5ಜಿ ಮೊಬೈಲ್​ನಿಂದ ಕ್ಯಾನ್ಸರ್…! ಇದು ನಿಜವೇ?

New Project (6)
Published on

ಬೆಂಗಳೂರು: ರಾತ್ರಿ ಮಲಗುವಾಗ ಮೊಬೈಲ್ ಅನ್ನು ತಲೆಯ ಹತ್ತಿರ ಇಟ್ಟುಕೊಂಡರೆ ಅಥವಾ ಜೇಬಿನಲ್ಲಿ ಹೆಚ್ಚು ಹೊತ್ತು ಇಟ್ಟುಕೊಂಡರೆ ಕ್ಯಾನ್ಸರ್ ಬರುತ್ತದೆ ಎಂದು ಹೇಳುವುದು ಸರ್ವೇ ಸಾಮಾನ್ಯ. ಈಗ ಮತ್ತೊಂದು ಆತಂಕ ಶುರುವಾಗಿದೆ. ಈಗಾಗಲೇ ಭಾರತದಲ್ಲಿ 5ಜಿ ಇಂಟರ್ನೆಟ್ ಆರಂಭವಾಗಿದೆ. ಅದರೊಂದಿಗೆ ಅದರ ಬಗ್ಗೆ ಟೀಕೆಗಳು ಕೂಡ ಕೇಳಿಬರುತ್ತಿವೆ. ಈಗಾಗಲೇ ಬಳಕೆಯಲ್ಲಿರುವ 4ಜಿ ನೆಟ್​ವರ್ಕ್​ಗೆ ಹೋಲಿಸಿದರೆ 5ಜಿ ನೆಟ್​ವರ್ಕ್​ ಸುಮಾರು 5 ರಿಂದ 10 ಪಟ್ಟು ಚುರುಕಾಗಿದೆ.


ಆದರೆ 5ಜಿ ನೆಟ್​ವರ್ಕ್​ನಿಂದ ಬರುವ ರೇಡಿಯೇಷನ್​ ಮನುಷ್ಯನ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಳವಳ ವ್ಯಕ್ತವಾಗುತ್ತಿದೆ. 5ಜಿ ನೆಟ್​ವರ್ಕ್​ ಲಾಂಚ್ ಮಾಡುತ್ತಿರುವುದನ್ನೇ ಕೆಲವು ಪರಿಸರವಾದಿಗಳು ವಿರೋಧಿಸುತ್ತಿದ್ದಾರೆ. ಕಾರಣವೇನೆಂದರೆ 5ಜಿ ನೆಟ್​ವರ್ಕ್​ವುಳ್ಳ ಮೊಬೈಲ್ ಫೋನ್​ನಿಂದ ಹುಟ್ಟುವ ರೇಡಿಯೇಷನ್​ನಿಂದ ಕ್ಯಾನ್ಸರ್ ಸಂಭವಿಸಬಹುದು ಎಂಬುದು ಅವರ ಆತಂಕ. ಕೆಲವು ಪರಿಣಿತರ ಪ್ರಕಾರ ಗಿಗಾಹರ್ಟ್ಜ್​ (GHz) ಹೆಚ್ಚಿರುವುದರಿಂದ ಕ್ಯಾನ್ಸರ್ ಆಗುವ ಅಪಾಯವಿದೆ.


'5ಜಿ ನೆಟ್​ವರ್ಕ್​ನ ಮೊಬೈಲ್ ಫೋನ್​ನಿಂದ ಹುಟ್ಟುವ ರೇಡಿಯೇಷನ್​ ಮನುಷ್ಯರಲ್ಲಿ ಕ್ಯಾನ್ಸರ್​ಗೆ ಕಾರಣವಾಗುತ್ತದೆ' ಎಂಬ ಥಿಯರಿಯನ್ನು ಮುಂಬೈ ಆಸ್ಪತ್ರೆಯ ಡಾ. ಡೆಲ್ನಾಜ್ ದಭರ್​ ತಳ್ಳಿ ಹಾಕಿದ್ದಾರೆ. 4ಜಿ ಅಥವಾ 5ಜಿ ನೆಟ್​ವರ್ಕ್​ನ ಮೊಬೈಲ್ ಫೋನ್​ನಿಂದ ಹುಟ್ಟುವ ನಾನ್ - ಅಯೋನೈಸಿಂಗ್ ರೇಡಿಯೇಷನ್​ ಮೈಕ್ರೋವೇವ್​ನಿಂದ ಹುಟ್ಟುವ ರೇಡಿಯೇಷನ್ ರೀತಿಯಲ್ಲೇ ಇರುತ್ತದೆ. ಇದರಿಂದ ಮನುಷ್ಯನ ದೇಹಕ್ಕೆ ಯಾವುದೇ ಅಪಾಯವಿಲ್ಲ ಎಂಬುದು ಅವರ ಅಭಿಮತ.


ಇಂಡಿಯನ್ ಜರ್ನಲ್​ ಆಫ್ ಆಕ್ಯುಪೇಷನಲ್ ಅಂಡ್ ಎನ್ವಿರಾನ್ಮೆಂಟಲ್ ಮೆಡಿಸಿನ್​ ಪ್ರಕಾರ 'ಮೊಬೈಲ್ ಫೋನ್​ನಿಂದ ಹುಟ್ಟುವ ರೇಡಿಯೇಷನ್​ನಿಂದ​ ಮನುಷ್ಯನ ದೇಹಕ್ಕೆ ಯಾವುದೇ ಹಾನಿ ಇಲ್ಲ. ಅದೊಂದು ತಪ್ಪು ಕಲ್ಪನೆ.' ಹಲವು ಪರಿಣಿತರು ನಂಬಿರುವುದೇನೆಂದರೆ ಅಯೋನೈಸಿಂಗ್ ರೇಡಿಯೇಷನ್​ನಿಂದ ಕ್ಯಾನ್ಸರ್ ಬರುತ್ತದೆ, ಆದರೆ ಮೊಬೈಲ್ ಫೋನ್​ನಿಂದ ಹುಟ್ಟುವ ರೇಡಿಯೇಷನ್​ನಿಂದಲ್ಲ.


ಮೊಬೈಲ್ ಫೋನ್​ನಿಂದ ಹುಟ್ಟುವ ರೇಡಿಯೇಷನ್​ನಿಂದ​ ಮನುಷ್ಯನ ದೇಹಕ್ಕೆ ಯಾವುದೇ ಹಾನಿ ಇಲ್ಲ ಎಂಬುದನ್ನು ಈ ದಿನದವರೆಗೆ ಆಗಿರುವ ಎಲ್ಲಾ ಸಂಶೋಧನೆಗಳು ಸ್ಪಷ್ಟವಾಗಿ ತಿಳಿಸಿವೆ. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net