ಅಹೋರಾತ್ರಿ ಧರಣಿ ಬೇಡ,  ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡಿ: ಬಿಜೆಪಿಗೆ ಪ್ರದೀಪ್ ಈಶ್ವರ್ ಮನವಿ

IMG-20250402-WA0037.jpg
Published on

ಚಿಕ್ಕಬಳ್ಳಾಪುರ: ಬೆಲೆ ಏರಿಕೆಯನ್ನು ಖಂಡಿಸಿ ಬಿಜೆಪಿ ಒಂದು ದಿನ ಮಾತ್ರ ಅಹೋರಾತ್ರಿ ಧರಣಿ ನಡೆಸುವುದರಿಂದ ಏನು ಪ್ರಯೋಜನವಿಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ನಡೆಸಬೇಕು ಎಂದೇಳುವ ಮೂಲಕ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ನಾಸ್ತಿಮ್ಮನಹಳ್ಳಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಹಾಗೂ ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಬಿಜೆಪಿ ನಾಯಕರು ಒಂದು ದಿನ ಮಾತ್ರ ಹೋರಾಟವನ್ನು ಕೈಗೊಂಡು ಪ್ರಚಾರ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರವು ಬೆಲೆ ಏರಿಸಿದಾಗ ತುಟಿ ಬಿಚ್ಚುವುದಿಲ್ಲ. ಇಂತಹವರು ಜನಪರ ಕಾಳಜಿ ಇದ್ದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ನಡೆಸಲಿ, ಕನಿಷ್ಠ 6 ತಿಂಗಳು ರಾಜ್ಯ ಬಿಜೆಪಿ ಅಧ್ಯಕ್ಷರು ನೀರು ಸಹ ಕುಡಿಯಬಾರದು. ಆಗ ಹೋರಾಟಕ್ಕೆ ಸಾರ್ಥಕತೆ ಬರುತ್ತದೆಯೇ? ಎನ್ನುವುದನ್ನು ನೋಡೋಣ ಎಂದು ವ್ಯಂಗ್ಯವಾಡಿದರು.

*ಗ್ರಾಮಗಳಲ್ಲಿ ಸಂಚಾರ
ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಯರನಾಗೇನಹಳ್ಳಿ, ಮೋಟೂರು, ನಾರೇನಹಳ್ಳಿ, ಕೊಂಡೇನಹಳ್ಳಿ, ನಾಸ್ತಿಮ್ಮನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ, ಶಾಸಕರು ಜನರ ಅಹವಾಲು ಸ್ವೀಕರಿಸಿದರು.

*ಕುಗ್ರಾಮಕ್ಕೆ ರಸ್ತೆ ಸೌಲಭ್ಯ
ಆವಲಬೆಟ್ಟದ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿನ ಬಡ ಕುಟುಂಬಗಳು ರಸ್ತೆ ಸೌಲಭ್ಯವಿಲ್ಲದೇ ತೊಂದರೆ ಅನುಭವಿಸುತ್ತಿರುವುದರ ಬಗ್ಗೆ ಸ್ಥಳಿಯರು ಅಳಲು ತೋಡಿಕೊಂಡರು. ಪ್ರತಿನಿತ್ಯ ಅಗತ್ಯ ಸೇವೆಗಳಿಗಾಗಿ ಕಿ.ಮೀ.ಗಟ್ಟಲೇ ನಡೆಯಬೇಕು. ಮಹಿಳೆಯರು, ಮಕ್ಕಳು ಅಸುರಕ್ಷತೆಯ ಭಯದಲ್ಲಿದ್ದಾರೆ. ಇದಕ್ಕೆ ಗ್ರಾಮಕ್ಕೆ  ರಸ್ತೆ ನಿರ್ಮಿಸಿಕೊಡಬೇಕು ಎಂದು ಮನವಿ ಸಲ್ಲಿಸಿದರು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net