More

    ಮೀಸಲಾತಿ ನಿಗಧಿಪಡಿಸುವ ಸಭೆಗೆ ಆಗಮಿಸಿ: ಡಾ.ಬಿ.ಸಿ.ಸತೀಶ

    ಮಡಿಕೇರಿ: ಜಿಲ್ಲೆಯ ೧೦೩ ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲಾತಿ ನಿಗಧಿ ಮಾಡಬೇಕಿದ್ದು, ಆ ನಿಟ್ಟಿನಲ್ಲಿ ಜೂ.೧೨ ರಿಂದ ಪ್ರಕ್ರಿಯೆಗಳು ಆರಂಭವಾಗಲಿದೆ. ಆದ್ದರಿಂದ ಆಯಾಯ ತಾಲೂಕಿಗೆ ಸಂಬಂಧಿಸಿದ ಗ್ರಾ.ಪಂ.ಸದಸ್ಯರು ಮೀಸಲಾತಿ ನಿಗಧಿಪಡಿಸುವ ಸಭೆಗೆ ಆಗಮಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದರು.


    ನಗರದ ಗಾಂಧಿ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಕೊಡಗು ಜಿಲ್ಲೆಯ ಐದು ತಾಲೂಕುಗಳ ಎಲ್ಲಾ ಗ್ರಾ.ಪಂ.ಗಳ ಚುನಾಯಿತ ಸದಸ್ಯರುಗಳ ಸಮ್ಮುಖದಲ್ಲಿ ಗ್ರಾ.ಪಂ.ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲಾತಿ ಸ್ಥಾನ ನಿಗಧಿಪಡಿಸಲಾಗುತ್ತದೆ. ಆ ಹಿನ್ನೆಲೆಯಲ್ಲಿ ಜೂ.೧೨ ರಂದು ಬೆಳಗ್ಗೆ ೧೧ ಗಂಟೆಗೆ ವಿರಾಜಪೇಟೆಯ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜು, ಮಧ್ಯಾಹ್ನ ೩ ಗಂಟೆಗೆ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪ ಪರಿಮಳ ಮಂಗಳ ವಿಹಾರದಲ್ಲಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ನಿಗಧಿ ಮಾಡುವ ಸಭೆ ನಡೆಯಲಿದೆ ಎಂದು ತಿಳಿಸಿದರು.


    ಜೂ.೧೩ ರಂದು ಬೆಳಗ್ಗೆ ೧೧ ಗಂಟೆಗೆ ಕುಶಾಲನಗರ ಎಪಿಸಿಎಂಸಿ ಸಭಾಂಗಣ, ಮಧ್ಯಾಹ್ನ ೩ ಗಂಟೆಗೆ ಸೋಮವಾರಪೇಟೆಯ ಜಾನಕಿ ಕನ್ವೆನ್ಷನ್ ಹಾಲ್‌ನಲ್ಲಿ ಸಭೆ ನಡೆಯಲಿದೆ. ಜೂ.೧೪ ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನ ನಿಗಧಿ ಮಾಡುವ ಸಭೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.


    ಮಡಿಕೇರಿ ತಾಲೂಕಿನಲ್ಲಿ ೨೬ ಗ್ರಾ.ಪಂ.ಗಳಿದ್ದು, ೧೩ ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಜಾತಿ ೨(ಒಬ್ಬ ಮಹಿಳೆ), ಅನುಸೂಚಿತ ಪಂಗಡ ೧ (ಮಹಿಳೆ), ಹಿಂದುಳಿದ ವರ್ಗ(ಅ) ೭(೪ ಮಹಿಳೆ), ಹಿಂದುಳಿದ ವರ್ಗ(ಬ) ೨ (೧ ಮಹಿಳೆ), ಸಾಮಾನ್ಯ ೧೪(೬ ಮಹಿಳೆ) ನಿಗಧಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.


    ವಿರಾಜಪೇಟೆಯಲ್ಲಿ ೧೭ ಗ್ರಾಮ ಪಂಚಾಯಿತಿಗಳಿದ್ದು, ೯ ಮಹಿಳೆಯರಿಗೆ ನಿಗಧಿಯಾಗಿದೆ. ಅನುಸೂಚಿತ ಜಾತಿ ೨(೧ ಮಹಿಳೆ), ಅನುಸೂಚಿತ ಪಂಗಡ ೨(೧ ಮಹಿಳೆ), ಹಿಂದುಳಿದ ವರ್ಗ ೩(೨ ಮಹಿಳೆ), ಹಿಂದುಳಿದ ವರ್ಗ(ಬ) ೧, ಸಾಮಾನ್ಯ ೯(೫ ಮಹಿಳೆ) ಮೀಸಲಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ೨೩ ಗ್ರಾ.ಪಂ.ಗಳಿದ್ದು, ಇದರಲ್ಲಿ ೧೨ ಗ್ರಾ.ಪಂ.ಗಳು ಮಹಿಳೆಯರಿಗೆ ಮೀಸಲಾಗಿದೆ. ಅನುಸೂಚಿತ ಜಾತಿಯಲ್ಲಿ ೩(೨ ಮಹಿಳೆ), ಅನುಸೂಚಿತ ಪಂಗಡ ೧ ಮಹಿಳೆ, ಹಿಂದುಳಿದ(ಅ) ೬(೩ ಮಹಿಳೆ), ಹಿಂದುಳಿದ(ಬ) ೧ ಮಹಿಳೆಯರಿಗೆ, ಸಾಮಾನ್ಯ ೧೨ ರಲ್ಲಿ ೫ ಮಹಿಳೆಯರಿಗೆ ಮೀಸಲಾಗಿದೆ.


