ಸಿನಿಮಾ ನಿರ್ಮಿಸುತ್ತಾರಂತೆ ಡಾ. ಕಾಮಿನಿ ರಾವ್

Kamini Rao - Final
Published on

ಬೆಂಗಳೂರು: ವೈದ್ಯಕೀಯ ಲೋಕದಲ್ಲಿ ಡಾ. ಕಾಮಿನಿ ರಾವ್​ ಅವರದ್ದು ದೊಡ್ಡ ಹೆಸರು. ಪ್ರಸೂತಿ ಮತ್ತು ಸ್ತ್ರಿರೋಗ ತಜ್ಞೆಯಾಗಿ ದೊಡ್ಡ ಹೆಸರು ಮಾಡಿರುವ ಅವರು, ಪದ್ಮಶ್ರೀ ಸೇರಿದಂತೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪುರಸ್ಕಾರಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಂಡಿರುವ ಅವರು, ವೈದ್ಯಕೀಯ ಮತ್ತು ಸಮಾಜ ಸೇವೆಯ ಜತೆಗೆ ಮನರಂಜನಾ ಕ್ಷೇತ್ರಕ್ಕೂ ಕಾಲಿಡುತ್ತಿದ್ದಾರೆ.

ಕಾಮಿನಿ ರಾವ್​ ಅವರು ಪೂರ್ವಿ ಪ್ರೊಡಕ್ಷನ್ಸ್ ಹೆಸರಿನಲ್ಲಿ ತಮ್ಮದೇ ಆದ ಸ್ವಂತ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿ ಮುಂದಿನ ದಿನಗಳಲ್ಲಿ ಯೂಟ್ಯೂಬ್​ನಲ್ಲಿ ಒಂದಿಷ್ಟು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ; ಈ ಸಂಸ್ಥೆಯಲ್ಲಿ ಕೆಲವು ಕಾರ್ಯಕ್ರಮಗಳನ್ನು ರೂಪಿಸಿರುವ ಅವರು, ಮುಂದಿನ ದಿನಗಳಲ್ಲಿ ಚಿತ್ರನಿರ್ಮಾಣದಲ್ಲೂ ತೊಡಗಿಸಿಕೊಳ್ಳಲಿದ್ದಾರಂತೆ.

ಪ್ರಮುಖವಾಗಿ ಅವರು 'ಡಾ. ಕಾಮಿನಿ ರಾವ್ಸ್ ಮಾಸ್ಟರ್ ಕ್ಲಾಸ್' ಎಂಬ ಕಾರ್ಯಕ್ರಮವನ್ನು ನಡೆಸಿಕೊಡುವುದಕ್ಕೆ ಮುಂದಾಗಿದ್ದಾರೆ. ಈ ಕಾರ್ಯಕ್ರಮವು ಕೇವಲ ಸಾಮಾನ್ಯ ಸಂಗತಿಗಳಿಂದ ಕೂಡಿರದೇ, ಸ್ಪೂರ್ತಿದಾಯಕ ಅಂಶಗಳ ಜತೆಗೆ, ಯಶಸ್ಸಿನ ಏಣಿ ಏರುವುದಕ್ಕೂ ಇದು ರಹದಾರಿಯಾಗಿದೆ. ಸಾಮಾನ್ಯನಿಂದ ಅಸಾಮಾನ್ಯನೆಡೆಗೆ 'ಡಾ. ಕಾಮಿನಿ ರಾವ್ಸ್ ಮಾಸ್ಟರ್ ಕ್ಲಾಸ್​​'ನಲ್ಲಿ ಮಾಹಿತಿ ನೀಡಲಾಗುತ್ತದೆ.

ಇದರ ಜತೆಗೆ 'ಪೂರ್ವಿ ರಾಗ ಹರಟೆ' ಎಂಬ ಸ್ಫೂರ್ತಿದಾಯಕ ಕಾರ್ಯಕ್ರಮವನ್ನೂ ಆಯೋಜಿಸುತ್ತಿದ್ದು, ಒಂದಷ್ಟು ಗಾಯಕರು ಮತ್ತು ಸಂಗೀತಗಾರರನ್ನ ಆಯ್ಕೆ ಮಾಡಿಕೊಂಡು, ಅವರಿಂದ ವೇದಿಕೆ ಕಾರ್ಯಕ್ರಮವನ್ನೂ ಮಾಡಲಿದ್ದಾರೆ. ಹಾಸ್ಯದ ಜತೆಗೆ ಹಾಡು ಹರಟೆಯೂ ಇಲ್ಲಿ ಪ್ರಧಾನವಾಗಿರಲಿದೆ. ಇದಲ್ಲದೆ ಪೂರ್ವಿ ಪ್ರೊಡಕ್ಷನ್ಸ್​ನಡಿ ಸಾಮಾಜಿಕ ಕಳಕಳಿಯುಳ್ಳ ಮತ್ತು ಜನಸಾಮಾನ್ಯರಿಗೂ ಹತ್ತಿರವೆನಿಸುವ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿ ಸಮಾಜಕ್ಕೆ ನೀಡುವುದು ಅವರ ಉದ್ದೇಶವಾಗಿದೆ.

ಈ ಕುರಿತು ಮಾತನಾಡುವ ಅವರು, 'ಪ್ರೊಡಕ್ಷನ್​ ಹೌಸ್​ ಪ್ರಾರಂಭಿಸುತ್ತಿರುವ ಮುಖ್ಯ ಉದ್ದೇಶವೆಂದರೆ ಸಿನಿಮಾ ನಿರ್ಮಾಣ, ಡಾಕ್ಯುಮೆಂಟರಿಗಳು, ಹರಟೆ ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಡುವುದು. ಧನಾತ್ಮಕ ಅಂಶಗಳಿರುವ ಮತ್ತು ಎಲ್ಲರಿಗೂ ಅನ್ವಯವಾಗುವಂತಹ ವಿಷಯಗಳನ್ನು ತಲುಪಿಸುವ ಕೆಲಸವನ್ನು ಮಾಡುವುದಕ್ಕೆ ಹೊರಟಿದ್ದೇವೆ' ಎನ್ನುತ್ತಾರೆ ಅವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net