ಕಾರು ಹತ್ತಿಸಿದ ತಪ್ಪಿಗೆ ರಕ್ತಸಿಕ್ತ ಬಾಲಕನನ್ನು ಚರಂಡಿಯಲ್ಲಿ ಎಸೆದು ಹೋದ!

police
Published on

ನವದೆಹಲಿ: ಅಕಸ್ಮಾತ್ತಾಗಿ 10 ವರ್ಷದ ಬಾಲಕನ ಮೇಲೆ ಕಾರು ಹತ್ತಿಸಿದ ಚಾಲಕ, ರಕ್ತಸಿಕ್ತ ಮಗುವನ್ನು ಕಾರಿನಲ್ಲಿಯೇ ಕರೆದುಕೊಂಡು ಹೋಗಿ ಚರಂಡಿಗೆ ಎಸೆದಿರುವ ಅಮಾನುಷ ಘಟನೆ ನೋಯ್ಡಾದಲ್ಲಿ ನಡೆದಿದೆ.

ಸಾವು-ಬದುಕಿನ ನಡುವೆ ಹೋರಾಟ ಮಾಡಿದ ಬಾಲಕ ಅಲ್ಲಿಯೇ ಪ್ರಾಣಬಿಟ್ಟಿದ್ದಾನೆ. ಕಳೆದ ಭಾನುವಾರ ಈ ಘಟನೆ ನಡೆದಿದೆ. ಬಾಲಕನನ್ನು ಜುಮ್ಮನ್‌ ಎಂದು ಗುರುತಿಸಲಾಗಿದೆ.

ಮನೆಯ ಸಮೀಪ ಆಡುತ್ತಿದ್ದ ತಮ್ಮ ಮಗ ನಾಪತ್ತೆಯಾದಾಗ ಆತನ ಪಾಲಕರು ಎಲ್ಲೆಡೆ ಹುಡುಕಿದ್ದಾರೆ. ಮಗ ಸಿಗದಿದ್ದಾಗ ಆತನ ತಂದೆ ಜುಮ್ಮನ್‌ ಪೊಲೀಸ್‌ ಠಾಣೆಗೆ ದೂರು ದಾಖಲು ಮಾಡಿದ್ದಾರೆ. ಎಷ್ಟು ಹುಡುಕಿದರೂ ಬಾಲಕ ಪತ್ತೆಯಾಗಿರಲಿಲ್ಲ. ನಂತರ ಕಾರ್ಯಾಚರಣೆ ಮುಂದುವರೆಸಿದಾಗ, ಒಬ್ಬ ವ್ಯಕ್ತಿಯು ರಕ್ತಸ್ರಾವವಾಗಿದ್ದ ಮಗುವನ್ನು ಕಾರಿನಲ್ಲಿ ಇರಿಸಿಕೊಂಡು ಹೋಗುತ್ತಿದ್ದುದನ್ನು ತಾವು ನೋಡಿದ್ದಾಗಿ ಸ್ಥಳೀಯರು ಹೇಳಿದ್ದಾರೆ.

ಅದೇ ಮಾರ್ಗದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದರು. ನಂತರ ಬೊಲೆರೊ ಪಿಕ್ ಅಪ್ ವ್ಯಾನ್‌ನಲ್ಲಿ ಬಾಲಕನನ್ನು ಕರೆದುಕೊಂಡು ಹೋಗಿರುವುದು ತಿಳಿಯಿತು. ಪೊಲೀಸರು ಕಾರನ್ನು ಪತ್ತೆ ಹಚ್ಚಿ ಆರೋಪಿ ಮದನ್ ಲಾಲ್ ಎಂದು ಗುರುತಿಸಲಾಗಿದೆ.

ಬಿಹಾರ ಮೂಲದ ಮದನ್‌ಲಾಲ್‌ ಅದೇ ಮಾರ್ಗವಾಗಿ ಬರುತ್ತಿದ್ದಾಗ ಜುಮ್ಮನ್‌ ಮನೆ ಹತ್ತಿರ ಆಟವಾಡುತ್ತಿದ್ದ. ಕಾರನ್ನು ಹಿಂದಕ್ಕೆ ತೆಗೆದುಕೊಳ್ಳುವಾಗ ಮಗುವಿನ ಮೇಲೆ ಮದನ್‌ಲಾಕ್‌ ಕಾರು ಹರಿಸಿದ್ದಾನೆ. ಮಗುವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಬದಲು ಚರಂಡಿಯಲ್ಲಿ ಎಸೆದು ಹೋಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net