ಕೃತಕ ಬುದ್ಧಿಮತ್ತೆ ಉದ್ಯೋಗಕ್ಕೆ ಕುತ್ತೇ?: ಉತ್ತಮ ವೃತ್ತಿ ಬದುಕಿಗೆ ಕಾಲರ್ ಬದಲಿಸಿ

GPT AI
Published on

ತಂತ್ರಜ್ಞಾನ-ಆವಿಷ್ಕಾರಗಳು ಕೆಲಸವನ್ನು ಸುಲಭಗೊಳಿಸುತ್ತಿವೆ. ಅದರಿಂದ ಬಹಳಷ್ಟು ಉದ್ಯೋಗಗಳು ಕ್ಷೀಣಿಸುತ್ತಿವೆ ಎಂಬ ಮಾತು ಸಾಮಾನ್ಯವಾಗಿದೆ. ಆದರೆ ನಿಜವಾಗಿಯೂ ಉದ್ಯೋಗ ಮಾರುಕಟ್ಟೆ ಮೇಲೆ ತಂತ್ರಜ್ಞಾನದ ಪ್ರಭಾವವೇನು? ಟೆಕ್ನಾಲಜಿ ಮನುಷ್ಯನ ಉದ್ಯೋಗ ಕಸಿದುಕೊಳ್ಳಲಿದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರಗಳ ನಿಟ್ಟಿನಲ್ಲಿ ಈ ಬರಹ.

| ಎನ್. ಗುರುನಾಗನಂದನ

ಕೆಲಸವನ್ನು ಕೃತಕ ಬುದ್ಧಿಮತ್ತೆ ಕಿತ್ತುಕೊಳ್ಳುತ್ತದೆ ಎಂಬ ಅಭದ್ರತಾ ಭಾವನೆ ಇತ್ತೀಚೆಗೆ ಯುವಕರಲ್ಲಿ ಹೆಚ್ಚಾಗುತ್ತಿದೆ. ವಿಶ್ವಾದ್ಯಂತ ಬಹಳಷ್ಟು ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಇದಕ್ಕೆ ಹಲವಾರು ಕಾರಣಗಳಿವೆ. ಕರೊನಾದಿಂದ ಆದ ಆರ್ಥಿಕ ನಷ್ಟ ಒಂದಾದರೆ ಕೃತಕ ಬುದ್ಧಿಮತ್ತೆಯ ಪ್ರಭಾವ ಮತ್ತೊಂದು ಕಾರಣ. ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಸುಮಾರು 83 ದಶಲಕ್ಷ ಉದ್ಯೋಗಗಳು ಕ್ಷೀಣಿಸುತ್ತವೆ. ಅಂದಾಜು ಕಾಲು ಭಾಗದಷ್ಟು ಜಾಗತಿಕ ಉದ್ಯೋಗಗಳು ಬದಲಾಗಲಿವೆ. ಭಾರತದಲ್ಲಿ ಶೇ. 22ರಷ್ಟು ಉದ್ಯೋಗ ಬದಲಾವಣೆ ನಿರೀಕ್ಷಿಸಬಹುದು ಎಂದು ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್ ಎಕನಾಮಿಕ್ ಫೋರಮ್ ವರದಿ ಹೇಳಿದೆ.

ಉದ್ಯೋಗಿಗಳ ವಜಾಕ್ಕೆ ಕಾರಣ?

