ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಪತ್ನಿ ಮೆಲನಿಯಾಗೆ ಕರೊನಾ ಸೋಂಕು..! ​

Trump
Published on

ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್​ಗೆ ಮಹಾಮಾರಿ ಕರೊನಾ ವೈರಸ್​ ತಗುಲಿರುವುದಾಗಿ ಶುಕ್ರವಾರ ವರದಿಯಾಗಿದೆ. ​

ಟ್ವೀಟ್​ ಮೂಲಕ ಡೊನಾಲ್ಡ್​ ಟ್ರಂಪ್​ ಖಚಿತಪಡಿಸಿದ್ದು, ನನಗೆ ಮತ್ತು ಮೆಲನಿಯಾ ಟ್ರಂಪ್​ಗೆ ಕೋವಿಡ್​-19 ಪಾಸಿಟಿವ್​ ಬಂದಿದೆ. ಕ್ವಾರಂಟೈನ್​ ಮತ್ತು ಚೇತರಿಕೆ ಪ್ರಕ್ರಿಯೆ ತಕ್ಷಣ ಆರಂಭವಾಗಿದೆ ಎಂದು ಹೇಳಿದ್ದಾರೆ.

ತಮ್ಮ ಆಪ್ತರಲ್ಲಿ ಒಬ್ಬರಾದ ಹೋಪ್​ ಹಿಕ್ಸ್​ ಅವರಿಗೆ ಕರೊನಾ ಪಾಸಿಟಿವ್​ ಆದ ಬೆನ್ನಲ್ಲೇ ಟ್ರಂಪ್​ಗೆ ಸೋಂಕು ತಗುಲಿರುವುದು ದೃಢವಾಗಿದೆ. ಮಂಗಳವಾರ ಕ್ಲೆವೆಲ್ಯಾಂಡ್​ನಲ್ಲಿ ನಡೆದ ಕಾರ್ಯಕ್ರಮಕ್ಕೆ ಹಿಕ್ಸ್​ ಮತ್ತು ಟ್ರಂಪ್​ ಒಟ್ಟಿಗೆ ಪ್ರಯಾಣ ಬೆಳೆಸಿದ್ದರು.

ಅಮೆರಿಕಾ ಅಧ್ಯಕ್ಷ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್​ ಓಡಾಟ ಜೋರಾಗಿದೆ. ಇನ್ನು ಹಿಕ್ಸ್​ ಅವರು ಕೂಡ ಟ್ರಂಪ್​ ಜತೆ ಅನೇಕ ಬಾರಿ ಪ್ರಯಾಣ ಮಾಡಿದ್ದು, ಹಿಕ್ಸ್​ಗೆ ಕರೊನಾ ತಗುಲಿರುವುದು ದೃಢವಾದ ಬೆನ್ನಲ್ಲೇ ಟ್ರಂಪ್​ ಅವರಿಗೂ ಕರೊನಾ ಪರೀಕ್ಷೆ ಮಾಡಿಸಲಾಗಿತ್ತು. ಇದೀಗ ಅವರಿಗೂ ಪಾಸಿಟಿವ್​ ಬಂದಿದೆ.

ಟ್ರಂಪ್​ ಅವರಿಗೆ 74 ವರ್ಷ ವಯಸ್ಸಾಗಿದೆ. ಕರೊನಾ ಹೆಚ್ಚಾಗಿ ವಯಸ್ಕರಿಗೆ ತೊಂದರೆ ಉಂಟು ಮಾಡುವುದರಿಂದ ಟ್ರಂಪ್​ ಅವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಅಲ್ಲದೆ, ಅಮೆರಿಕದಲ್ಲಿ ಕರೊನಾ ಮೃತ್ಯುಕೂಪವನ್ನೇ ನಿರ್ಮಿಸಿದ್ದು, ಈಗಾಗಲೇ ಮಹಾಮಾರಿಗೆ 2 ಲಕ್ಷಕ್ಕಿಂತ ಹೆಚ್ಚು ಮಂದಿ ಮೃತರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net