

ಮಂಗಳೂರು: ಮಾದಕ ವಸ್ತು ಎಂಡಿಎಂಎ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಉಪ್ಪಳದ ಬಲನ್ ಹೌಸ್ ನಿವಾಸಿ ಮೊಹಮ್ಮದ್ ರಫೀಕ್ (40) ಬಂಧಿತ ಆರೋಪಿ. ಈತ ಉಳ್ಳಾಲ ತಾಲೂಕು ತಲಪಾಡಿ ಗ್ರಾಮದ ಕೆ.ಸಿ.ರೋಡ್ ಪರಿಸರದಲ್ಲಿ ಮಾದಕ ವಸ್ತು ಎಂಡಿಎಂಎಯನ್ನು ಬೆಂಗಳೂರಿನಿಂದ ತಂದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆತನ ವಶದಿಂದ ಒಟ್ಟು 50 ಗ್ರಾಂ ತೂಕದ ರೂ. 2,50,000 ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, ನಗದು ರೂ. 8,000 ರೂ., ಮೊಬೈಲ್ ಫೋನ್-1, ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 2,68,500 ರೂ. ಆಗಬಹುದು. ಆರೋಪಿಯ ವಿರುದ್ಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮಾದಕ ವಸ್ತು ಮಾರಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ.
ಈ ಮಾದಕ ವಸ್ತು ಮಾರಾಟ ಜಾಲದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗಡೆ, ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಹೆಚ್.ಎಂ, ಪಿಎಸ್‌ಐಯವರಾದ ರಾಜೇಂದ್ರ ಬಿ, ಸುದೀಪ್ ಎಂ ವಿ, ಶರಣಪ್ಪ ಭಂಡಾರಿ, ನರೇಂದ್ರ ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.ಡ್ರಗ್ಸ್ ಫ್ರಿ ಮಂಗಳೂರು ಮಾಡುವ ನಿಟ್ಟಿನಲ್ಲಿ ಮಂಗಳೂರು ನಗರದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಸಲುವಾಗಿ ಮಾದಕ ವಸ್ತು ಮಾರಾಟ ಮಾಡುವವರ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ಒದಗಿಸುವಂತೆ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.