ಉದ್ಯೋಗ ಪ್ರಮಾಣ ಕ್ಷೀಣಿಸುತ್ತಿರುವುದಕ್ಕೆ ಮುಖ್ಯ ಕಾರಣವೆಂದರೆ ಅಪ್​ಡೇಟ್ ಆಗದೇ ಇರುವುದು. ಅಂದರೆ ಹೊಸ ತಂತ್ರಜ್ಞಾನ ಆವಿಷ್ಕಾರಗಳಾಗುತ್ತಿದ್ದಂತೆಯೇ ಅದಕ್ಕೆ ಹೊಂದಿಕೊಳ್ಳಬೇಕು. ಬಹಳಷ್ಟು ಸಾಂಪ್ರದಾಯಿಕ ಉದ್ಯೋಗಗಳು ಕಣ್ಮರೆಯಾಗುತ್ತಿವೆ. ಇತ್ತೀಚೆಗೆ ಐಬಿಎಮ್ ಸಂಸ್ಥೆ ಎಐ ಕಾರಣದಿಂದಾಗಿ 7,800 ಉದ್ಯೋಗಗಳ ನೇಮಕಾತಿ ನಿಲ್ಲಿಸಿದೆ. ಕ್ಲರಿಕಲ್ ಜಾಬ್, ಅಂಚೆಗೆ ಸಂಬಂಧ ಪಟ್ಟ ಹುದ್ದೆಗಳು, ಕ್ಯಾಷಿಯರ್, ಡೇಟಾ ಎಂಟ್ರಿ, ಆಡಳಿತಾತ್ಮಕ ಮತ್ತು ಕಾರ್ಯನಿರ್ವಾಹಕ ಕಾರ್ಯದರ್ಶಿಗಳು, ವಿಮೆ ಸಂಸ್ಥೆಯಲ್ಲಿನ ಕ್ಲರ್ಕ್ ಮತ್ತು ಸೇಲ್ಸ್​ಮನ್ ಮುಂತಾದ ಉದ್ಯೋಗಗಳು ಕ್ಷೀಣಿಸುತ್ತಿವೆ. ಹತ್ತಾರು ಜನ ಮಾಡುತ್ತಿದ್ದ ಡೇಟಾ ಎಂಟ್ರಿ ಒಂದು ‘ಕೋಡ್’ ಮೂಲಕ ಕ್ಷಣಾರ್ಧದಲ್ಲಿ ಮಾಡಬಹುದು. ಸಮಯ ಮತ್ತು ಹಣ ಎರಡನ್ನೂ ಉಳಿಸಬಹುದು. ಈ ಕಾರಣ ಕಂಪನಿಗಳು ಅನಗತ್ಯ ಹುದ್ದೆಗಳನ್ನು ತೆಗೆದು ಹಾಕುತ್ತಿವೆ.

ಎಐ ಸೃಷ್ಟಿಯೂ ಒಂದು ಕೆಲಸ!

