ಶಾಶ್ವತ ಕಾರ್ಯವಿಧಾನದಿಂದ ಡ್ರಗ್ಸ್ ಮುಕ್ತ ದಕ್ಷಿಣ ಕನ್ನಡ ಅಭಿಯಾನಕ್ಕೆ ಚಾಲನೆ ನೀಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

Mng-july15-Aloysius drugs
Published on

ಮಂಗಳೂರು: ಡ್ರಗ್ಸ್ ಮುಕ್ತ ದಕ್ಷಿಣ ಕನ್ನಡ ಜಿಲ್ಲೆಗಾಗಿ ಜಿಲ್ಲಾಡಳಿತವು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಶಾಶ್ವತ ಕಾರ್ಯವಿಧಾನ ಹಮ್ಮಿಕೊಂಡಿದ್ದು, ಇದಕ್ಕೆ ಶಾಲಾ ಕಾಲೇಜು ಪ್ರಮುಖರು, ಪೋಷಕರು ಸೇರಿದಂತೆ ಸಮಾಜದ ಸಹಕಾರ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.


ದ.ಕ. ಜಿಲ್ಲಾಡಳಿತವು ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ಪೊಲೀಸ್ ಇಲಾಖೆ, ನಗರದ ಸಂತ ಅಲೋಶಿಯಸ್ ಕಾಲೇಜಿನ ಸಹಯೋಗದಲ್ಲಿ ಶನಿವಾರ ವಿವಿಧ ಶೈಕ್ಷಣಿಕ ಸಂಸ್ಥೆಗಳ ಪ್ರಮುಖರಿಗಾಗಿ ಹಮ್ಮಿಕೊಂಡ ‘ಮಾದಕ ವ್ಯಸನಮುಕ್ತ ದಕ್ಷಿಣ ಕನ್ನಡ ಜಿಲ್ಲೆ ಅಭಿಯಾನ’ನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಡ್ರಗ್ಸ್ ವ್ಯಸನ ಒಂದು ಕೆಟ್ಟ ಅಭ್ಯಾಸ ಮಾತ್ರವಲ್ಲದೆ ಅದು ಒಂದು ಮಾನಸಿಕ ರೋಗವಾಗಿದ್ದು, ಅದಕ್ಕೆ ಚಿಕಿತ್ಸೆ ಅಗತ್ಯವಾಗಿದೆ. ಈ ಪಿಡುಗನ್ನು ಬೇರು ಸಹಿತ ಕಿತ್ತು ಹಾಕುವ ದೃಷ್ಟಿಯಿಂದ ಜಿಲ್ಲಾಡಳಿತ ಶಾಶ್ವತ ಕಾರ್ಯವಿಧಾನವನ್ನು ರೂಪಿಸಿದೆ. ಜಿಲ್ಲೆಯು ಸಂಪೂರ್ಣವಾಗಿ ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗಿಲ್ಲ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಇಲ್ಲಿ ಡ್ರಗ್ಸ್‌ಗಳ ಬೇಡಿಕೆ ಹಾಗೂ ಲಭ್ಯತೆ ತೀವ್ರಗೊಂಡಿರುವುದಕ್ಕೆ ಅಂಕುಶ ಹಾಕಬೇಕಾಗಿದೆ. ಸರ್ಕಾರದಿಂದ ಈ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುವ ಜತೆಯಲ್ಲೇ ಸಾಮಾಜಿಕವಾಗಿ, ಸಾರ್ವಜನಿಕ ಪಾಲ್ಗೊಳ್ಳುವಿಕೆಯೂ ಅತೀ ಅಗತ್ಯವಾಗಿದೆ ಎಂದರು.

ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಅಭಿಯಾನ ಆಗಸ್ಟ್ 15ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಡ್ರಗ್ಸ್ ಮುಕ್ತ ದಕ್ಷಿಣ ಕನ್ನಡ ಜಿಲ್ಲೆಯನ್ನಾಗಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿದೆ ಎಂದರು.
ಕಾರ್ಯಾಗಾರದಲ್ಲಿ ಹಿರಿಯ ಮನೋರೋಗ ತಜ್ಞ ಡಾ.ರವೀಶ್ ತುಂಗ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು. ಸೈಂಟ್ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ.ಡಾ. ಪ್ರವೀಣ್ ಮಾರ್ಟಿಸ್ ಅಧ್ಯಕ್ಷತೆ ವಹಿಸಿದ್ದರು.


ಐಎಎಸ್ ಪ್ರೊಬೆಷನರಿ ಅಧಿಕಾರಿ ಮುಕುಲ್ ಜೈನ್, ಡಿಸಿಪಿ ದಿನೇಶ್ ಕುಮಾರ್, ಲಿಂಕ್ ಡಿಎಡಿಕ್ಷನ್ ಸೆಂಟರ್‌ನ ಲಿಡಿಯಾ ಲೋಬೋ, ವೆನ್‌ಲಾಕ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಸದಾಶಿವ ಶ್ಯಾನುಬೋಗ್, ಡಾ.ಸುಪ್ರಿತಾ ಮೊದಲಾದವರು ಉಪಸ್ಥಿತರಿದ್ದರು. ಡಾ. ಸುದರ್ಶನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net