

ಬೆಂಗಳೂರು: ಅದು ರಾಷ್ಟ್ರೀಯ ತಂಡದಲ್ಲಿ ಅರ್ಧ ಡಜನ್‌ಗಟ್ಟಲೇ ಕನ್ನಡಿಗರು ಆಡುತ್ತಿದ್ದ ಕಾಲ. ಅದರಲ್ಲೂ ಸಂಪೂರ್ಣ ಬೌಲಿಂಗ್ ವಿಭಾಗವನ್ನು ನಿಭಾಯಿಸುವ ಮೂಲಕ ಇಡೀ ತಂಡಕ್ಕೆ ಕನ್ನಡಿಗರು ಆಸರೆಯಾಗಿದ್ದರು. ಆ ವೇಳೆಗೆ ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್‌ರಂಥ ಬೌಲರ್‌ಗಳು ರಾಷ್ಟ್ರೀಯ ತಂಡದಲ್ಲಿ ಕಾಯಂ ಸ್ಥಾನ ಮಾಡಿಕೊಂಡಿದ್ದರೆ, ಅದೇ ವೇಳೆ 1996ರಲ್ಲಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್, ಸುನೀಲ್ ಜೋಶಿ, ಡೇವಿಡ್ ಜಾನ್ಸನ್ ಹಾಗೂ ದೊಡ್ಡ ಗಣೇಶ್ ರಾಷ್ಟ್ರೀಯ ತಂಡಕ್ಕೆ ಎಂಟ್ರಿ ಕೊಟ್ಟರು. ಹೀಗೆ ಸಾಲು ಸಾಲಾಗಿ ಕನ್ನಡಿಗರು ರಾಷ್ಟ್ರೀಯ ತಂಡದ ಕದ ತಟ್ಟಿದ್ದು ಇತಿಹಾಸ. ಆ ಸಮಯದಲ್ಲಿ ಗಣೇಶ್ ಎಂಬ ಹೆಸರಿನ ಪರಿಚಯದೊಂದಿಗೆ ರಾಷ್ಟ್ರೀಯ ತಂಡಕ್ಕೆ ಪ್ರವೇಶ ಪಡೆದಿದ್ದ ಪೀಣ್ಯದ ವೇಗದ ಬೌಲರ್, ದಕ್ಷಿಣ ಆಫ್ರಿಕಾ ಪ್ರವಾಸದಿಂದ ಮರಳುವ ವೇಳೆ ದೊಡ್ಡ ಗಣೇಶ್ ಆಗಿದ್ದರು! ಇದರ ಗುಟ್ಟನ್ನು ಈಗ 46 ವರ್ಷದ ದೊಡ್ಡ ಗಣೇಶ್ ಅವರೇ ಬಿಚ್ಚಿಟ್ಟಿದ್ದಾರೆ.
ಹೆಸರು ನೀಡಿದ ಬಾಯ್ಕಟ್...
1996-97ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಡಿದ ದೊಡ್ಡನರಸಯ್ಯ ಗಣೇಶ್ ಅವರನ್ನು, ಅಲ್ಲಿಂದ ವಾಪಸ್ ಬಂದ್ಮೇಲೆ ಎಲ್ಲರೂ ‘ದೊಡ್ಡ....ದೊಡ್ಡ’ ಎಂದು ಕರೆಯಲು ಶುರುಮಾಡಿದ್ದರು. ಇದಕ್ಕೆ ಕಾರಣ ಅಂದಿನ ಪಂದ್ಯದಲ್ಲಿ ವೀಕ್ಷಕ ವಿವರಣೆಗಾರರಾಗಿದ್ದ ಇಂಗ್ಲೆಂಡ್‌ನ ಸರ್ ಜೆಫ್ರಿ ಬಾಯ್ಕಟ್! ಹಾಲಿ ಗೋವಾ ತಂಡದ ಕೋಚ್ ಆಗಿರುವ ದೊಡ್ಡ ಗಣೇಶ್ ಹೇಳಿಕೊಂಡಿರುವಂತೆ, ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿದ್ದ ಜೆಫ್ರಿ ಬಾಯ್ಕಟ್‌ಗೆ ಅವರ ಹೆಸರನ್ನು ದೊಡ್ಡನರಸಯ್ಯ ಗಣೇಶ್ ಎಂದು ಉಚ್ಛರಿಸಲು ಸಾಧ್ಯವಾಗದೆ, ನರಸಯ್ಯ ಎಂಬುದನ್ನು ಬಿಟ್ಟು ಕೇವಲ ‘ದೊಡ್ಡ ಗಣೇಶ್’ ಎಂದು ಕರೆದಿದ್ದರು. ಅಲ್ಲಿಂದ ತಂಡದ ಸಹಪಾಠಿಗಳು ಕೂಡ ದೊಡ್ಡ ಗಣೇಶ್ ಎಂದು ಕರೆದಿದ್ದಲ್ಲದೆ, ಮತ್ತಷ್ಟು ಸುಲಭವಾಗಿ ಕೇವಲ ‘ದೊಡ್ಡ ದೊಡ್ಡ’ ಎಂದು ಕರೆದರಂತೆ. ಕರ್ನಾಟಕ ಕ್ರಿಕೆಟ್ ವಲಯದಲ್ಲಿ ಈಗ ‘ದೊಡ್ಡ’ ಎಂದೇ ಚಿರಪರಿಚರಾಗಿದ್ದಾರೆ ದೊಡ್ಡ ಗಣೇಶ್...
ದೊಡ್ಡ ಗಣೇಶ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚದಿದ್ದರೂ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದವರು. ಮಧ್ಯಮ ವೇಗಿಯಾಗಿದ್ದ ದೊಡ್ಡ ಗಣೇಶ್ 4 ಟೆಸ್ಟ್ ಪಂದ್ಯಗಳಿಂದ 5 ವಿಕೆಟ್ ಕಬಳಿಸಿದರೆ, ಏಕೈಕ ಏಕದಿನ ಪಂದ್ಯದಿಂದ 1 ವಿಕೆಟ್ ಪಡೆದಿದ್ದರು. 104 ಪ್ರಥಮ ದರ್ಜೆ ಪಂದ್ಯಗಳಿಂದ 365 ವಿಕೆಟ್, 89 ಲಿಸ್ಟ್ ಎ ಪಂದ್ಯಗಳಿಂದ 128 ವಿಕೆಟ್ ಪಡೆದಿದ್ದಾರೆ. ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಬಳಿಕ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್‌ಡಿ ದೇವೇಗೌಡ ಮಾರ್ಗದರ್ಶನದಲ್ಲಿ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ.