

ರಾಂಚಿ: ಆತಿಥೇಯ ಭಾರತ ತಂಡ 7ನೇ ಆವೃತ್ತಿಯ ಏಷ್ಯನ್ ಚಾಂಪಿಯನ್ ಟ್ರೋಫಿ ಮಹಿಳಾ ಹಾಕಿ ಟೂರ್ನಿಯಲ್ಲಿ ಫೈನಲ್ಗೇರಿದ್ದು, 7 ವರ್ಷಗಳ ಬಳಿಕ ಪ್ರಶಸ್ತಿ ಜಯಿಸುವ ಸನಿಹ ತಲುಪಿದೆ. ಸವಿತಾ ಪೂನಿಯಾ ಪಡೆ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ದಣ ಕೊರಿಯಾ ವಿರುದ್ಧ 2-0 ಗೋಲುಗಳಿಂದ ಗೆಲುವು ದಾಖಲಿಸಿತು.
ಸಲಿಮಾ ಟೇಟೆ (11ನೇ ನಿಮಿಷ) ಮತ್ತು ವೈಷ್ಣವಿ ವಿಟ್ಟಲ್ (19) ಬಾರಿಸಿದ ಗೋಲಿನಿಂದ ಭಾರತ ಮೊದಲಾರ್ಧದಲ್ಲೇ 2-0 ಮುನ್ನಡೆ ಸಾಧಿಸಿತು. ಭಾರತ ತಂಡ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ (ರಾತ್ರಿ 8.30ರಿಂದ) ಹಾಲಿ ಚಾಂಪಿಯನ್ ಜಪಾನ್ ತಂಡವನ್ನು ಎದುರಿಸಲಿದೆ.
2016ರ ಆವೃತ್ತಿಯ ಚಾಂಪಿಯನ್ ಭಾರತ, ಟೂರ್ನಿಯಲ್ಲಿ 4ನೇ ಬಾರಿ ಫೈನಲ್ಗೇರಿದ ಸಾಧನೆ ಮಾಡಿದೆ. 2013 ಮತ್ತು 2018ರಲ್ಲಿ ಭಾರತ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.