ಕಾವೇರಿ ನೀರು ಬೆಂಗಳೂರಿಗೆ ಬರಲು ಡಾ.ಜಿ ನಾರಾಯಣ ಕಾರಣ: ಸಚಿವೆ ಲೀಲಾದೇವಿ ಆರ್.ಪ್ರಸಾದ್

j narayana function
Published on

ಬೆಂಗಳೂರು: ಬೆಂಗಳೂರಿನ ಜನರು ಇಂದು ಕಾವೇರಿ ನೀರು ಕುಡಿಯುತ್ತಿರುವುದಕ್ಕೆ ಗಾಂಧೀವಾದಿ ಡಾ.ಜಿ. ನಾರಾಯಣ ಅವರು ಅಂದು ತೆಗೆದುಕೊಂಡ ತೀರ್ಮಾನವೇ ಕಾರಣ ಎಂದು ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಹೇಳಿದರು.

ನಾಡೋಜ ಡಾ.ಜಿ.ನಾರಾಯಣ ಜನ್ಮಶತಮಾನೋತ್ಸವ ಸಮಿತಿ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಡಾ.ಜಿ.ನಾರಾಯಣ ಜನ್ಮಶತಮಾನೋತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಾರಾಯಣ ಅವರು, ಬಿಬಿಎಂಪಿ ಮೇಯರ್ ಆಗಿದ್ದ ವೇಳೆಯಲ್ಲಿ ನಾನು ಅವರ ಜತೆಗೆ ಕೆಲಸ ನಿರ್ವಹಿಸಿದ್ದೇನೆ. ಅವರು ಬೆಂಗಳೂರಿನ ಜನರಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಿಕೊಡಬೇಕೆಂದು ನಿರ್ಣಯ ತೆಗೆದುಕೊಂಡು ಸಂಪರ್ಕ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾದರು. ಇಂದು ಕಾವೇರಿ ನೀರು ಕುಡಿಯುತ್ತಿರುವ ನಾವೆಲ್ಲರೂ ಅವರ ಕೊಡುಗೆ ಮರೆಯಬಾರದು ಎಂದರು.

ಮೇಯರ್ ಆಗಿದ್ದ ವೇಳೆಯಲ್ಲಿ ನಾರಾಯಣ ಅವರು, ಮಾಗಡಿಗೆ ಭೇಟಿ ನೀಡಿ ಅಲ್ಲಿದ್ದ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಕಂಡು ಅದನ್ನು ಬೆಂಗಳೂರಿಗೆ ತಂದು ಪಾಲಿಕೆ ಎದುರಿಗಿರುವ ಪಾರ್ಕ್‌ನಲ್ಲಿ ಪ್ರತಿಷ್ಠಾಪಿಸಿದರು. ಮಹಿಳಾ ಲೇಖಕಿಯರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕರ್ನಾಟಕ ಲೇಖಕಿಯರ ಸಂಘದ ಸ್ಥಾಪಕರಾಗಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ಸಾಕಷ್ಟು ನೀಡಿದ್ದಾರೆ. ಕೆಲಸದಲ್ಲಿ ಶಿಸ್ತು, ಸರಳ ಜೀವನವನ್ನು ನಡೆಸಿದ ವ್ಯಕ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾಡೋಜ ಡಾ.ಜಿ.ನಾರಾಯಣ ಜನ್ಮಶತಮಾನೋತ್ಸವ ಸಮಿತಿ ಅಧ್ಯಕ್ಷ ನಾಡೋಜ ಪ್ರೊ.ಹಂಪ ನಾಗರಾಜಯ್ಯ ಮಾತನಾಡಿ, ನಾರಾಯಣ ಅವರು ನಾಡಗೀತೆ ರಚನೆಗೆ ಪ್ರಮುಖ ಕಾರಣೀಭೂತರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ವೇಳೆಯಲ್ಲಿ ನಾಡಗೀತೆ ರಚನೆಗಾಗಿ ಕುವೆಂಪು ಅವರ ಮನವೊಲಿಸಿದ್ದರು ಎಂದು ಆ ದಿನಗಳನ್ನು ಸ್ಮರಿಸಿಕೊಂಡರು.

ಇದೇ ವೇಳೆ ಜಿ.ನಾರಾಯಣ ಅವರ ‘ಚಿತ್ರಸಂಪುಟ’ ಮತ್ತು ‘ಅಕ್ಷರವ ನೀವು ಕಲಿಯಿರಿ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಡಾ.ಜಿ.ನಾರಾಯಣ ಪ್ರತಿಷ್ಠಾನದ ಅಧ್ಯಕ್ಷ ಜಿ.ನಾ.ಗೋಪಾಲಕೃಷ್ಣ ಸೇರಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net