್ತನೂರು ಬಳಿ ನೈಜೀರಿಯಾ ಪ್ರಜೆಯಿಂದ ಖರೀದಿಸಿದ್ದಾಗಿ ಪೆಡ್ಲರ್​ಗಳು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net