

ಬೆಂಗಳೂರು: 18ನೇ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಇಂದು (ಜೂನ್ 04) ಪ್ರಕಟಗೊಂಡಿದ್ದು, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿಎನ್. ಮಂಜುನಾಥ್ ಕಾಂಗ್ರೆಸ್ನ ಡಿ.ಕೆ. ಸುರೇಶ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಾ.ಸಿ.ಎನ್. ಮಂಜುನಾಥ್ 9,85,798 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ನ ಡಿ.ಕೆ. ಸುರೇಶ್ 7,55,596 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಡಾ.ಸಿ.ಎನ್. ಮಂಜುನಾಥ್ 2,30,202 ಮತಗಳ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಈ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಇನ್ನೂ ತಮ್ಮ ಗೆಲುವಿನ ಕುರಿತು ಮಾತನಾಡಿರುವ ಡಾ.ಸಿ.ಎನ್ ಮಂಜುನಾಥ್, ಕಳೆದ 40 ವರ್ಷಗಳಿಂದ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಹೃದ್ರೋಗ ಪರಿಣಿತನಾಗಿ ಲಕ್ಷಾಂತರ ಜನಕ್ಕೆ ಚಿಕಿತ್ಸೆ ಒದಗಿಸಿದ್ದು ನೆರವಿಗೆ ಬಂದಿದೆ. ಗ್ರಾಮಾಂತರ ಕ್ಷೇತ್ರದ ಪ್ರತಿ ಹಳ್ಳಿಯಲ್ಲಿ ತನ್ನಿಂದ ಚಿಕಿತ್ಸೆ ಪಡೆದ 15-20 ಜನ ಸಿಗುತ್ತಿದ್ದರು, ಅವರಲ್ಲಿ ಡಾಕ್ಟರ್ ಅನ್ನು ಗೆಲ್ಲಿಸಬೇಕೆಂಬ ಆಸೆಯಿತ್ತು ಮತ್ತು ಅದು ಮತಗಳಲ್ಲಿ ಪರಿವರ್ತನೆಯಾಯಿತು.
ಕೆಲವು ಊರುಗಳಲ್ಲಿ ಜನ ನಾವು ಇದುವರೆಗೆ ನಿದ್ರೆಯಲ್ಲಿದ್ದೆವು ಈಗ ಜಾಗೃತರಾಗಿದ್ದೇವೆ ಅಂತ ತಮ್ಮ ಪರವಾಗಿ ಮತ ಚಲಾಯಿಸಿದ್ದಾರೆ. ಕೇಂದ್ರದ ಹೊಸ ಸರ್ಕಾರದಲ್ಲಿ ತಾವು ಆರೋಗ್ಯ ಸಚಿವನಾದರೆ, ಆಯುಷ್ಮಾನ್ ಭಾರತ್ ಯೋಜನೆಗೆ ಮತ್ತಷ್ಟ್ಟು ಕಾಯಕಲ್ಪ ನೀಡುವುದರ ಜೊತೆಗೆ ಗ್ರಾಮೀಣ ಭಾಗಗಳ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳು ಮತ್ತು ಮಾನವ ಸಂಪನ್ಮೂಲಗಳನ್ನು ಹೆಚ್ಚಿಸುವ ಕಡೆ ಗಮನ ನೀಡುತ್ತೇನೆ ಎಂದು ಗೆಲುವಿನ ಬಳಿಕ ಹೇಳಿದ್ದಾರೆ.