

Donald Trump : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಗ್ಯ ಕುರಿತಾದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ ಇತ್ತೀಚಿನ ಘಟನೆ. ಅದೇನೆಂದರೆ, ಸೋಮವಾರ (ಆಗಸ್ಟ್ 25) ತಮ್ಮ ಓವಲ್ ಕಚೇರಿಯಲ್ಲಿ ಬಲಗೈ ಹಿಂಭಾಗದಲ್ಲಿ ಗಾಯದ ಮೇಲೆ ಮೇಕಪ್ ಮಾಡಿಕೊಂಡಿರುವ ಸ್ಥಿತಿಯಲ್ಲಿ ಟ್ರಂಪ್ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಮತ್ತೆ ಟ್ರಂಪ್ ಆರೋಗ್ಯ ಸ್ಥಿತಿಯ ಬಗ್ಗೆ ಚರ್ಚೆಯಾಗುತ್ತಿದೆ.
ಟ್ರಂಪ್ ಆರೋಗ್ಯದ ಬಗ್ಗೆ ಕೆಲವು ದಿನಗಳ ಹಿಂದಷ್ಟೇ ಚರ್ಚೆಯಾಗಿತ್ತು. ಈ ಸಂಬಂಧ ವೈಟ್ ಹೌಸ್ ಹೆಲ್ತ್ ಬುಲೆಟಿನ್ ಸಹ ಬಿಡಗಡೆ ಮಾಡಿತ್ತು. ಇದೀಗ ಮತ್ತೊಮ್ಮೆ ಆರೋಗ್ಯ ವಿಚಾರ ಚರ್ಚೆಯಾಗುತ್ತಿದ್ದು, ಟ್ರಂಪ್ ಅವರು ಅಪರೂಪದ ಕಾಯಿಲೆಯಿಂದ ಬಳಸಲುತ್ತಿದ್ದಾರೆ ಎಂಬ ಸುದ್ದಿಗಳಿಗೆ ಪುಷ್ಠಿ ಸಿಕ್ಕಿದೆ.
ಒಂದು ತಿಂಗಳ ಹಿಂದೆ ಅಧ್ಯಕ್ಷರ ತಂಡ ಟ್ರಂಪ್ ಅವರ ಗಾಯಕ್ಕೆ ಫೌಂಡೇಶನ್ ಹಚ್ಚಿ ಅದನ್ನು ಮರೆ ಮಾಡಿತ್ತು. ಆದರೆ, ಈ ಬಾರಿ ಅದನ್ನು ಸರಿಯಾಗಿ ಮುಚ್ಚದೆ ಹಾಗೇ ಬಿಡಲಾಗಿದೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರೊಂದಿಗೆ ಸೋಮವಾರ ಶ್ವೇತಭವನದಲ್ಲಿ ತೆಗೆದ ಚಿತ್ರಗಳು ಟ್ರಂಪ್ ಅವರ ಕೈಗಳು ಮತ್ತು ಅವುಗಳ ಮೇಲಿನ ಗಾಯದ ಗುರುತುಗಳನ್ನು ಜನರ ಗಮನಕ್ಕೆ ತಂದಿವೆ. ಇದರಿಂದ ಟ್ರಂಪ್ ಆರೋಗ್ಯ ಚರ್ಚೆ ಮುನ್ನೆಲೆಗೆ ಬಂದಿದೆ.
ಈ ಹಿಂದೆಯೂ ಟ್ರಂಪ್ ಅವರ ಕೈಗಳಲ್ಲಿ ಗಾಯದ ಕಲೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಶ್ವೇತಭವನದ ವೈದ್ಯ ಡಾ. ಸೀನ್ ಬಾರ್ಬೆಲ್ಲಾ ಮತ್ತು ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಸ್ಪಷ್ಟನೆ ನೀಡುವಾಗ ಅದೇನು ದೊಡ್ಡ ಆರೋಗ್ಯ ಸಮಸ್ಯೆಯಲ್ಲ, ಸಣ್ಣದಾದ ಗಾಯ ಎಂದಿದ್ದರು. ಅದಕ್ಕೆ ಕಾರಣ ಕೂಡ ನೀಡಿದ್ದರು. ಅದೇನೆಂದರೆ, ಆಗಾಗ್ಗೆ ಕೈಕುಲುಕುವುದರಿಂದ ಮತ್ತು ಹೃದಯರಕ್ತನಾಳ ಸಮಸ್ಯೆಗೆ ತೆಗೆದುಕೊಳ್ಳುವ ಆಸ್ಪಿರಿನ್ ಬಳಕೆಯಿಂದ ಸಣ್ಣ ಮೃದು ಅಂಗಾಂಶಗಳಲ್ಲಿ ಈ ಮೂಗೇಟುಗಳು ಕಂಡುಬಂದಿವೆ. ಟ್ರಂಪ್ ಅವರು ಅಪರೂಪದ ಕ್ರೋನಿಕ್ ವೇನಸ್ ಇನ್ಸಫಿಸಿಯನ್ಸಿ (ರಕ್ತನಾಳಗಳಲ್ಲಿ ರಕ್ತದ ಹರಿವು ಕಡಿಮೆಯಾಗುವುದರಿಂದ ಉಂಟಾಗುವ ಸ್ಥಿತಿ) ಯಿಂದ ಬಳಲುತ್ತಿದ್ದಾರೆ. ಇದು ವಯಸ್ಸಾದವರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ ಎಂದು ಶ್ವೇತಭವನ ಜುಲೈ ತಿಂಗಳಲ್ಲಿ ಹೇಳಿತ್ತು.