ಉದ್ಯೋಗದಲ್ಲಿ ಮಾರುಕಟ್ಟೆಯಲ್ಲಿ ಕೆಲಸಗಳು ಕ್ಷೀಣಿಸುವುದರೊಂದಿಗೆ 69 ಮಿಲಿಯನ್ ಹೊಸ ಉದ್ಯೋಗಗಳ ಸೃಷ್ಟಿ ಕೂಡ ಆಗಲಿವೆ. ಹೆಚ್ಚಾಗಿ ಬೆಳೆಯುತ್ತಿರುವ ಉದ್ಯೋಗ ಕ್ಷೇತ್ರವೆಂದರೆ ಆಧುನಿಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್. ಆಧುನಿಕ ಬುದ್ಧಿಮತ್ತೆಯಿಂದ ಈಗಾಗಲೇ ಇರುವ ಉದ್ಯೋಗಗಳು ಕ್ಷೀಣಿಸುತ್ತಿರುವುದು ನಿಜ. ಆದರೆ ಎಐ ಸೃಷ್ಟಿ ಕೂಡ ಒಂದು ಉದ್ಯೋಗವಲ್ಲವೇ? ಆಧುನಿಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ ತಜ್ಞ ಹುದ್ದೆ ಮುಂದಿನ 5 ವರ್ಷಗಳಲ್ಲಿ ಶೇ. 30-40 ಬೆಳವಣಿಗೆ ಕಾಣುತ್ತದೆ. ವ್ಯಾಪಾರ ವಿಶ್ಲೇಷಕ, ಮಾಹಿತಿ ಭದ್ರತಾ ತಜ್ಞ ಮೊದಲಾದ ಹುದ್ದೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಎಐ/ಮಷಿನ್ ಲರ್ನಿಂಗ್​ನ ಕಬಂಧ ಬಾಹುಗಳು ಉದ್ಯೋಗದ ಮೇಲೆ ಚಾಚಿದಾಗ ಮನುಷ್ಯರ ಕಾಗ್ನಿಟಿವ್ ಕೌಶಲ್ಯ ಬಲವಾಗಬೇಕು. ಕನಿಷ್ಠ ಪಕ್ಷ 10ರಲ್ಲಿ 6 ಉದ್ಯೋಗಿಗಳಿಗೆ ಕೌಶಲ್ಯದ ತರಬೇತಿ ಅಗತ್ಯವಿದೆ. ಇದರೊಂದಿಗೆ ತಾಂತ್ರಿಕವಲ್ಲದ ಉದ್ಯೋಗಗಳಾದ ಬಸ್ ಮತ್ತು ಹೆವಿ ಟ್ರಕ್ ಚಾಲಕರು, ವೃತ್ತಿಪರ ಶಿಕ್ಷಕರು, ಮೆಕ್ಯಾನಿಕ್ ಹುದ್ದೆ ವೇಗವಾಗಿ ಬೆಳೆಯುವ ಉದ್ಯೋಗಗಳಲ್ಲಿ ಪ್ರಮುಖವಾದದ್ದು ಎಂದು ವಿಶ್ವ ಆರ್ಥಿಕ ವೇದಿಕೆ ತಿಳಿಸುತ್ತದೆ. ಇದರೊಂದಿಗೆ ಇ-ಕಾಮರ್ಸ್, ಡಿಜಿಟಲ್ ಟ್ರಾನ್ಸ್​ಫಾಮೇಷನ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ತಜ್ಞರ ಹುದ್ದೆಗಳಲ್ಲಿ ಸುಮಾರು 4 ದಶಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತದೆ ಎಂದು ಅಂದಾಜಿಸಲಾಗಿದೆ.

ಇದು ನ್ಯೂ ಕಾಲರ್ ಕಾಲ!

