ಭೀಮಾ ಕೃಷ್ಣಾ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಹಣಕಾಸಿನ ನೆರವು, ಸಿಎಂ ಸಭೆ ಕುರಿತು ಎಂ.ಬಿ. ಪಾಟೀಲ ಹೇಳಿದ್ದೇನು ಗೊತ್ತಾ?

CM MEETING SHUGAR FACTORY
ಬೆಂಗಳೂರಿನ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರು. ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಶಾಸಕ ಯಶವಂತರಾಯಗೌಡ ಪಾಟೀಲ ಮತ್ತಿತರರಿದ್ದಾರೆ.
Published on

ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿರುವ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ, ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಇಂಡಿ ತಾಲೂಕಿನ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಅಗತ್ಯವಿರುವ ಆರ್ಥಿಕ ನೆರವು ಹೇಗೆ ಒದಗಿಸಬೇಕು ಎನ್ನುವ ಬಗ್ಗೆ ಸರಿಯಾದ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿಯವರು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಒದಗಿಸಬೇಕಾದ ನೆರವು ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಇಂಥದ್ದೊಂದು ಸೂಚನೆ ಹೊರಬಿದ್ದಿರುವುದಾಗಿ ಸಚಿವರು ತಿಳಿಸಿದ್ದಾರೆ.

ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ನೆರವು ಬೇಕಾಗಿದೆ. ಅವಧಿ ಸಾಲ, ರೈತರಿಗೆ ಮಾಡಬೇಕಾದ ಹಣ ಪಾವತಿ, ಕಬ್ಬಿನ ಕಟಾವು, ಸಾಗಣೆ, ಸಕ್ಕರೆ ಮತ್ತು ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ವೆಚ್ಚಗಳ ಭಾರ ವಿಪರೀತವಾಗಿದೆ. ಈ ಕಾರ್ಖಾನೆಗಳಿಗೆ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ ಅಥವಾ ಬ್ಯಾಂಕ್ ಖಾತರಿ ಮೂಲಕ ಆರ್ಥಿಕ ಸಹಾಯ ದೊರಕಿಸಿ ಕೊಡಬೇಕೆಂದು ಸಭೆಯಲ್ಲಿ ಗಮನಕ್ಕೆ ತರಲಾಯಿತು. ಈ ಬಗ್ಗೆ ನಿಗಮದ ಜತೆಗೂ ಚರ್ಚಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದರು.

ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ 192 ಕೋಟಿ ರೂಪಾಯಿ ಮತ್ತು ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ 150 ಕೋಟಿ ರೂಪಾಯಿ ಹಾಗೂ ಭೀಮಾ ಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ 130 ಕೋಟಿ ರೂಪಾಯಿ ಬೇಕಾಗಿದೆ. ಇಷ್ಟು ನೆರವು ದೊರಕಿಸಿ ಕೊಟ್ಟರೆ, ವಿದ್ಯುತ್ ಉತ್ಪಾದನೆಯಿಂದ ಬರುವ ಹಣವನ್ನು ಸಾಲದ ಕಡೆಗೆ ಪಾವತಿಸಲು ಕಾರ್ಖಾನೆಗಳು ಆಸಕ್ತಿ ಹೊಂದಿವೆ ಎಂದು ಅವರು ನುಡಿದಿದ್ದಾರೆ.

ಕೃಷ್ಣಾ ಕಾರ್ಖಾನೆಯು 27 ಮೆಗಾವ್ಯಾಟ್ ಮತ್ತು ನಂದಿ ಕಾರ್ಖಾನೆಯು 37 ಮೆಗಾವ್ಯಾಟ್ ಸಾಮರ್ಥ್ಯದ ಸಹವಿದ್ಯುತ್ (ಕೋಜೆನ್) ಘಟಕ ಸ್ಥಾಪಿಸುವ ಆಸಕ್ತಿ ಹೊಂದಿವೆ. ಜೊತೆಗೆ ಕೃಷ್ಣಾ ಹಾಗೂ ಭೀಮಾ ಕಾರ್ಖಾನೆಯು ಎಥೆನಾಲ್ ಉತ್ಪಾದನಾ ಘಟಕವನ್ನೂ ಸ್ಥಾಪಿಸಲು ಮುಂದಾಗಿದೆ. ಸಹಕಾರಿ ತತ್ವದ ಆಧಾರದ ಮೇಲೆ ನಡೆಯುತ್ತಿರುವ ಈ ಕಾರ್ಖಾನೆಗಳ ಪುನಶ್ಚೇತನ ಸಮರ್ಪಕವಾಗಿ ನಡೆಯಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಈ ಸಂಬಂಧ ಸಕ್ಕರೆ ಆಯುಕ್ತರು ಮತ್ತು ಎನ್‌ಸಿಡಿಸಿ ಅಧಿಕಾರಿಗಳ ಜತೆ ಸಮಗ್ರವಾಗಿ ಚರ್ಚಿಸಿ, ಸಮರ್ಪಕ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಈ ಎರಡೂ ಕಾರ್ಖಾನೆಗಳಿಗೆ ಸರ್ಕಾರದ ಕಡೆಯಿಂದ ಸಕಾಲಿಕ ನೆರವು ಸಿಗುವಂತೆ ಮಾಡಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುವುದು ಎಂದು ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಚಿವರಾದ ಎಚ್.ಕೆ. ಪಾಟೀಲ, ಶಿವಾನಂದ ಪಾಟೀಲ, ಎಚ್.ಸಿ. ಮಹದೇವಪ್ಪ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಬೀಳಗಿ ಶಾಸಕ ಜೆ.ಟಿ. ಪಾಟೀಲ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಹಣಕಾಸು ಇಲಾಖೆಯ ಕಾರ್ಯದರ್ಶಿ ಪಿ.ಸಿ. ಜಾಫರ್, ನಂದಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕುಮಾರ ದೇಸಾಯಿ ಜೈನಾಪುರ, ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜಗೋಪಾಲ ಮತ್ತಿತರರು ಇದ್ದರೆಂದು ಸಚಿವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net