

ವಾಷಿಂಗ್ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಪ್ರಮಾಣವಚನ ಸಮಾರಂಭದ ಮುನ್ನ ಖಾಸಗಿ ಕಾರ್ಯಕ್ರಮದಲ್ಲಿ ಭಾನುವಾರ ಭೇಟಿಯಾಗಿ ಅವರಿಗೆ(ಟ್ರಂಪ್) ಅಭಿನಂದನೆ ಸಲ್ಲಿಸಿದ್ದಾರೆ.
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕಾರದ ಸಮಾರಂಭ (ನಾಳೆ) ಜ.20ರಂದು ನಡೆಯಲಿದೆ. ಅಮೆರಿಕದ ಕೆಲವು ಪ್ರಭಾವಿ ಬಿಲಿಯನೇರ್‌ಗಳು, ರಾಜಕಾರಣಿಗಳು ಹಾಗೂ ವಿದೇಶಿ ನಾಯಕರು ಮತ್ತು ಸೆಲೆಬ್ರಿಟಿಗಳು ಟ್ರಂಪ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಅಂಬಾನಿ ಮತ್ತು ಪತ್ನಿ ಜ.18 ರಂದು ವಾಷಿಂಗ್ಟನ್ಗೆ ತಲುಪಿದ್ದಾರೆ. ಟ್ರಂಪ್ ಅವರೊಂದಿಗೆ ಆತ್ಮೀಯ 'ಕ್ಯಾಂಡಲ್ಲೈಟ್ ಡಿನ್ನರ್' ನಲ್ಲಿ ಭಾಗವಹಿಸಿದ ಆಯ್ದ 100 ಮಂದಿಯಲ್ಲಿ ಅಂಬಾನಿ ಕುಟುಂಬ ಭಾಗವಾಗಿದ್ದರು ಎಂದು ವರದಿ ಉಲ್ಲೇಖಿಸಿದೆ. ಉಪಾಧ್ಯಕ್ಷರಾಗಿ ಆಯ್ಕೆಯಾದ ಜೆಡಿ ಮತ್ತು ಉಷಾ ವಾನ್ಸ್ ಅವರನ್ನು ಔತಣಕೂಟದಲ್ಲಿ ಭೇಟಿಯಾದ ಬಹುಶಃ ಇಬ್ಬರೂ ಮಾತ್ರ ಭಾರತೀಯರು ಅಂಬಾನಿ ಮತ್ತು ಪತ್ನಿ ನೀತಾ ಅಂಬಾನಿ ಎಂದು ಹೇಳಲಾಗಿದೆ.
ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ 2017 ರಲ್ಲಿ ಜಾಗತಿಕ ವಾಣಿಜ್ಯೋದ್ಯಮ ಶೃಂಗಸಭೆಗಾಗಿ ಹೈದರಾಬಾದ್‌ಗೆ ಭೇಟಿ ನೀಡಿದಾಗ ಅಂಬಾನಿ ಕುಟುಂಬ ಉಪಸ್ಥಿತರಿದ್ದರು. 2020ರ ಫೆಬ್ರವರಿಯಲ್ಲಿ ಟ್ರಂಪ್ ಯುಎಸ್ ಅಧ್ಯಕ್ಷರಾಗಿದ್ದಾಗ, ಭಾರತಕ್ಕೆ ಭೇಟಿ ನೀಡಿದ ವೇಳೆ ಅಂಬಾನಿ ಸೇರಿ ಭಾರತದ ಉದ್ಯಮಿ ಕೂಡ ಉಪಸ್ಥಿತರಿದ್ದರು.(ಏಜೆನ್ಸೀಸ್)