ಕವಿ ಎಚ್.ಡುಂಡಿರಾಜ ಅನಿಸಿಕೆ
ಡಾ. ಉಪ್ಪಂಗಳ ರಾಮ ಭಟ್ ನೆನಪು
ವಿಜಯವಾಣಿ ಸುದ್ದಿಜಾಲ ಉಡುಪಿ
ಚಿಕ್ಕ ಮಕ್ಕಳಿಗೆ ಏನಾದರೂ ಹೇಳಿದರೆ ಅದು ಅವರ ಮನಸ್ಸಿಗೆ ನಾಟುತ್ತದೆ. ಮಧ್ಯ ವಯಸ್ಸಿನವರಂತೂ ದುರಸ್ತಿ ಮಾಡಲಾಗದಷ್ಟು ಕೆಟ್ಟು ಹೋಗಿದ್ದಾರೆ. ಕಲಿಕೆ, ಅಂಕ ಗಳಿಸುವ ಶಿಕ್ಷಣವು ಕೆಲಸ ಸಿಗುವ ತನಕ ಮಾತ್ರ. ಆದರೆ, ಪ್ರವೃತ್ತಿ ಎನ್ನುವುದು ಜೀವನದ ಕೊನೆಯತನಕ ಇರುತ್ತದೆ. ಆಹಾರವು ಹೊಟ್ಟೆಯ ಹಸಿವು ತಣಿಸುವಂತೆ ಸಾಹಿತ್ಯವು ಮನಸ್ಸಿನ ಹಸಿವು ತಣಿಸುವ ಆಹಾರವಾಗಬೇಕು ಎಂದು ಕವಿ ಎಚ್.ಡುಂಡಿರಾಜ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ಎ.ವಿ. ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ, ಕಾಲೇಜಿನ ಐಕ್ಯುಎಸಿ ಹಾಗೂ ಕನ್ನಡ ವಿಭಾಗದ ವತಿಯಿಂದ ಮಾ.22ರಂದು ಆಯೋಜಿಸಿದ್ದ ಡಾ. ಉಪ್ಪಂಗಳ ರಾಮ ಭಟ್ ನೆನಪು ಪುಸ್ತಕ ವಿತರಣೆ ಹಾಗೂ ಪ್ರಸಿದ್ಧ ಕವಿ ಎಚ್.ದುಂಡಿರಾಜ ಅವರೊಂದಿಗೆ ಮಾತುಕತೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಂಜಿಎಂ ಕಾಲೇಜು ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು.
ಶಂಕರಿ ರಾಮ ಭಟ್ ಪುಸ್ತಕ ವಿತರಿಸಿದರು. ಎಂಜಿಎಂ ಕಾಲೇಜು ಉಪಪ್ರಾಂಶುಪಾಲ ಡಾ. ವಿಶ್ವನಾಥ ಪೈ, ಐಕ್ಯುಎಸಿ ಸಂಯೋಜಕಿ ಪ್ರೊ.ಶೈಲಜಾ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪುತ್ತಿ ವಸಂತ ಉಪಸ್ಥಿತರಿದ್ದರು.
ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ ಎಚ್.ಪಿ. ಸ್ವಾಗತಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಸಿದ್ದಬಸಯ್ಯಸ್ವಾಮಿ ಚಿಕ್ಕಮಠ ವಂದಿಸಿದರು.
ಮಕ್ಕಳ ಹನಿಗವನದ ಜಲಕ್
ಆತನೆಂದ: ಪ್ರಿಯೆ, ನಾನು ಮಜನು ನೀನು ಲೈಲಾ. ಆಕೆ ಕೇಳಿದಳು: ಓಯ್, ನಾನು ಪಾಸು. ನೀನು ಫೇಲಾ?
ಫಲಿತಾಂಶದಲ್ಲಿ ಹುಡುಗಿಯರೇ ಮುಂದೆ. ಯಾಕೆಂದರೆ, ಓದದ ಹುಡುಗರು ಸದಾ ಅವರ ಹಿಂದೆ!
ನಮ್ಮೂರ ಸರ್ಕಾರಿ ಶಾಲೆಯಲ್ಲಿ ಹೆಂಚು ಇದ್ದಲ್ಲಿ ಮಾಸ್ತರರು ಕೂರುವುದು. ಉಳಿದೆಡೆಯಲ್ಲಿ ಸೋರುವುದು!
ಪುಸ್ತಕದ ನಡುವೆಯಿತ್ತು ಜಿರಲೆ ಹೆಣ. ಕಾಡಿತು ಪ್ರಶ್ನೆ, ಓದಿರಬಹುದೇ ಅದು ನನ್ನ ಕವನ?
ಕಾಲು ನೋವು ಹೇಗಿದೆ? ಸ್ವಲ್ಪ ಬೀಗಿದೆ. ಬೆನ್ನು ನೋವು ಹೇಗಿದೆ? ಸ್ವಲ್ಪ ಕಡಿಮೆಯಾಗಿದೆ. ತಲೆನೋವು ಹೇಗಿದೆ? ತವರಿಗೆ ಹೋಗಿದೆ!
ಪ್ರಶ್ನೆಗೆ ಉತ್ತರ ಗೊತ್ತಿದ್ರೆ ಹೇಳ್ತೇನೆ, ಇಲ್ಲಾಂದ್ರೆ ಆಗಲ್ಲ. ಎಲ್ಲದಕ್ಕೂ ಉತ್ತರ ಕೊಡಲು ನಾನೇನು ಗೂಗಲ್ಲ?
ನೃತ್ಯ, ಸಂಗೀತ ಕಲಿಯಬೇಕು. ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಬರೆದು ಆ ಕುರಿತು ವಿಮರ್ಶೆ ಮಾಡಬೇಕು. ಅನ್ಯರ ಜತೆ ಚರ್ಚಿಸಬೇಕು. ಕವಿತೆ ಬರೆಯೋದು ಗುರು ಹೇಳಿಕೊಡುವ ವಿದ್ಯೆಯಲ್ಲ. ನಾವೇ ಕಲಿಯಬೇಕಾದ ಕಷ್ಟದ ಹಾದಿ. ಬರವಣಿಗೆಯಲ್ಲಿ ಭಿನ್ನತೆ, ವಿಶಿಷ್ಟತೆ ಬೇಕು.
| ಎಚ್.ದುಂಡಿರಾಜ. ಕವಿ