ಅಭಿವೃದ್ಧಿ ಕಾಣದ ದೊಡ್ಡಹಿತ್ಲು ತೋಡು

gan-10
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ದೊಡ್ಡಹಿತ್ಲು (ಪಂಜುರ್ಲಿ) ತೋಡು ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ ವಿಚಾರ ಚುನಾವಾಣೆ ಎದುರಾದಾಗಲೆಲ್ಲಾ ಮುನ್ನೆಲೆಗೆ ಬರುತ್ತಿದ್ದು, ಬಳಿಕ ನನೆಗುದಿಗೆ ಬೀಳುತ್ತಿದೆ. ಅಭಿವೃದ್ಧಿ ಕುರಿತು ಇದುವರೆಗೆ ಯಾವುದೇ ಸರ್ಕಾರ ಮನ್ನಣೆ ನೀಡಿಲ್ಲ.

ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಹಿತ್ಲು ತೋಡಿನಲ್ಲಿ ತ್ಯಾಜದ ದುರ್ನಾತ ನಿತ್ಯವೂ ಸ್ಥಳೀಯರನ್ನು ಹೈರಾಣಾಗಿಸುತ್ತಿದೆ. ಗಂಗೊಳ್ಳಿಯ ಪ್ರಮುಖ ಚರಂಡಿಗಳ ಮೂಲಕ ಹರಿದು ಬರುವ ಮಳೆ ನೀರು ದೊಡ್ಡಹಿತ್ಲು ಚರಂಡಿ ಮೂಲಕ ನದಿ ಸೇರುತ್ತದೆ. ಈ ಚರಂಡಿಯೇ ಈಗ ಕೊಂಪೆಯಾಗಿ ಬದಲಾಗಿದ್ದು, ಸೊಳ್ಳೆ ಉಪಟಳದಿಂದ ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಮೂಡಿದೆ.

ದಶಕಗಳಿಂದ ಚರಂಡಿ ದುರಸ್ತಿ ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ಕ್ಷೇತ್ರದ ಜನರು ಬೇಡಿಕೆ ಇಡುತ್ತಲೇ ಇದ್ದು, ದುರಸ್ತಿ ಮಾತ್ರ ಮರೀಚಿಕೆಯಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಂತೆ ಮಾಡಿ ಆಶ್ವಾಸನೆ ನೀಡಿ ಹೋಗುತ್ತಾರೆ. ಆದರೆ ಭರವಸೆ ಮಾತ್ರ ಹುಸಿಯಾಗಿದೆ ಎಂದು ದೊಡ್ಡಹಿತ್ಲು ಜನತೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ದೊಡ್ಡ ಮಟ್ಟದ ಹೋರಾಟ: ಫೆಬ್ರವರಿಯಲ್ಲಿ ಸ್ಥಳೀಯರು ರಸ್ತೆತಡೆ ನಡೆಸಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ್ದ ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ ಮತ್ತು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಪಂಜುರ್ಲಿ ತೋಡು ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಬಳಸಿ ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದರು. ಪ್ರತಿಭಟನೆ ನಡೆದು ಎಂಟು ತಿಂಗಳು ಕಳೆದರೂ ತೋಡು ಅಭಿವೃದ್ಧಿ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ದೊಡ್ಡ ಮಟ್ಟದ ಹೋರಾಟ ಸಂಘಟಿಸಲು ತಯಾರಿ ನಡೆಸಲಾಗುತ್ತಿದ್ದು, ಸುತ್ತಮುತ್ತಲ ಗ್ರಾಮಸ್ಥರಿಂದ ಬೆಂಬಲ ದೊರೆತಿದೆ.

ಬೇರೆಡೆಗೆ ಅನುದಾನ ಬಳಕೆ?

ಹಿಂದಿನ ಸರ್ಕಾರ ಆಡಳಿತದಲ್ಲಿ ಕೆರೆ ದಂಡೆ ನಿರ್ಮಾಣ ಯೋಜನೆಯಡಿ ಸಣ್ಣ ನೀರಾವರಿ ಇಲಾಖೆಯ ಮೂಲಕ ದೊಡ್ಡಹಿತ್ಲು ಚರಂಡಿ ಅಭಿವೃದ್ಧಿಗೆ 40 ಲಕ್ಷ ರೂ., ವಿಧಾನ ಪರಿಷತ್ ಸದಸ್ಯರ ನಿಧಿಯಲ್ಲಿ 50 ಲಕ್ಷ ರೂ. ಅನುದಾನ ಮೀಸಲಿಡಲಾಗಿತ್ತು. ಆದರೆ ಮೀಸಲಿಟ್ಟಿದ್ದ ಅನುದಾನ ಬೇರೆ ಇಲಾಖೆಗೆ ವರ್ಗಾಯಿಸಲ್ಪಟ್ಟಿದೆ ಎಂಬ ಆರೋಪ ವ್ಯಕ್ತವಾಗಿದೆ.

ಚರಂಡಿ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ ನಡೆದು ವರ್ಷವೇ ಕಳೆದಿದ್ದು, ತೋಡು ಅಭಿವೃದ್ಧಿ ಬಗ್ಗೆ ಇದುವರೆಗೆ ಕ್ರಮಕೈಗೊಂಡಿಲ್ಲ. ದೊಡ್ಡಹಿತ್ಲು ತೋಡು ಅಭಿವೃದ್ಧಿಗೆ ಕ್ರಮಕೈಗೊಳ್ಳದಿದ್ದರೆ, ಉಗ್ರ ಹೋರಾಟ ನಡೆಸುತ್ತೇವೆ. ಸರ್ಕಾರ ಹಾಗೂ ಜನಪ್ರತಿನಿಧಿಗಳ ಕಾರ್ಯಕ್ರಮಗಳನ್ನು ಬಹಿಷ್ಕರಿಸುತ್ತೇವೆ. ನವೀನ್ ಗಂಗೊಳ್ಳಿ, ಸಾಮಾಜಿಕ ಹೋರಾಟಗಾರ

ಪಾಯಿಂಟ್ಸ್

* ಜನಪ್ರತಿನಿಧಿಗಳು ನೀಡಿದ ಭರವಸೆ ಈಡೇರಿಲ್ಲ *ತ್ಯಾಜ್ಯ ಅಸಮಪರ್ಕ ನಿರ್ವಹಣೆ, ಸೊಳ್ಳೆ ಉತ್ಪತ್ತಿ*ದೊಡ್ಡ ಮಟ್ಟದ ಹೋರಾಟಕ್ಕೆ ಸ್ಥಳೀಯರ ತಯಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net