ಟೆಕ್ನಾಲಜಿ ಮತ್ತು ಸಾಫ್ಟ್ ಸ್ಕಿಲ್ಸ್ ಬಳಸಿಕೊಂಡು ಮಾಡುವ ಕೆಲಸಗಳನ್ನು ನ್ಯೂ ಕಾಲರ್ ಉದ್ಯೋಗದ ಅಡಿ ಸೇರಿಸಲಾಗಿವೆ. ಇದನ್ನು 2016ರಲ್ಲಿ ಪ್ರಾರಂಭಿಸಲಾಯಿತು. ಸಾಂಪ್ರದಾಯಿಕ ಶಿಕ್ಷಣವಿಲ್ಲದೆ ತರಬೇತಿಗಳ ಮೂಲಕ ಕಲಿತ ತಂತ್ರಜ್ಞಾನ, ವಿಶ್ಲೇಷಣೆ, ಗಣಿತ, ಸೃಜನಶೀಲತೆ ಮತ್ತು ಸಮಯ ನಿರ್ವಹಣೆ ಮುಂತಾದ ಕೌಶಲ ಒಳಗೊಂಡಿರುವ ಹುದ್ದೆಗಳು ನ್ಯೂ ಕಾಲರ್ ಕೆಳಗೆ ಬರುತ್ತವೆ. ಈ ಜಾಬ್ ಕಾಲರ್ ಬಹಳ ಬೇಡಿಕೆಯಲ್ಲಿದೆ. ಪ್ರತಿಯೊಂದೂ ಡಿಜಿಟಲೈಸ್ ಆಗಿರುವುದು ಇದಕ್ಕೆ ಮುಖ್ಯ ಕಾರಣ. ಇದರಲ್ಲಿ ಬೌದ್ಧಿಕ ಸವಾಲುಗಳು ಮತ್ತು ಬ್ಲೂ ಮತ್ತು ವೈಟ್ ಕಾಲರ್ ಉದ್ಯೋಗಗಳಿಗೆ ಹೋಲಿಸಿದರೆ ಹೆಚ್ಚಿನ ವೇತನ ಕಾಣಬಹುದು. ಇದರೊಂದಿಗೆ ಉದ್ಯೋಗ ಭದ್ರತೆಯನ್ನೂ ಕಾಣಬಹುದು. ಇದರ ಪರಿಣಾಮ ವೈಟ್ ಕಾಲರ್ ಉದ್ಯೋಗದ ಮೇಲೆ ಹೆಚ್ಚಾಗಿ ಬೀರಿದೆ. 2023ರಲ್ಲಿ 1 ಲಕ್ಷಕ್ಕೂ ಹೆಚ್ಚು ವೈಟ್ ಕಾಲರ್ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಫೋರ್ಬ್ಸ್ ವರದಿ ತಿಳಿಸುತ್ತದೆ. ಡೆಸ್ಕ್​ನಲ್ಲಿ ಕೂತು ಹೆಚ್ಚು ದೈಹಿಕ ಪರಿಶ್ರಮವಿಲ್ಲದೆ ಮಾಡುವ ಉದ್ಯೋಗಗಳು ವೈಟ್ ಕಾಲರ್ ಕೆಳಗೆ ಬರುತ್ತವೆ. ಇದರಲ್ಲಿ ಬಹಳಷ್ಟು ಉದ್ಯೋಗಿಗಳು ಬೇಸತ್ತು ಹೋಗಿದ್ದಾರೆ. ಕೆಲಸದಲ್ಲಿ ವೈವಿಧ್ಯತೆ ಇಲ್ಲದೆ ಇರುವುದು ಇದಕ್ಕೆ ಮುಖ್ಯ ಕಾರಣ. ಅದಕ್ಕಾಗಿ ಚೀನಾದ ಯುವಕರು ವೈಟ್ ಕಾಲರ್ ಉದ್ಯೋಗಗಳನ್ನು ಬಿಟ್ಟು ಹೋಟೆಲ್​ನಲ್ಲಿ ಅಡುಗೆ ಮಾಡುವ ಮತ್ತು ಸ್ವಚ್ಛಗೊಳಿಸುವ ಕೆಲಸಗಳಿಗೆ ಹೋಗುತ್ತಿದ್ದಾರೆ. ಈ ಕೆಲಸದಿಂದ ಹೆಚ್ಚಿನ ತೃಪ್ತಿ ಸಿಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಉದ್ಯೋಗದಲ್ಲಿ ತೃಪ್ತಿ ಇದ್ದಾಗ ಮಾತ್ರ ಒಳ್ಳೆಯ ಫಲಿತಾಂಶ ಬರುತ್ತದೆ. ಯುವಕರು ಉದ್ಯೋಗದಲ್ಲಿ ಸವಾಲು ಮತ್ತು ವೈವಿಧ್ಯತೆಯನ್ನು ಅಪೇಕ್ಷಿಸುತ್ತಾರೆ. ಅದನ್ನು ನ್ಯೂ ಕಾಲರ್ ಜಾಬ್ ನೀಡುತ್ತಿದೆ ಮತ್ತು ಒಳ್ಳೆಯ ವೇತನವನ್ನೂ ನೀಡುತ್ತದೆ. ಆದ್ದರಿಂದ ಅದಕ್ಕೆ ಬೇಕಾದ ಕೌಶಲಗಳನ್ನು ಪ್ರಾಥಮಿಕ ಹಂತದಲ್ಲಿಯೇ ನೀಡಬೇಕು. ಸಾಂಪ್ರದಾಯಿಕ ಶಿಕ್ಷಣದ ಜತೆ ವೃತ್ತಿಪರ ತರಬೇತಿಗಳನ್ನು ನೀಡಿದರೆ ಅಧುನಿಕ ಬುದ್ಧಿಮತ್ತೆಯ ಮುಂದೆ ಕಾಲರ್ ಎತ್ತಿ ನಿಲ್ಲಬಹುದು.

