

ಕುಂಬಳೆ: ಕ.ಸಾ.ಪ. ಗಡಿನಾಡ ಘಟಕದ ಮಾಜಿ ಅಧ್ಯಕ್ಷೆ ದಿ.ಡಾ.ಲಲಿತಾ ಎಸ್.ಎನ್.ಭಟ್ ವೈದ್ಯೆಯಾಗಿ, ಸಮಾಜ ಸೇವಕಿಯಾಗಿ, ಸಂಘಟಕಿಯಾಗಿ ಅಪ್ರತಿಮ ಸೇವೆಗೈದವರು. ಸಾಹಿತ್ಯ ರಚನೆ, ಪುಸ್ತಕ ಪ್ರಕಾಶನ, ಅನುವಾದ, ಸೇವಾತತ್ಪರತೆಯಿಂದ ಅಕ್ಷರಶಃ ಮೇರು ವ್ಯಕ್ತಿತ್ವದ ಅಪ್ರತಿಮ ಸಾಧಕಿಯಾಗಿದ್ದವರು ಎಂದು ನ್ಯಾಯವಾದಿ, ಲೇಖಕ ಥಾಮಸ್ ಡಿಸೋಜಾ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ಕ.ಸಾ.ಪ. ಮಾಜಿ ಅಧ್ಯಕ್ಷೆ, ಕನ್ನಡ ಹೋರಾಟಗಾರ್ತಿ ದಿ.ಡಾ.ಲಲಿತಾ ಎಸ್.ಎನ್.ಭಟ್ ಅವರಿಗೆ ಸೀತಾಂಗೋಳಿಯ ತಮ್ಮ ಕಾರ್ಯಾಲಯದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸ್ಮರಣಾ ನುಡಿಗಳನ್ನಾಡಿದರು.
ಕಸಾಪ ಕೇರಳ ಗಡಿನಾಡ ಘಟಕದ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ ಸೇವೆಯೊಂದಿಗೆ ಜನಸೇವೆ ಮಾಡಿದ್ದ ಡಾ.ಲಲಿತಾ ಎಸ್.ಎನ್.ಭಟ್ ತಮ್ಮ ಸೇವಾ ಕಾರ್ಯ, ಕನ್ನಡ ಚಟುವಟಿಕೆಗಳ ಮೂಲಕ ಜನಾರ್ದನ ಸೇವೆ ಕಂಡು ಕೃತಾರ್ಥರಾದವರು. ಪ್ರತಿಯೊಂದು ಚಟುವಟಿಕೆಗಳಲ್ಲೂ ಪೂರ್ಣ ತೊಡಗಿಸಿಕೊಳ್ಳುವಿಕೆ, ಸಹವರ್ತಿಗಳೊಳಡನೆ ಅವರ ಬಾಂಧವ್ಯ ಅನುಸರಣೀಯ ಎಂದರು.
ಹಿರಿಯ ಸಾಹಿತಿ ಬಾಲ ಮಧುರಕಾನನಕವನದ ಮೂಲಕ ನುಡಿನಮನ ಸಲ್ಲಿಸಿದರು. ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕಾಧ್ಯಕ್ಷ ಟಿ.ಶಂಕರನಾರಾಯಣ ಭಟ್, ಹಿರಿಯ ನಾಗರಿಕರ ವೇದಿಕೆ ವಲಯಾಧ್ಯಕ್ಷ ಈಶ್ವರ ಭಟ್ ಪೆರ್ಮುಖ, ವಿದ್ಯಾಲಕ್ಷಿ ಮಠದಮೂಲೆ ಉಪಸ್ಥಿತರಿದ್ದರು.
ಕಸಾಪ ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ನಿರೂಪಿಸಿದರು. ಗೌರವ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಬೇಳ ವಂದಿಸಿದರು.