

ಪ್ರಯಾಣದ ಹಿನ್ನೆಲೆ ಹೊಂದಿದ್ದ ಕರೊನಾ ಸೋಂಕಿತರ ಸಂಖ್ಯೆಗಿಂತ ಪ್ರಾಥಮಿಕ ಸಂಪರ್ಕದಿಂದ ಸೋಂಕಿಗೆ ಒಳಗಾದವರ ಸಂಖ್ಯೆ ಮಹಾನಗರದಲ್ಲಿ ಹೆಚ್ಚಳವಾಗಿದೆ.
ಕರೊನಾ ಸೋಂಕು ಕಂಡುಬಂದ 1 ತಿಂಗಳವರೆಗೂ ವಿವಿಧ ಪ್ರದೇಶಗಳಿಂದ ವಾಪಸಾಗಿದ್ದ ಪ್ರಯಾಣಿಕರಲ್ಲಿ ಹೆಚ್ಚಾಗಿ ಸೋಂಕು ಪತ್ತೆಯಾಗಿತ್ತು. ಆದರೆ, ಕಳೆದ 10 ದಿನಗಳಿಂದ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಿಂದ ಸೋಂಕು ಹರಡುವ ಪ್ರಮಾಣ ಹೆಚ್ಚಳವಾಗುತ್ತಿದೆ. ಬಿಬಿಎಂಪಿ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸೀಲ್ಡೌನ್ ಹಾಗೂ ಲಾಕ್ಡೌನ್ ಹೇರಲಾಗಿದ್ದರೂ ಜನರ ಸಂಚಾರ ನಿಯಂತ್ರಣಕ್ಕೆ ಬರದಿರುವುದು ಸೋಂಕು ಹರಡಲು ಕಾರಣವಾಗಿದೆ.
ನಗರದಲ್ಲಿ ಭಾನುವಾರದವರೆಗೆ (ಏ.19) ಒಟ್ಟು 89 ಸೋಂಕಿತರು ಪತ್ತೆಯಾಗಿದ್ದಾರೆ. ಆ ಪೈಕಿ ಪ್ರಯಾಣ ಇತಿಹಾಸ ಹೊಂದಿದವರು 34 ಮಂದಿ. ಪ್ರಾಥಮಿಕ ಸಂಪರ್ಕದಿಂದ 36, ಉಸಿರಾಟ ಸಮಸ್ಯೆಯಿಂದ (ಸಂಪರ್ಕ ಮೂಲ) 13, ದೆಹಲಿ ಸಭೆಯಲ್ಲಿ ಪಾಲ್ಗೊಂಡ 5 ಹಾಗೂ ಓರ್ವ ಆರೋಗ್ಯ ಸಿಬ್ಬಂದಿಗೆ ಸೋಂಕು ಪತ್ತೆಯಾಗಿದೆ.
ಶೇ.47 ಸೋಂಕಿತರು ಗುಣಮುಖ: ಕರೊನಾ ಸೋಂಕಿಗೆ ಒಳಗಾದ 89 ಜನರಲ್ಲಿ 42 (ಶೇ.47) ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದರಲ್ಲಿ ವಿದೇಶಗಳಿಂದ ಬಂದಿದ್ದ ಪ್ರಯಾಣದ ಇತಿಹಾಸ ಹೊಂದಿದವರ ಸಂಖ್ಯೆಯೇ ಅಧಿಕವಾಗಿದೆ. ಸೋಂಕು ಮುಕ್ತರಾಗಿ ಮನೆಗೆ ತೆರಳಿದವರನ್ನು ಯಾವುದೇ ಸಂದರ್ಭದಲ್ಲಿಯೂ ಹೊರಗಡೆ ಸಂಚಾರ ಮಾಡದಂತೆ, ಇನ್ನೂ ಕೆಲವು ದಿನಗಳು ಕ್ವಾರಂಟೈನ್ನಲ್ಲಿ ಇರುವಂತೆ ಬಿಬಿಎಂಪಿ ಸೂಚನೆ ನೀಡಿದೆ.
ಪುರುಷರಿಗೆ ಹೆಚ್ಚು ಸೋಂಕು: ನಗರದ ಒಟ್ಟಾರೆ ಸೋಂಕಿತರಲ್ಲಿ ಒಟ್ಟು 56 ಜನ ಪುರುಷರು ಹಾಗೂ 33 ಮಹಿಳೆಯರಿದ್ದಾರೆ. ಈವರೆಗೆ ಒಟ್ಟು 17 (ಶೇ.40) ಸ್ತ್ರೀಯರು ಹಾಗೂ 25 (ಶೇ.60) ಪುರುಷರು ಗುಣಮುಖರಾಗಿದ್ದಾರೆ.
ವೃದ್ಧರ ಸಾವು: ಈವರೆಗೆ ಬೆಂಗಳೂರಿನಲ್ಲಿ ಕರೊನಾ ಸೋಂಕಿ ನಿಂದ ಮೃತರಾದವರಲ್ಲಿ ಎಲ್ಲರೂ 60 ವರ್ಷದ ಮೇಲ್ಪಟ್ಟವರು. ರಾಜ್ಯದಲ್ಲಿ 43ನೇ ಸೋಂಕಿತ 63 ವರ್ಷ, 195ನೇ ಸೋಂಕಿತ 66 ವರ್ಷ, 219ನೇ ಸೋಂಕಿತ 76 ವರ್ಷ, 250ನೇ ಸೋಂಕಿತ 65 ವರ್ಷ ಹಾಗೂ 252ನೇ ಸೋಂಕಿತ 65 ವರ್ಷದ ವೃದ್ಧರು ಸಾವನ್ನಪ್ಪಿದ್ದಾರೆ. 281ನೇ ಸೋಂಕಿತೆ (65) ಭಾನುವಾರ ರಾಜಧಾನಿಯಲ್ಲಿ ಮೃತರಾಗಿದ್ದಾರೆ, ಪ್ರಯಾಣದ ಇತಿಹಾಸ ಇನ್ನೂ ತಿಳಿದುಬಂದಿಲ್ಲ.
| ಸತೀಶ್ ಕೆ.ಬಳ್ಳಾರಿ ಬೆಂಗಳೂರು