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್ ಲೆವಿಟ್ ಅವರು ಜುಲೈನಲ್ಲಿ ನೀಡಿದ ಹೇಳಿಕೆ ಪ್ರಕಾರ, ಶ್ವೇತಭವನದ ತಂಡವು ಟ್ರಂಪ್ ಅವರ ವೈದ್ಯಕೀಯ ಪರೀಕ್ಷೆಯನ್ನು ನಡೆಸಿತು. ಇದರ ಭಾಗವಾಗಿ, ಟ್ರಂಪ್ ಅವರು ಡಾಪ್ಲರ್ ಅಲ್ಟ್ರಾಸೌಂಡ್ ಪರೀಕ್ಷೆಗೆ ಒಳಗಾದರು. ಪರೀಕ್ಷಾ ಫಲಿತಾಂಶದಲ್ಲಿ ಟ್ರಂಪ್ ಅವರು ಕ್ರೋನಿಕ್ ವೇನಸ್ ಇನ್ಸಫಿಸಿಯನ್ಸಿ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದನ್ನು ಬಹಿರಂಗಪಡಿಸಿದೆ. ಇದೇ ವೇಳೆ ಟ್ರಂಪ್ ಎಕೋಕಾರ್ಡಿಯೋಗ್ರಾಮ್ ಅನ್ನು ಸಹ ಮಾಡಿಸಿದರು. ಹೃದಯ ವೈಫಲ್ಯ, ಮೂತ್ರಪಿಂಡ ವೈಫಲ್ಯ ಅಥವಾ ಇತರ ವೈದ್ಯಕೀಯ ಪರಿಸ್ಥಿತಿಗಳ ಯಾವುದೇ ಲಕ್ಷಣಗಳಿಲ್ಲ. ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ ಎಂದಿದ್ದರು.
ಕ್ರೋನಿಕ್ ವೇನಸ್ ಇನ್ಸಫಿಸಿಯನ್ಸಿ ಎಂಬುದು ಕೆಲವು ನಾಳಗಳೊಳಗಿನ ಕವಾಟಗಳು ಸರಿಯಾಗಿ ಕಾರ್ಯನಿರ್ವಹಿಸದ ಸ್ಥಿತಿಯಾಗಿದೆ. ಇದು ರಕ್ತವನ್ನು ರಕ್ತನಾಳಗಳಲ್ಲಿ ಸಂಗ್ರಹಿಸಲು ಕಾರಣವಾಗುತ್ತದೆ. ಪ್ರತಿ ವರ್ಷ ಸುಮಾರು 1.5 ಮಿಲಿಯನ್ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮತ್ತು ವಯಸ್ಸಾದಂತೆ ಅಪಾಯವು ಹೆಚ್ಚಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಈ ಸಮಸ್ಯೆಯು ಕಾಲುಗಳಲ್ಲಿ ಊತ, ನೋವು ಮತ್ತು ಮರಗಟ್ಟುವಿಕೆಗೆ ಕಾರಣವಾಗುತ್ತದೆ. ಈ ರೋಗದ ಲಕ್ಷಣಗಳಲ್ಲಿ ಊದಿಕೊಂಡ ರಕ್ತನಾಳಗಳು ಮತ್ತು ಮಸುಕಾದ ಚರ್ಮವೂ ಸೇರಿವೆ ಎಂದು ವೈದ್ಯರು ಹೇಳುತ್ತಾರೆ.
ಹಾರ್ವರ್ಡ್ ವೈದ್ಯಕೀಯ ಶಾಲೆಯ ತುರ್ತು ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಜೆರೆಮಿ ಫೌಸ್ಟ್, ಈ ಸಮಸ್ಯೆಯು ಕಳವಳಕ್ಕೆ ಕಾರಣವಲ್ಲ ಎಂದು ಸಿಎನ್‌ಎನ್‌ಗೆ ತಿಳಿಸಿದರು. ವೃದ್ಧಾಪ್ಯದಲ್ಲಿ ಇದು ತುಂಬಾ ಸಾಮಾನ್ಯವಾದ ಸಮಸ್ಯೆಯಾಗಿದೆ. ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಜನರಲ್ಲಿ ಇದು ವಿಶೇಷವಾಗಿ ಸಾಮಾನ್ಯವಾಗಿದೆ. ಅಧ್ಯಕ್ಷ ಟ್ರಂಪ್ ಪ್ರಸ್ತುತ ಈ ಸಮಸ್ಯೆಯಿಂದ ಬಳಲುತ್ತಿಲ್ಲ. ಆದಾಗ್ಯೂ, ಅವರು ವಯಸ್ಸಾದಂತೆ, ಲಕ್ಷಣಗಳು ಉಲ್ಬಣಗೊಳ್ಳಬಹುದು. ಆದ್ದರಿಂದ, ಈ ಸಮಸ್ಯೆ ಕಾಲಕಾಲಕ್ಕೆ ಬೆಳೆಯದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು. (ಏಜೆನ್ಸೀಸ್)