    ಕುಶಾಲನಗರ ತಾಲೂಕಿನಲ್ಲಿ ೧೬ ಗ್ರಾ.ಪಂಗಳಿದ್ದು, ೮ ಮಹಿಳೆಯರಿಗೆ ಮೀಸಲಾಗಿದೆ. ಅನುಸೂಚಿತ ಜಾತಿ ೨(೧ ಮಹಿಳೆ), ಅನುಸೂಚಿತ ಪಂಡಗ ೧(೧ ಮಹಿಳೆ), ಹಿಂದುಳಿದ ವರ್ಗ (ಅ) ೪(೨ ಮಹಿಳೆಗೆ), ಹಿಂದುಳಿದ ವರ್ಗ (ಬ) ೧(೧ ಮಹಿಳೆಗೆ) ಸಾಮಾನ್ಯ ೮(೩ ಮಹಿಳೆ) ಮೀಸಲಾಗಿದೆ. ಪೊನ್ನಂಪೇಟೆ ತಾಲೂಕಿನಲ್ಲಿ ೨೧ ಗ್ರಾಮ ಪಂಚಾಯಿತಿಗಳಿದ್ದು, ೧೧ ಮಹಿಳೆಯರಿಗೆ ಮೀಸಲಾಗಿದೆ. ಅನುಸೂಚಿತ ಜಾತಿ ೧(೧ ಮಹಿಳೆ), ಅನುಸೂಚಿತ ಪಂಗಡ ೫(೩ ಮಹಿಳೆಯರಿಗೆ), ಹಿಂದುಳಿದ ವರ್ಗ (ಅ) ೩ (೨ ಮಹಿಳೆಯರಿಗೆ), ಹಿಂದುಳಿದ ವರ್ಗ (ಬ)೧, ಸಾಮಾನ್ಯ ೧೧ ರಲ್ಲಿ ೫ ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾಹಿತಿ ನೀಡಿದರು.


    ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಚುನಾವಣಾ ತಹಶೀಲ್ದಾರ್ ಸಿ.ಜಿ. ರವಿಶಂಕರ, ಇತರರು ಇದ್ದರು.

    ಜೂ.೨೭ ರಂದು ಅಂತಿಮ ಮತದಾರರ ಪಟ್ಟಿ
    ಮತದಾರರ ಪಟ್ಟಿ ಗಣಕೀಕರಣ ಮತ್ತು ಮುದ್ರಣ ಸಂಬಂಧ ಜೂ.೧೩ ರವರೆಗೆ ಮುದ್ರಕದಿಂದ ಪ್ರಥಮ ಚೆಕ್‌ಲಿಸ್ಟ್ ಪಡೆದುಕೊಂಡು ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಪರಿಶೀಲಿಸಲಾಗುವುದು. ಪರಿಶೀಲನೆಯ ನಂತರ ಪ್ರಥಮ ಚೆಕ್‌ಲಿಸ್ಟ್‌ನಲ್ಲಿ ಆಗಬೇಕಾಗಿರುವ ಬದಲಾವಣೆಗಳನ್ನು ಮುದ್ರಕರಿಂದ ಮಾಡಿಸಿ ಕರಡು ಮತದಾರರ ಪಟ್ಟಿಯ ಪ್ರತಿಗಳನ್ನು ಮುದ್ರಕರಿಂದ ಪಡೆದುಕೊಳ್ಳಲಾಗುತ್ತದೆ. ಜಿ.ಪಂ. ಮತ್ತು ತಾ.ಪಂ.ಚುನಾವಣೆ ಸಂಬಂಧ ಜೂ.೧೪ ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಜೂ.೧೯ ರಂದು ಆಕ್ಷೇಪಣೆಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಜೂ.೨೨ ರಂದು ಆಕ್ಷೇಪಣೆಗಳನ್ನು ಇತ್ಯರ್ಥ ಪಡಿಸಲು ಕೊನೆಯ ದಿನವಾಗಿದೆ. ಜೂ.೨೫ ರಂದು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿದ ನಂತರ ಮುದ್ರಕರಿಂದ ಅಗತ್ಯ ಬದಲಾವಣೆಯನ್ನು ಮಾಡಿಸಿ ಅಂತಿಮ ಚೆಕ್‌ಲಿಸ್ಟ್ ಪಡೆದುಕೊಂಡು ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಪರಿಶೀಲಿಸಲಾಗುತ್ತದೆ. ಜೂ.೨೭ ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts