ವಿಜಯಪುರ: ಐಸಿಸಿ ಸಭೆಯ ತೀರ್ಮಾನದಂತೆ ಆಲಮಟ್ಟಿ ಜಲಾಶಯದಿಂದ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, 2023 ಆ.21 ರಂದು ಆಲಮಟ್ಟಿಯ ವ್ಯವಸ್ಥಾಪಕ ನಿರ್ದೇಶಕ ಕಚೇರಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗಿತ್ತು. ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಎಲ್‌ಬಿಎಸ್ ಜಲಾಶಯ ವ್ಯಾಪ್ತಿಗೆ ಬರುವ ಎಲ್ಲ ಕಾಲುವೆಗಳಿಗೆ ನೀರು ಹರಿಸುವಂತೆ ತೀರ್ಮಾನ ಕೈಗೊಳ್ಳಲಾಗಿತ್ತು. ಬೆಳೆಗಳಿಗೆ ನೀರುಣಿಸಲು ಮತ್ತು ಕೆರೆಗಳನ್ನು ಭರ್ತಿ ಮಾಡಲು ಕಾಲುವೆಗೆ ನೀರು ಹರಿಸುವುದು ಅಗತ್ಯ ಎಂದು ತಿಳಿಸಲಾಗಿತ್ತು. ಮುಂಗಾರು ಹಂಗಾಮಿನ ಬೆಳೆಗಳಿಗೆ ವಾರಾಬಂದಿ ಪದ್ಧತಿಯಲ್ಲಿ 14 ದಿನ ನೀರು ಹರಿಸುವುದು ಹಾಗೂ 10 ದಿನ ಬಂದ್ ಇಡುವ ಪದ್ದತಿ ಅನುಸರಿಸುವ ನಿಟ್ಟಿನಲ್ಲಿ ನಿರ್ಣಯಿಸಲಾಗಿತ್ತು. ಆದರೆ, ಈ ನಿರ್ಣಯ ಒಂದು ವಾರ ಮಾತ್ರ ಅನುಷ್ಟಾನಗೊಂಡಿದ್ದು, ಸಮರ್ಪಕವಾಗಿ ನೀರು ಹರಿಸಲಾಗಿಲ್ಲ. ಸದ್ಯ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ ಎಂದರು.
ಮುಂಗಾರು ಬೆಳೆಗಳಿಗೆ ನೀರಿಲ್ಲದೆ ಸಂಪೂರ್ಣ ನೆಲಕಚ್ಚಿವೆ. ಕಾಲುವೆಗಳಿಗೆ ನೀರು ಬಂದರೆ ಅಲ್ಪ ಸ್ವಲ್ಪ ನೀರುಣಿಸಿದರೆ ಸ್ವಲ್ಪ ಮಟ್ಟಿಗಾದರೂ ಮುಂಗಾರು ಬೆಳೆ ಕೈಗೆ ಬರುತ್ತವೆ ಎಂಬ ಆಶಾಭಾವದಲ್ಲಿದ್ದ ರೈತರಿಗೆ ಸಂಪೂರ್ಣ ನಿರಾಸೆಯಾಗಿದೆ. ಮುಂಗಾರು ಮಳೆ ಸಂಪೂರ್ಣ ಕೈ ಕೊಟ್ಟಿದ್ದರಿಂದ ರೈತರು ತುಂಬಾ ಹತಾಶೆಗೊಂಡಿದ್ದಾರೆ. ಜಿಲ್ಲೆಯ ರೈತರಿಗೆ ಐಸಿಸಿ ಸಮಿತಿ ಮೋಸಮಾಡಿದೆ ಎಂದರು.
ಸದ್ಯ ಜಲಾಶಯದಲ್ಲಿ 109.129 ಟಿಎಂಸಿ ನೀರು ಸಂಗ್ರಹವಿದೆ. ಅದರಲ್ಲಿ 17 ಟಿಎಂಸಿ ನೀರು ಡೆಡ್‌ಸ್ಟೋರೇಜ್ ಹೊರತುಪಡಿಸಿದರೂ ಇನ್ನೂ 91-509 ಟಿಎಂಸಿ ನೀರು ಲಭ್ಯವಿದೆ. ಈಗಲೂ ಜಲಾಶಯಕ್ಕೆ 1791 ಕ್ಯೂಸೆಕ್ ನೀರಿನ ಒಳ ಹರಿವಿದೆ. 1111 ಕ್ಯೂಸೆಕ್ ನೀರನ್ನು ಬೆಳೆಗಳಿಗಾಗಿ ಹರಿಸಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಯಾವ ಯಾವ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ ಎಂಬುದು ಸ್ಪಷ್ಟಪಡಿಸಲಿ ಎಂದು ಕುಲಕರ್ಣ ಆಗ್ರಹಿಸಿದರು.
ತಾಲೂಕು ಗೌರವಾಧ್ಯಕ್ಷ ಈರಣ್ಣ ದೇವರಗುಡಿ, ಸೋಮನಗೌಡ ಪಾಟೀಲ, ಚನಬಸಪ್ಪ ಸಿಂಧೂರ, ಅಣ್ಣಾರಾಯಗೌಡ ಬಿರಾದಾರ, ಶಿವಪ್ಪ ಸುಂಠ್ಯಾಣ, ಸಂಗಪ್ಪ ಪಡಸಲಗಿ, ಸಂಗನಗೌಡ ಬಿರಾದಾರ, ಶರಣು ಇಟಗಿ, ಲಂಕ್ಯೆಪ್ಪ ತಳವಾರ, ಗಿರಿಮಲ್ಲಪ್ಪ ದೊಡಮನಿ, ಶಂಕ್ರೆಪ್ಪ ಹೂಗಾರ, ಚಿಂಟು ವಾಲಿಕಾರ, ಸೋಮನಗೌಡ ಪಾಟೀಲ ಮತ್ತಿತರರಿದ್ದರು.