

ಸಿಂಧನೂರು: ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿವರನ್ನು ದೇಶದ್ರೋಹಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಹಸೀಲ್ದಾರ್ ಮಂಜುನಾಥ ಭೋಗಾವತಿಗೆ ಮನವಿ ಸಲ್ಲಿಸಿತು.
ಮಾದಕ ವಸ್ತುಗಳು ಸಮಾಜಕ್ಕೆ ಅತ್ಯಂತ ಹಾನಿಕಾರಕವಾಗಿವೆ. ಈ ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾದವರು ಸ್ವತಃ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವುದಲ್ಲದೆ, ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಾರೆ ಎಂಬ ಅಂಶ ಗಮನದಲ್ಲಿಟ್ಟುಕೊಂಡು ಎಬಿವಿಪಿ 2014ರಲ್ಲಿ ಶಾಲಾ-ಕಾಲೇಜ್ ಕ್ಯಾಂಪಸ್ಗಳಲ್ಲಿನ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಡೀ ದೇಶದ್ಯಾಂತ ನಶಾಮುಕ್ತ ಭಾರತ ಎಂಬ ಅಭಿಯಾನ ನಡೆಸಿತ್ತು. ಸಾರ್ವಜನಿಕ ಸ್ಥಳ ಮತ್ತು ಶಾಲಾ ಕ್ಯಾಂಪಸ್ಗಳಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿಯೂ ಮೂಡಿಸಿತ್ತು.
ರಾಜ್ಯದ ಹಲವು ಶಾಲಾ-ಕಾಲೇಜ್ಗಳಲ್ಲಿ ಡ್ರಗ್ಸ್ ಜಾಲ ವ್ಯವಸ್ಥಿತವಾಗಿ ಕೋಡ್ ಮೂಲಕ ಈ ದಂಧೆ ನಡೆಸುತ್ತಿದೆ. ಇದರಿಂದ ಕಾಲೇಜ್ಗಳಲ್ಲಿ ಡ್ರಗ್ಸ್ ಅಡಪ್ಟ್ ಆಗುವುದು ಒಂದು ರೀತಿಯಲ್ಲಿ ಪ್ಯಾಶನ್ ಆಗಿದೆ. ಈ ನಿಟ್ಟಿನಲ್ಲಿ ಪೋಷಕರು ಎಚ್ಚರಿಕೆ ವಹಿಸಿಕೊಳ್ಳಬೇಕಾಗಿದೆ. ಬೆಂಗಳೂರಿನ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆ ತನಿಖೆ ಮತ್ತಷ್ಟು ಚುರುಕುಗೊಳಿಸಬೇಕಾಗಿದೆ. ಈ ಜಾಲದಲ್ಲಿ ಪ್ರಭಾವಿಗಳ ಹಸ್ತಕ್ಷೇಪ ಇರುವುದರಿಂದ ಯಾವುದೇ ಒತ್ತಡಕ್ಕೆ ಮಣಿಯದೆ ಗೃಹ ಇಲಾಖೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಎಬಿವಿಪಿಯ ಸಂಚಾಲಕ ಚನ್ನಾರೆಡ್ಡಿ ನಂದಿಹಾಳ ಅಕ್ಷಯ ಹಿರೇಮಠ, ಬಸವಗೌಡ, ಅಭಿಷೇಕ ಖಂಡಿಮಠ, ವಿಶ್ವ, ರೊಹಿತ್, ಶಿವಕುಮಾರ, ರಾಘವೇಂದ್ರ, ರುದ್ರಾ ಹಿರೇಮಠ ಇದ್ದರು.