ಎಐ ಬಳಸಿ, ಇಲ್ಲ ಅಭಿವೃದ್ಧಿಪಡಿಸಿ!

ತಂತ್ರಜ್ಞಾನ ಅಪ್​ಗ್ರೇಡ್ ಆಗುತ್ತಿದೆ ಎಂದರೆ ಮನುಷ್ಯ ಕೂಡ ಅಪ್​ಡೇಟ್ ಆಗಬೇಕು. ಇಲ್ಲದೆ ಹೋದರೆ ಈ ಟೆಕ್ ಯುಗದಲ್ಲಿ ಕಳೆದು ಹೋಗುತ್ತೇವೆ. ಪ್ರತಿ ಸಾಮಾನ್ಯ ಉದ್ದೇಶದ ತಂತ್ರಜ್ಞಾನ (ಜಿಪಿಟಿ) ಆವಿಷ್ಕಾರವಾದಾಗ ಒಂದು ಉದ್ಯಮ ಕ್ಷೀಣಿಸುತ್ತದೆ, ಮತ್ತೊಂದು ಬೆಳೆಯಲು ಪ್ರಾರಂಭವಾಗುತ್ತದೆ. ಉದಾಹರಣೆಗೆ 18ನೇ ಶತಮಾನದಲ್ಲಿ ಸ್ಟೀಮ್ ಎಂಜಿನ್ ಆವಿಷ್ಕಾರವಾದಾಗ ಬಹಳಷ್ಟು ನೇಕಾರರು ಕೆಲಸ ಕಳೆದುಕೊಂಡರು. ಆದರೆ ಸಾರಿಗೆ ಉದ್ಯಮಕ್ಕೆ ಹೆಚ್ಚಿನ ಬಲ ಸಿಕ್ಕಿತು. ಅದೇ ರೀತಿ ಆಧುನಿಕ ಬುದ್ಧಿಮತ್ತೆ. ಅದನ್ನು ಸರಿಯಾಗಿ ಬಳಸಿಕೊಂಡು ಕೆಲಸ ಮಾಡಬೇಕು. ಇಲ್ಲ ಎಐ ಬೆಳೆಸಲು ಪ್ರಾರಂಭಿಸಬೇಕು. ಒಬ್ಬ ವ್ಯಕ್ತಿ ಚಾಟ್-ಜಿಪಿಟಿ ಸಹಾಯದಿಂದ ನಾಲ್ಕಾರು ಉದ್ಯೋಗಗಳನ್ನು ಮಾಡುತ್ತಿರುವ ಉದಾಹರಣೆಗಳಿವೆ. ಬರವಣಿಗೆ, ಗ್ರಾಫಿಕ್ ವಿನ್ಯಾಸ, ಚಿತ್ರಕಲೆ ಮುಂತಾದ ಹಲವಾರು ಕ್ಷೇತ್ರದಲ್ಲಿ ಆಧುನಿಕ ಬುದ್ಧಿಮತ್ತೆ ಪ್ರಭಾವ ಬೀರಲು ಶುರು ಮಾಡಿದೆ. ಆದರೆ ಇದರ ಪ್ರಯೋಜನ ಪಡೆದುಕೊಂಡು ನಮ್ಮ ವಿನ್ಯಾಸ/ಬರಹ ಅಭಿವೃದ್ಧಿ ಪಡಿಸಬಹುದು. ಈ ರೀತಿ ಸಕಾರಾತ್ಮಕವಾಗಿ ಬಳಸಿದಾಗ ಉದ್ಯಮವೂ ಬೆಳೆಯುತ್ತದೆ ತಂತ್ರಜ್ಞಾನಕ್ಕೂ ಗೌರವ ಸಲ್ಲುತ್ತದೆ.

ನಿರುದ್ಯೋಗಮುಕ್ತರಾಗಲು ಇತ್ತ ಗಮನ ಹರಿಸಿ

ಸೌರ ಫಲಕ, ವಿಂಡ್ ಟರ್ಬೆನ್ ಮತ್ತು ಹೀಟ್ ಪಂಪ್ ಸ್ಥಾಪಕರು ಅಥವಾ ನೇಚರ್ ರಿಸರ್ವ್​ಗಳಲ್ಲಿ ಕೆಲಸ ಮಾಡುವ ಸಂರಕ್ಷಣಾಕಾರರು ಹಸಿರು ಕಾಲರ್ ಕೆಳಗೆ ಬರುತ್ತಾರೆ. ಆದರೆ ಇದು ಇಷ್ಟಕ್ಕೆ ಸೀಮಿತವಲ್ಲ. ಎಲೆಕ್ಟ್ರಿಕ್ ಸ್ಕೂಟರ್ ವಿನ್ಯಾಸದಲ್ಲಿ ಕೆಲಸ ಮಾಡುವವರು ಕೂಡ ಹಸಿರು ಉದ್ಯೋಗದ ಕೆಳಗೆ ಬರುತ್ತಾರೆ. ಈ ಕ್ಷೇತ್ರದ ಕೆಳಗೆ ಬರುವವರಿಗೆ ಪರಿಸರದ ಜ್ಞಾನ ಉತ್ತಮವಾಗಿರಬೇಕು. ಉದ್ಯೋಗ ಮಾರುಕಟ್ಟೆಯಲ್ಲಿ ಕೃಷಿ ಕ್ಷೇತ್ರ ಕೂಡ ಹೆಚ್ಚಾಗಿ ಬೆಳೆಯುತ್ತಿದೆ. ವೃತ್ತಿಪರ ಕೃಷಿಕರು ಮತ್ತು ಕೃಷಿ ಸಲಕರಣೆಗಳ ನಿರ್ವಾಹಕ ಉದ್ಯೋಗಗಳು ಶೇ.30 ಹೆಚ್ಚಾಗಿ 3 ದಶಲಕ್ಷ ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಆದರೆ ಹಸಿರು ಉದ್ಯೋಗದಲ್ಲಿ ಸೌರ ಸಲಹೆಗಾರರು ಮತ್ತು ಸುಸ್ಥಿರತೆ ವ್ಯವಸ್ಥಾಪಕರು ಹಸಿರು ಕೌಶಲ್ಯಗಳ ವ್ಯಾಪಕ ಜ್ಞಾನ ಬೇಡುವ ಉದ್ಯೋಗಗಳಾಗಿವೆ. ಆದರೆ 2021ರಲ್ಲಿ ಕೇವಲ ಶೇ. 1ರಷ್ಟು ಜಾಗತಿಕ ನೇಮಕಾತಿಗಳ ಆಗಿವೆ ಎಂದು ವೃತ್ತಿಪರ ನೆಟ್​ವರ್ಕಿಂಗ್ ಪ್ಲಾ್ಯಟ್​ಫಾಮ್ರ್ ಲಿಂಕ್ಡ್​ಇನ್ ಹೇಳುತ್ತದೆ. ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ ನಿರುದ್ಯೋಗ ಸಮಸ್ಯೆ ನಿವಾರಿಸಬಹುದು ಮತ್ತು ನೈಸರ್ಗಿಕ ಸಂಪನ್ಮೂಲವನ್ನು ಉತ್ತಮವಾಗಿ ಬಳಸಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net