ರಥಬೀದಿಯಲ್ಲಿ ಮಾದಕ ದ್ರವ್ಯ ಅಂಗಡಿ!

Deug store tabloo in gokrna rathabidi
Published on

ಗೋಕರ್ಣ: ಸಾಮಾಜಿಕ ಪಿಡುಗಾಗಿ ಗೋಕರ್ಣವನ್ನು ಕಾಡುತ್ತಿರುವ ಮಾದಕ ದ್ರವ್ಯ ವಹಿವಾಟು ನಡೆಸುವ ಅಂಗಡಿ, ಮದ್ಯಪಾನ ಮತ್ತು ಇಸ್ಪೀಟ್ ಜೂಜು, ಮೈ ತುಂಬ ಬೂದಿ ಬಳಿದುಕೊಂಡ ಘೋರವಾದ ಅಘೋರಿಗಳು, ವಿಕ್ರಮಾದಿತ್ಯ ಯುದ್ಧನೌಕೆ, ದಕ್ಷಿಣ ಕನ್ನಡದ ಕಂಬಳ ಓಟ, ನಿರಂತರ ನೀರು ಸುರಿಯುತ್ತಿರುವ ಫೌಂಟೇನ್‌ನಲ್ಲಿನ ಜೀವಂತ ಬೊಂಬೆಗಳು ಮತ್ತು ಅದರ ಮೇಲೆ ರಾಕ್ಷಸನ ವಶದಲ್ಲಿರುವ ಬಾಲಕ ಮುಂತಾದವುಗಳನ್ನು ವಾಸ್ತವವಾಗಿ ಮಾಡಿ ತೋರಿಸಲಾಯಿತು.

ಹಾಲಕ್ಕಿ ಒಕ್ಕಲಿಗರ ಸಾಂಪ್ರದಾಯಿಕ ಸುಗ್ಗಿ ಹಬ್ಬದ ಪ್ರಮುಖ ಆಕರ್ಷಣೆಯಾದ ವಿವಿಧ ಸಾಮಾಜಿಕ, ಪೌರಾಣಿಕ ಮತ್ತು ಐತಿಹಾಸಿಕ ಸನ್ನಿವೇಶಗಳನ್ನು ವಿಶೇಷ ರೂಪದಲ್ಲಿ ಪ್ರತಿಬಿಂಬಿಸುವ ಹಗರಣ ಕಾರ್ಯಕ್ರಮ ಬಿಜ್ಜೂರು ಹಾಲಕ್ಕಿ ತಂಡದ ವತಿಯಿಂದ ಶನಿವಾರ ರಾತ್ರಿ ಜನ ದಟ್ಟಣೆಯ ನಡುವೆ ರಥಬೀದಿಯಲ್ಲಿ ನಡೆಯಿತು.

ಇದೇ ರೀತಿ ಚಾಲುಕ್ಯರ ಯುದ್ಧದ ಸನ್ನಿವೇಶಗಳನ್ನು ಐತಿಹಾಸಿಕ ವೇಷ-ಭೂಷಗಳೊಂದಿಗೆ ರೋಚಕವಾಗಿ ಪ್ರದರ್ಶಿಸಲಾಯಿತು. ಇವುಗಳ ಜತೆಗೆ ತಿರುಗುವ ಕಮಲದ ಮೇಲೆ ಕುಳಿತ ಗೋಪಾಲ ಕೃಷ್ಣ, ಬೃಂದಾವನದಲ್ಲಿನ ರಾಧೆ-ಕೃಷ್ಣರ ಜೋಡಿ, ಭಕ್ತ ಪ್ರಹ್ಲಾದ ಮತ್ತು ನಾರಸಿಂಹ ಅವತಾರದ ಮರು ಸೃಷ್ಟಿಗಳು ಸೇರಿದ ಸಾವಿರಾರು ಜನರ ಮೆಚ್ಚುಗೆಗೆ ಪಾತ್ರವಾಯಿತು.

ಕಿಕ್ಕಿರಿದು ತುಂಬಿದ ಹಗರಣ ಕಾರ್ಯಕ್ರಮವನ್ನು 10 ಸಾವಿರಕ್ಕೂ ಅಧಿಕ ಪ್ರೇಕ್ಷಕರು ವೀಕ್ಷಿಸಿ ಹರ್ಷಿತರಾದರು.

ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಆಗಮಿಸಿದ್ದ ಅಪಾರ ಸಂಖ್ಯೆಯ ಪ್ರವಾಸಿಗರು ಕೂಡ ಗೋಕರ್ಣದ ಈ ಜಾನಪದ ಉತ್ಸವದಲ್ಲಿ ಭಾಗವಹಿಸಿ ಆಸ್ವಾದಿಸಿದರು. ಇದೇ ರೀತಿಯಲ್ಲಿ ಹಾಲಕ್ಕಿ ಒಕ್ಕಲಿಗರ ಹುಳಸೇಕೇರಿ ತಂಡದವರಿಂದಲೂ ಆಕರ್ಷಣೀಯವಾದ ಹಗರಣ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net