2 ವರ್ಷದ ಮಗುವಿನ ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡುವ ಬದಲು ಸುನ್ನತಿ ಮಾಡಿದ್ರಾ ವೈದ್ಯರು?!

doctor
Published on

ಉತ್ತರಪ್ರದೇಶ: ಎರಡೂವರೆ ವರ್ಷದ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡುವ ಬದಲು ಸುನ್ನತಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದ ನಂತರ ಉತ್ತರಪ್ರದೇಶ ಸರ್ಕಾರವು ಆರೋಗ್ಯ ಇಲಾಖೆಯ ತನಿಖಾ ತಂಡವನ್ನು ಎಂ ಖಾನ್ ಎಂಬ ಆಸ್ಪತ್ರೆಗೆ ಕಳುಹಿಸಿದೆ.

ಆರೋಗ್ಯ ಸಚಿವರೂ ಆಗಿರುವ ಉತ್ತರಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರು ಶನಿವಾರ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸಲು ಆರೋಗ್ಯ ಇಲಾಖೆಯ ತನಿಖಾ ತಂಡವನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಆರೋಪಗಳು ನಿಜವೆಂದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

"ದೂರು ಸರಿಯಾಗಿದೆ ಎಂದು ಕಂಡುಬಂದರೆ, ತಪ್ಪಿತಸ್ಥ ವೈದ್ಯರು ಮತ್ತು ಆಸ್ಪತ್ರೆ ನಿರ್ವಹಣೆಯ ವಿರುದ್ಧ ಎಫ್ಐಆರ್ ದಾಖಲಿಸಲು, ತಕ್ಷಣದಿಂದ ಜಾರಿಗೆ ಬರುವಂತೆ ಆಸ್ಪತ್ರೆಯ ನೋಂದಣಿಯನ್ನು ರದ್ದುಗೊಳಿಸಲು ಮತ್ತು 24 ಗಂಟೆಗಳ ಒಳಗೆ ವಿಚಾರಣೆಯ ಸಂಪೂರ್ಣ ವರದಿಯನ್ನು ಲಭ್ಯವಾಗುವಂತೆ ಬರೇಲಿಯ ಸಿಎಂಒಗೆ ಆದೇಶ ನೀಡಲಾಗಿದೆ. ತನಿಖಾ ವರದಿಯ ಆಧಾರದ ಮೇಲೆ ಸದರಿ ಆಸ್ಪತ್ರೆಯನ್ನು ಅಗತ್ಯ ಬಿದ್ದಲ್ಲಿ ಮುಚ್ಚಲಾಗುವುದು" ಎಂದು ಅವರು ಹೇಳಿದ್ದಾರೆ.

ಬರೇಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿವಕಾಂತ್ ದ್ವಿವೇದಿ ಅವರು ಭಾನುವಾರ ಮುಖ್ಯ ವೈದ್ಯಕೀಯ ಅಧಿಕಾರಿ ರಚಿಸಿದ ಮೂವರು ಸದಸ್ಯರ ತನಿಖಾ ತಂಡದ ವರದಿ ಬಂದ ನಂತರವೇ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಘಟನೆ ನಡೆದ ದಿನವಾದ ಶುಕ್ರವಾರ ಈ ತಂಡವನ್ನು ರಚಿಸಲಾಗಿದೆ. ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಬಲ್ಬೀರ್ ಸಿಂಗ್ ಅವರ ಪ್ರಕಾರ, ಕುಟುಂಬವು ಮಗುವಿನ ಚಿಕಿತ್ಸೆಗಾಗಿ ಎಂ ಖಾನ್ ಆಸ್ಪತ್ರೆಗೆ ಹೋಗಿತ್ತು. ಅಲ್ಲಿ ಅವರ ಮಗುವಿಗೆ ನಾಲಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಿಸುವಂತೆ ಸೂಚಿಸಲಾಯಿತು. ಶಸ್ತ್ರಚಿಕಿತ್ಸೆಯ ನಂತರ, ವೈದ್ಯರು ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡುವ ಬದಲು ಮಗುವಿಗೆ ಸುನ್ನತಿ ಮಾಡಿದ್ದಾರೆ ಎಂದು ಮಗುವಿನ ಕುಟುಂಬ ಆರೋಪಿಸಿದೆ.

ಈ ವಿಷಯವು ಹಿಂದೂ ಸಂಘಟನೆಗಳ ಸದಸ್ಯರು ಬಲವಾದ ಪ್ರತಿಕ್ರಿಯೆಯನ್ನು ನೀಡಿದ್ದು, ಪ್ರತಿಭಟನೆ ನಡೆಸಿ ಆಸ್ಪತ್ರೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯನ್ನು ನಿಯಂತ್ರಿಸಲು ಮತ್ತು ಪರಿಸ್ಥಿತಿ ಭುಗಿಲೇಳದಂತೆ ತಡೆಯಲು ಆಸ್ಪತ್ರೆಯ ಹೊರಗೆ ಪೊಲೀಸರನ್ನು ನಿಯೋಜಿಸಲಾಯಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net